ಪ್ರಪಂಚದ ಅತೀ ದೊಡ್ಡ ಸಫಲ ಜನತಂತ್ರ ಸಂವಿಧಾನವೆಂಬ ಹೆಮ್ಮೆ ಹೊಂದಿದ ರಾಷ್ಟ್ರ ಭಾರತ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆತ್ಮವೇ ಪ್ರಜೆಗಳು. ಚುನಾವಣೆ ಮತ್ತು ಮತದಾನ ಒಂದೇ ನಾಣ್ಯದ ಎರಡು ಮುಖಗಳು. ಚುನಾವಣೆ ಪ್ರಕ್ರಿಯೆ ಪರಿಪೂರ್ಣವಾಗುವುದೇ ಮತದಾರರಿಂದ,ಮತ ಚಲಾಯಿಸುವವನೇ ಮತದಾರ.
ಜಾತಿ,ಲಿಂಗ,ಧರ್ಮ,ಹುಟ್ಟು ಸಾಮಾಜಿಕ ಸ್ಥಾನ ಮಾನ ಮುಂತಾದವುಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೇ ಈ ರಾಷ್ಟ್ರದಲ್ಲಿ 18 ವರುಷ ತುಂಬಿದ ಎಲ್ಲ ವಯಸ್ಕ ಪ್ರೌಢ ಪ್ರಜೆಗಳಿಗೆ ಮತ ಚಲಾಯಿಸುವ ಹಕ್ಕು ನಮ್ಮ ದೇಶದ ಆತ್ಮ ಎನಿಸಿಕೊಂಡ ಡಾ.ಅಂಬೇಡ್ಕರ್ ವಿರಚಿತ “ಭಾರತದ ಸಂವಿಧಾನ”ದಲ್ಲಿ ನೀಡಲಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಕೊಂಡ ನಮ್ಮ ಭಾರತ ದೇಶ ಅನಕ್ಷರಸ್ಥ ಜನರೇ ತುಂಬಿಕೊಂಡ ಈ ದೇಶದಲ್ಲಿ ಪ್ರಜೆಗಳೇ ದೇವರುಗಳು ಪ್ರಭುಗಳೇ ಪೂಜಾರಿಗಳು ಎಂಬ ಮಾತನ್ನು ಎಲ್ಲರೂ ಚೆನ್ನಾಗಿ ಅರಿತುಕೊಂಡು ಮತದಾನ ಪ್ರಕ್ರಿಯೆಯಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳಬೇಕು. ಪ್ರತಿ 5 ವರುಷಕ್ಕೊಮ್ಮೆ ಬರುವ ಈ ಚುನಾವಣೆ ಪರ್ವದಲ್ಲಿ ಮತದಾರ ಪ್ರಭುಗಳು ಮೊದಲು ಪ್ರಬುದ್ಧರಾಗಬೇಕು.ಆದರೆ ಈ ಪ್ರಬುದ್ಧತೆ ಬರುವುದು ದೇವರ ಅನುಗ್ರಹದಿಂದಲ್ಲ. ಮೊಟ್ಟ ಮೊದಲು ನಾವೆಲ್ಲರೂ ಶಿಕ್ಷಣ ಪಡೆಯಬೇಕು.ಶಿಕ್ಷಣ ಎಂಬ ಬೆಳಕು ನಮಗೆ ಒಳ್ಳೆಯದು ಯಾವುದು? ಕೆಟ್ಟದು ಯಾವುದು? ನ್ಯಾಯ, ಅನ್ಯಾಯ, ಚಿಂತನ ಮಂಥನ ಮಾಡಲು ಹಚ್ಚುವ ಒಂದು ಅದ್ವಿತೀಯ ಶಕ್ತಿಯನ್ನು ನೀಡುತ್ತದೆ.ಈ ದೇಶದ ಹಣೆಬರಹ ಬರೆಯುವನು ಯಾವುದೇ ದೇವ ದೇವತೆಗಳಲ್ಲ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು.ನಮ್ಮ ಭಾರತ ದೇಶದಲ್ಲಿ ಬಹುತೇಕ ಮತದಾರರು ಪೂರ್ವಾಗ್ರಹ ಪೀಡಿತರಾಗಿ ಮತದಾನ ಮಾಡುತ್ತಲೇ ಬಂದಿರುವುದು ಒಂದು ವಿಪರ್ಯಾಸ.
