ಬೆಳಗಾವಿ. ರಾಯಬಾಗ
🖊️ ಸಂಗಮೇಶ ಹಿರೇಮಠ.
ಮುಗಳಖೋಡದಲ್ಲಿ ಕೃಷಿ ಹಬ್ಬ ಕಾರ್ಯಕ್ರಮ,
ಕೃಷಿರತ್ನ ಪ್ರಶಸ್ತಿ, ಜಾನುವಾರಗಳ ಪ್ರದರ್ಶನ, ಆಡು, ಕುರಿ ಸಾಕಾಣಿಕೆ ಜೊತೆ ಸಾವಯವ ತರಬೇತಿ.
ಮುಗಳಖೋಡ: ಇಂದಿನ ಕೃಷಿ ಪ್ರಕ್ರಿಯೆಯಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಬೇಡಿಕೆಯಿದೆ. ಸಾವಯವ ಕೃಷಿಯು ಆಧುನಿಕ ಕೃಷಿ ವಿಧಾನ ಮಾತ್ರವಲ್ಲದೆ ಪರಿಸರಕ್ಕೆ ಅನುಕೂಲಕರವಾದ ಮತ್ತು ಅಪಾಯಕಾರಿಯಲ್ಲದ ಪ್ರಕ್ರಿಯೆಯಾಗಿದೆ ಎಂದು ಶೇಗುಣಸಿ ವಿರಕ್ತ ಮಠದ ಶ್ರೀ ಡಾ. ಮಹಾಂತ ದೇವರು ಹೇಳಿದರು.
ಅವರ ಮುಗಳಖೋಡ ಪಟ್ಟಣದ ಅರಭಾವಿ ಫೌಂಡೇಶನ್ ಕಡೆಯಿಂದ ಹಮ್ಮಿಕೊಂಡ ಸಾವಯವ ಕೃಷಿ ಹಬ್ಬ ಎಂಬ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಸಾವಯವ ಕೃಷಿಯು ಶತ ಶತಮಾನಗಳಿಂದ ಪೂರ್ವಜರು ನಡೆಸಿಕೊಂಡ ಬಂದ ಪದ್ಧತಿಯಾಗಿದ್ದು, ಇದು ರಾಸಾಯನಿಕ ಗೊಬ್ಬರಗಳಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳನ್ನು ನಿಯಂತ್ರಿಸುವ, ಪರಿಸರ ಆಧಾರಿತ ಉತ್ಪನ್ನಗಳನ್ನು ಬಳಸುತ್ತದೆ. ಸಾವಯವ ಕೃಷಿ ಪದ್ಧತಿಯು ಕಳೆ, ಕೀಟ ಮತ್ತು ರೋಗ ನಿಯಂತ್ರಣದಂತಹ ವಿಧಾನಗಳನ್ನು ಒಳಗೊಂಡಿದೆ. ಪ್ರತಿಯೊಬ್ಬರೂ ಸಾವಯವ ಬೆಳೆಯ ಅಹಾರ ಪದ್ಧತಿಯನ್ನು ಅಳವಡಿಕೆ ಮಾಡಿಕೊಳ್ಳಿ, ತಮ್ಮ ತಮ್ಮ ಆಯುಷ್ಯ ಕೂಡಾ ಹೆಚ್ಚಾಗುತ್ತದೆ ಎಂದು ಅಹಾರದಲ್ಲಿನ ಮಹತ್ವವನ್ನು ತಿಳಿಸಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಡಾ. ಮಹಾದೇವ ಪಾಟೀಲ್ ಸಾವಯವ ಕೃಷಿಯಿಂದ ಆಗುವ ಪ್ರಯೋಜನ, ಅನಾನುಕೂಲಗಳು, ವಿವಿಧ ಪ್ರಕಾರಗಳು ಹಾಗೂ ಸಾವಯವ ಕೃಷಿಗೆ ಅನುಸರಿಸಿದ ವಿಧಾನ ತಂತ್ರಗಳನ್ನು ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷ ಸ್ಥಾನ ವಹಿಸಿದ ಅರಭಾವಿ ಫೌಂಡೇಶನ್ ಅಧ್ಯಕ್ಷ ಸಂತೋಷ್ ಅರಭಾವಿ ಮಾತನಾಡಿ ನಾವು ಕಂಡಿರುವ ವಿವಿಧ ಕಲ್ಪನೆಗಳಲ್ಲಿ ಒಂದಾದ ಇವತ್ತಿನ ರಸಾಯನಿಕ ಸಿಂಪಡಣೆಯಿಂದ ಭೂತಾಯಿಯ ರಕ್ಷಣೆಯನ್ನು ಹೇಗೆ ಮಾಡಬೇಕು ಎಂದು ಎಲ್ಲ ರೈತರಿಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಮೂಲ ಉದ್ದೇಶ ವ್ಯಕ್ತಪಡಿಸಿದರು.
ದಿ.ಮಾರುತಿ ಅರಭಾವಿ ಅವರ 4ನೇ ವರ್ಷದ ಪುಣ್ಯಸ್ಮರಣೋತ್ಸವದ ನಿಮಿತ್ಯ ಮಂಗಳವಾರ 28 ರಂದು ಹಮ್ಮಿಕೊಂಡ ವಿಶೇಷ ಕೃಷಿ ಹಬ್ಬ ಕಾರ್ಯಕ್ರಮದಲ್ಲಿ ಐದು ಜನ ಸಾಧಕ ಸಾವಯವ ಕೃಷಿಕರಿಗೆ ಸಾವಯವ ಕೃಷಿ ರತ್ನ ಪ್ರಶಸ್ತಿ ವಿತರಣೆ, ವಿವಿಧ ರೀತಿಯ ಜಾನುವಾರಗಳ ಪ್ರದರ್ಶನ, ಹಲವು ಬಗೆಯ ಕೃಷಿ ಪ್ರದರ್ಶನಗಳ ಜೊತೆಗೆ ಆಡು ಮತ್ತು ಕುರಿ ಸಾಕಾಣಿಕೆ ತರಬೇತಿಯನ್ನು ನೀಡಲಾಯಿತು.
ಸಾನಿಧ್ಯ ವಹಿಸಿದ ಹಿಡಕಲದ ಸದಾಶಿವ ಮುತ್ಯಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಶಿಕ್ಷಕ ಕಾಂತೇಶ್ ಕೋಚೆರಿ ನಿರೂಪಿಸಿ, ಆನಂದ್ ಅರಭಾವಿ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ತುಕಾನಟ್ಟಿಯ ಡಾ. ಮಲವಾಡಿ ಕೆ ವಿ ಕೆ, ಸಹಾಯಕ ಕೃಷಿ ನಿರ್ದೇಶಕರಾದ ವಿನೋದ್ ಮಾವರ್ಕರ್, ಕಲ್ಮೇಶ್ ಮಲಡಗಿ, ಮಾರುತಿ ಮರಡಿ, ಸಿದ್ದಣ್ಣ ದುರದುಂಡಿ, ಬಸನಗೌಡ ಆಸಂಗಿ ಸೇರಿದಂತೆ ಮುಗಳಖೋಡ ಪಟ್ಟಣದ ಹಿರಿಯರು ಹಾಗೂ ಸಮಸ್ತ ರೈತ ಬಾಂಧವರು ಉಪಸ್ಥಿತರಿದ್ದರು.