ಚುನಾವಣಾ ಕರ್ತವ್ಯದಲ್ಲಿ ಯಾವುದೇ ಲೋಪದೋಷ ಕಂಡುಬಂದರೆ ಕ್ರಮ: ಬೆಳಗಾವಿ ಡಿಸಿ ಎಚ್ಚರಿಕೆ

Share the Post Now

ಬೆಳಗಾವಿ

ವಿಧಾನಸಭೆ ಚುನಾವಣೆ: ತೀವ್ರ ನಿಗಾ ವಹಿಸಲು ನಿರ್ದೇಶನ

ಚುನಾವಣಾ ಕರ್ತವ್ಯದಲ್ಲಿ ಯಾವುದೇ ರೀತಿಯ ಲೋಪದೋಷ ಉಂಟಾಗದಂತೆ ಜಾಗರೂಕತೆಯಿಂದ ಹಾಗೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾಗಬಹುದು. ಆದ್ದರಿಂದ ಎಲ್ಲ ನೋಡಲ್ ಅಧಿಕಾರಿಗಳು ಮತ್ತು ತಂಡಗಳು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದರು.

ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಶನಿವಾರ(ಮಾ.18) ಏರ್ಪಡಿಸಲಾಗಿದ್ದ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಮತ್ತು ವಿವಿಧ ತಂಡಗಳ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಬೆಳಗಾವಿ ಗಡಿ‌ ಜಿಲ್ಲೆಯಾಗಿರುವುದರಿಂದ ಚುನಾವಣಾ ಸಂದರ್ಭದಲ್ಲಿ ನಗದು, ಮದ್ಯ ಸೇರಿದಂತೆ ವಿವಿಧ ಬಗೆಯ ವಸ್ತುಗಳನ್ನು ಅಕ್ರಮವಾಗಿ ರಾಜ್ಯದ ಇತರೆ ಜಿಲ್ಲೆಗಳಿಗೂ ಸಾಗಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ನಿಗಾ ವಹಿಸಬೇಕು.

ಯಾವುದೇ ರೀತಿಯ ಅಕ್ರಮ ಅಥವಾ ನೀತಿಸಂಹಿತೆ ಉಲ್ಲಂಘನೆ ಕಂಡುಬಂದಾಗ ಫ್ಲೈಯಿಂಗ್ ಸ್ಕ್ವಾಡ್ ಟೀಮ್(ಎಫ್.ಎಸ್.ಟಿ), ಸ್ಟ್ಯಾಟಿಕ್ ಸರ್ವೆಲನ್ಸ್ ಟೀಮ್(ಎಸ್.ಎಸ್.ಟಿ), ವಿಡಿಯೋ ವೀವಿಂಗ್ ಟೀಮ್(ವಿ.ಎಸ್.ಟಿ) ಸೇರಿದಂತೆ ಎಲ್ಲಾ ತಂಡಗಳು ಕೂಡಲೇ ಸ್ಪಂದಿಸಬೇಕು.
24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಮೂರು ಪಾಳಿಯಲ್ಲಿ ತಂಡಗಳನ್ನು ನಿಯೋಜಿಸಲಾಗುವುದು.



ಘಟನೆ ಮತ್ತು ಪ್ರಕರಣದ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಬೇಕು. ವಿಡಿಯೋ ಚಿತ್ರೀಕರಣ ಮಾಡಿಕೊಂಡು ಖಚಿತ ದಾಖಲೆಗಳೊಂದಿಗೆ ಪ್ರಕರಣವನ್ನು ದಾಖಲಿಸಬೇಕು.
ಈ ತಂಡಗಳಿಗೆ ಅಗತ್ಯ ಅಧಿಕಾರ ಮತ್ತು ಪರಿಕರಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ನಗದು, ಮದ್ಯ ಅಥವಾ ಬೆಲೆಬಾಳುವ ವಸ್ತುಗಳು ದೊಡ್ಡ ಪ್ರಮಾಣದಲ್ಲಿ ವಶಪಡಿಸಿಕೊಂಡ ತಕ್ಷಣವೇ ಚುನಾವಣಾಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು.