ಚುನಾವಣಾ ಅಖಾಡಕ್ಕೆ ಇಳಿಯುವ ನಾಯಕರು ಇತ್ತೀಚಿನ ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯಲು ತೆರೆ ಮರೆಯಲ್ಲಿ ಅನೇಕ ಕಸರತ್ತುಗಳನ್ನು ನಡೆಸಿ ವಸ್ತ್ರ ಆಭರಣ, ಗರಿ ಗರಿ ನೋಟು, ಸಾರಾಯಿ ಪಾಕೆಟಗಳನ್ನು ಕೊಟ್ಟು ಮತದಾರರನ್ನು ತಾತ್ಕಾಲಿಕವಾಗಿ ಸಂತೃಪ್ತಗೊಳಿಸುವ ಕಾರ್ಯ ಮಾಡುತ್ತಾರೆ.ಇಲ್ಲಿ ಮತದಾರರು ಸ್ವಲ್ಪ ಆಲೋಚನೆ ಮಾಡಬೇಕು. ಹಳ್ಳಿಗಳು ಉದ್ದಾರವಾಗಬೇಕಾದರೆ ಯೋಗ್ಯ ವ್ಯಕ್ತಿಗೆ ಮತ ನೀಡುವ ಸಂಕಲ್ಪ ಮಾಡಬೇಕು. ಇತ್ತೀಚೆಗೆ ಈ ಜಾತ್ಯತೀತ ರಾಷ್ಟ್ರದಲ್ಲಿ ಪ್ರಜೆಗಳನ್ನು ಜಾತಿಯ ಆಧಾರದ ಮೇಲೆ ಮತದಾರರ ಮೇಲೆ ತೀವ್ರ ಪ್ರಭಾವ ಬೀರಿ ಮತ ನೀಡುವಂತೆ ಪ್ರೇರೇಪಿಸುವ ಕಾರ್ಯ ಮಾಡುತ್ತಿರುವುದು ಅತ್ಯಂತ ವಿಷಾದನೀಯ. ಪ್ರಸ್ತುತ ಕರ್ನಾಟಕದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮತದಾನ ಮೇ 10 ಕ್ಕೆ ಮುಹೂರ್ತ ನಿಗಧಿಯಾಗಿದೆ.ಮತದಾನ ಇದು ನಮ್ಮ ಪವಿತ್ರ ಹಕ್ಕು. ಒಳ್ಳೆಯ ಯೋಗ್ಯತೆ ಇರುವ ವ್ಯಕ್ತಿಗೆ ನಮ್ಮ ಅಮೂಲ್ಯ ಮತ ನೀಡಿ ಮತಧಾನದ ಹಕ್ಕನ್ನು ಸದ್ಭಳಕೆ ಮಾಡಿಕೊಳ್ಳಬೇಕು. ನಮ್ಮ ಒಂದು ಮತ ಕೋಟಿ ರೂಪಾಯಿಗಳಿಗಿಂತಲೂ ಅಮೂಲ್ಯ.ಅದಕ್ಕೆ ಬೆಲೆ ಕಟ್ಟಲಾಗದು. ಮತದಾರರು ತಮ್ಮ ಆತ್ಮಸಾಕ್ಷಿಯಾಗಿ ಸ್ವಯಂ ಪ್ರೇರಣೆಯಿಂದ ನಿಗಧಿಪಡಿಸಿದ ಮತಗಟ್ಟೆಗೆ ಆಗಮಿಸಿ ಮತ ಚಲಾವಣೆ ಮಾಡಿ ಬರಬೇಕು.ಒಂದೊಂದು ಸಂದರ್ಭದಲ್ಲಿ ಮತ ನೀಡುವ ಪೂರ್ವದಲ್ಲಿ ಮತದಾರರಿಗೆ ಪಕ್ಷ ನಿಷ್ಠೆ ಹಾಗೂ ವ್ಯಕ್ತಿ ನಿಷ್ಠೆ ಕಾಡುವುದು ಸಹಜ. ಈ ಸಂದರ್ಭದಲ್ಲಿ ನಿಮಗೆ ಸರಿ ಎನಿಸಿದ ಯೋಗ್ಯ ಅಭ್ಯರ್ಥಿಗಳಿಗೆ ಮತ ನೀಡಬೇಕು.ಅಥವಾ ನಿಮಗೆ ಪಕ್ಷ ನಿಷ್ಠೆ ಹಾಗೂ ವ್ಯಕ್ತಿ ನಿಷ್ಠೆ ಬೇಡ ಎನಿಸಿದರೆ “ನೋಟಾ” ಎಂಬ ಬಟನ್ ಒತ್ತುವ ಮೂಲಕ ತಿರಸ್ಕಾರ ಮಾಡುವ ಅನುಕೂಲತೆಯನ್ನು ಚುನಾವಣಾ ಆಯೋಗ ನೀಡಿದೆ ಎಂಬುದು ಗಮನಾರ್ಹ ಸಂಗತಿ.