ಕರ್ತವ್ಯಲೋಪ ಎಸಗಿದರೆ ಕಠಿಣ ಕ್ರಮ-ಎಚ್ಚರಿಕೆ:

ಯಾವುದೇ ವ್ಯಕ್ತಿ ಅಥವಾ ಪಕ್ಷಗಳ ಜತೆ ಗುರುತಿಸಿಕೊಳ್ಳದೇ ನಿಷ್ಪಕ್ಷಪಾತದಿಂದ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಒಂದು ವೇಳೆ ಲೋಪವೆಸಗಿದರೆ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಕರ್ತವ್ಯಲೋಪವನ್ನು ಆಯೋಗವು ಗಂಭೀರವಾಗಿ ಪರಿಗಣಿಸಲಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತುಕೊಂಡು ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕು.

ಇದೇ ರೀತಿ ‌ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಣೆಗೆ ಯಾರೇ ಅಡ್ಡಿಪಡಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಇಂತಹ ಘಟನೆ ನಡೆದಾಗ ಕೂಡಲೇ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.

ಚುನಾವಣಾ ಪ್ರಕ್ರಿಯೆ-23 ಸಾವಿರಕ್ಕೂ ಅಧಿಕ ಜನರು ಭಾಗಿ:

ಬೆಳಗಾವಿ ಜಿಲ್ಲೆಯ ಹದಿನೆಂಟು‌ ಮತಕ್ಷೇತ್ರಗಳಲ್ಲಿ ಒಟ್ಟಾರೆ 23 ಸಾವಿರಕ್ಕಿಂತ ಅಧಿಕ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಹಾಗೂ ವಿವಿಧ ತಂಡಗಳ ಸದಸ್ಯರೂ ಸೇರಿದಂತೆ ಪ್ರತಿಯೊಬ್ಬರಿಗೂ ಅವರವರ ಜವಾಬ್ದಾರಿ ತಿಳಿಸಿಕೊಡುವ ಉದ್ಧೇಶದಿಂದ ವಿವಿಧ ಹಂತಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಈ ಬಾರಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಅಧಿಕಾರಿಗಳ ವರ್ಗಾವಣೆ, ನಿಯೋಜನೆ, ತಂಡ ರಚನೆ ಮಾಡುವುದರ ಜತೆಗೆ ಅಗತ್ಯ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ವಿನಾಕಾರಣ ಜನಪ್ರತಿನಿಧಿಗಳು ಅಥವಾ ರಾಜಕೀಯ ಮುಖಂಡರನ್ನು ಭೇಟಿ ಮಾಡುವಂತಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರು ನಿಗಾ ವಹಿಸಬೇಕು.
ಕಚೇರಿಗೆ ಸಂಬಂಧಿಸಿದಂತೆ ಏನೇ ಕೆಲಸಗಳಿದ್ದರೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಬೇಕು ಎಂದರು.

ತಂಡಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು:

ಚುನಾವಣೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ತಂಡಗಳು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದರು.

ಫ್ಲ್ಯೈಯಿಂಗ್ ಸ್ಕ್ವಾಡ್(ಎಫ್.ಎಸ್.ಟಿ.), ಸ್ಟ್ಯಾಟಿಕ್ ಸರ್ವೆಲನ್ಸ್ ಟೀಮ್(ಎಸ್.ಎಸ್.ಟಿ), ವಿಡಿಯೋ ಸರ್ವೆಲನ್ಸ್ ಟೀಮ್(ವಿ.ಎಸ್.ಟಿ.), ವಿಡಿಯೋ ವೀವಿಂಗ್ ಟೀಮ್(ವಿ.ವಿ.ಟಿ)ಗಳನ್ನು ಈಗಾಗಲೇ ರಚಿಸಲಾಗಿರುವುದರಿಂದ ತಮ್ಮ ಕೆಲಸಗಳ ಬಗ್ಗೆ ತಿಳಿದುಕೊಳ್ಳಬೇಕು.

ಬೆಳಗಾವಿ ದೊಡ್ಡ ಜಿಲ್ಲೆ ಮತ್ತು ಗಡಿ ಜಿಲ್ಲೆಯಾಗಿರುವುದರಿಂದ ಎಲ್ಲ ತಂಡಗಳು ದಿನದ ಇಪ್ಪತ್ನಾಲ್ಕು ತಾಸು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ತಮಗೆ ವಹಿಸಿಸುವ ಕೆಲಸ ಮಹತ್ವ ಹಾಗೂ ಸ್ವರೂಪವನ್ನು ಸರಿಯಾಗಿ ತಿಳಿದುಕೊಂಡು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು.
ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಮಾಹಿತಿ ಬಂದರೆ ತಂಡಗಳು ಸಮಯ ವ್ಯರ್ಥ ಮಾಡದೇ ತಕ್ಷಣವೇ ಕಾರ್ಯಪ್ರವೃತ್ತಗೊಳ್ಳಬೇಕು.
ಏನೇ ಗೊಂದಲಗಳಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮುಂದುವರಿಯಬೇಕು ಎಂದು ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದರು.

ಗಡಿಭಾಗದಲ್ಲಿ ಚೆಕ್ ಪೋಸ್ಟ್ ಗಳಲ್ಲಿ ನಿಯೋಜಿಸಲಾಗಿರುವ ತಂಡಗಳು ಕಟ್ಟುನಿಟ್ಟಾಗಿ ಪ್ರತಿಯೊಂದು ವಾಹನವನ್ನು ಪರಿಶೀಲಿಸಬೇಕು.
ಮತದಾರರನ್ನು ಓಲೈಸಲು ಉಡುಗೊರೆಗಳು, ಸೀರೆ, ಗೃಹಬಳಕೆಯ ವಸ್ತುಗಳನ್ನು ಹಂಚುವುದು ಅಥವಾ ಯಾವುದೇ ರೀತಿಯ ಆಸೆ-ಆಮಿಷಗಳನ್ನು ಒಡ್ಡುವುದು ಕಂಡುಬಂದರೆ ಎಫ್.ಎಸ್.ಟಿ. ತಂಡದವರು ಕೂಡಲೇ ಪರಿಶೀಲನೆ ನಡೆಸಿ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಬೇಕು ಎಂದು ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಚುನಾವಣಾ ಕರ್ತವ್ಯದಲ್ಲಿ ನಿರತ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಗುರುತಿನಚೀಟಿಯನ್ನು ಧರಿಸಿರಬೇಕು ಎಂದು ಸೂಚನೆ ನೀಡಿದರು.
ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಪ್ರತಿಯೊಂದು ತಂಡ ಸಮರ್ಪಕವಾಗಿ ಕೆಲಸ ಮಾಡಬೇಕು ಎಂದರು.
ಚುನಾವಣಾಧಿಕಾರಿಗಳು ಚುನಾವಣಾ ಸಂದರ್ಭದಲ್ಲಿ ಪ್ರಚಾರ ಮತ್ತಿತರ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗ ಒಂದೇ ಸಮಯದಲ್ಲಿ ಎರಡು ಪಕ್ಷಗಳಿಗೆ ನೀಡುವ ಬದಲು ಸಮಯ ಹೊಂದಾಣಿಕೆ ಮಾಡಿ ಅನುಮತಿಯನ್ನು ನೀಡಬಹುದು ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ್ ಗಿತ್ತೆ, ಮತ್ತಿತರರು ಉಪಸ್ಥಿತರಿದ್ದರು.

ನಂತರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು, ವಿವಿಧ ಸಮಿತಿಯ ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಫ್ಲ್ಯೈಯಿಂಗ್ ಸ್ಕ್ವಾಡ್(ಎಫ್.ಎಸ್.ಟಿ.), ಸ್ಟ್ಯಾಟಿಕ್ ಸರ್ವೆಲನ್ಸ್ ಟೀಮ್(ಎಸ್.ಎಸ್.ಟಿ), ವಿಡಿಯೋ ವೀವಿಂಗ್ ಟೀಮ್(ವಿ.ಎಸ್.ಟಿ) ತಂಡಗಳ ಅಧಿಕಾರಿಗಳು, ಪೊಲೀಸ್, ಅಬಕಾರಿ, ಕಂದಾಯ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

error: Content is protected !!