ನಾನೇಕೆ ಇವರಿಗೆ ಮತ ನೀಡಬೇಕು? ನನ್ನ ಒಂದು ಮತ ಹಾಕದಿದ್ದರೆ ನಡೆಯುತ್ತದೆ ಎಂದು ಮನೆಯಲ್ಲಿ ಕುಳಿತು ಉದಾಸೀನ ಮಾಡದೇ ಮತದಾನ ಪ್ರಕ್ರಿಯೆಯಲ್ಲಿ ನಿಷ್ಠೆ ಪ್ರಾಮಾಣಿಕವಾಗಿ ಪಾಲ್ಗೊಂಡು ಮೂಲಭೂತ ಸಮಸ್ಯೆಗಳನ್ನು ಈಡೇರಿಸುವ ಸುಸಂಸ್ಕೃತ, ನಿಷ್ಠಾವಂತ, ಕ್ರಿಯಾಶೀಲ ಪ್ರಜೆಗಳ ಪ್ರೀತಿ ವಿಶ್ವಾಸ ಸಂಪಾದಿಸುವ ಜಾತ್ಯತೀತ, ಜನಪರ ಕಾಳಜಿ ಮಾಡುವ ಕರುಣಾಮಯಿ, ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡುವ ಸಮರ್ಥ ವ್ಯಕ್ತಿಗೆ ಮತ ನೀಡುವ ಮೂಲಕ ಈ ನಾಡು ಕಲ್ಯಾಣ ಕರ್ನಾಟಕವಾಗಲು ಕಾರಣಕರ್ತರಾಗಬೇಕು. “
ನಾನು ನಿಮಗೆ ಮತದಾನದ ಅಧಿಕಾರ ಕೊಡಿಸಿದ್ದು ರಾಜರಾಗಿ ಎಂದು ಹೊರತು ಗುಲಾಮರಾಗಿ ಎಂದಲ್ಲ” ಎಂಬ ಸಂವಿಧಾನ ಶಿಲ್ಪಿ, ವಿಶ್ಚರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಈ ಧೀರೋದಾತ್ತ ನುಡಿಯನ್ನು ಕೂಲಂಕುಷವಾಗಿ ಪ್ರತಿಯೊಬ್ಬ ಭಾರತೀಯರು ಚಿಂತನ ಮಂಥನ ಮಾಡಬೇಕು.ರಾಜನಾಗುವುದು, ಗುಲಾಮನಾಗುವುದು ನಮ್ಮ ಕೈಯಲ್ಲಿದೆ. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಮುನ್ನ ಆಳವಾಗಿ ಆಲೋಚನೆ ಮಾಡಬೇಕು.ಭ್ರಷ್ಟ ದುಷ್ಟರನ್ನು ದೂರಿಕರಿಸಿ ಶಿಷ್ಟರಿಗೆ ಮೊದಲ ಆದ್ಯತೆ ಕೊಟ್ಟು ಆಯ್ಕೆ ಮಾಡಿದರೆ ನಮಗೂ ಹಿತ. ಈ ನಾಡಿಗೂ ಒಳಿತಾಗುವುದು. ಹೀಗೆ ನಾವೆಲ್ಲರೂ ಮಾಡುವುದರಿಂದ ನಿಜಕ್ಕೂ ಪ್ರಜಾಪ್ರಭುತ್ವದ ಮೌಲ್ಯಗಳು ಗಟ್ಟಿಗೊಳ್ಳುವುದರಲ್ಲಿ ಎರಡು ಮಾತಿಲ್ಲ. “ಮತ ಮಗಳಿದ್ದಂತೆ ಅದನ್ನು ಅಯೋಗ್ಯರಿಗೆ ಕೊಡಬಾರದು” ಇದು ಡಾ.ಅಂಬೇಡ್ಕರ್ ಉವಾಚ. .ಈ ನಿಟ್ಟಿನಲ್ಲಿ ಪ್ರಜೆಗಳು ಪ್ರಜ್ಞಾವಂತರಾಗಬೇಕು ಪ್ರಬುದ್ಧರಾಗಬೇಕು. ಬಾಬಾಸಾಹೇಬರು ಹೇಳಿದ ಈ ಅಮೂಲ್ಯ ನುಡಿಯನ್ನು ಅರ್ಥ ಮಾಡಿಕೊಂಡು ಮತ ಮೌಲ್ಯದ ಮಹತ್ವ ಅರಿತು ಮತದಾನ ಮಾಡೋಣ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ನಾವೆಲ್ಲರೂ ಪರಿಶ್ರಮಿಸೋಣ.
*ಲೇಖನ:~ಡಾ.ಜಯವೀರ ಎ.ಕೆ*
*ಕನ್ನಡ ಪ್ರಾಧ್ಯಾಪಕರು*
*ಖೇಮಲಾಪುರ*