ಬೆಳಗಾವಿ ಕ್ಯಾಂಪ್‌ ಆರಕ್ಷಕ ಠಾಣೆಗಿಲ್ಲ ಸೂರಿನ ಸುರಕ್ಷತೆ

Share the Post Now

ಸುಸಜ್ಜಿತ ಕಟ್ಟಡ ನಿರ್ಮಿಸಲು ಸರ್ಕಾರ ಮೀನಾಮೇಷ: ಸೋರಿಕೆ ತಡೆಯಲು ಠಾಣೆಗೆ ಟಾರ್ಪಾಲ್ ಹೊದಿಕೆ

ಬೆಳಗಾವಿ: ಜವಳು ಹಿಡಿದಿರುವ ಗೋಡೆಗಳು, ಕಟ್ಟಡದ ಎಲ್ಲ ಕೊಠಡಿಗಳಲ್ಲಿ ತಟ..ತಟ…ಸೋರುವ  ನೀರು, ಮಳೆ ನೀರು ಸೋರುವುದನ್ನು ತಡೆಯಲು ಮೇಲ್ಛಾವಣಿಗೆ ಟಾರ್ಪಾಲ್ ಹೊದಿಕೆ, ಇಂದು ಬೀಳುವುದೋ…ನಾಳೆ ಬೀಳುತ್ತೋ…ಎಂಬ ಭಯದಲ್ಲಿ ನಿತ್ಯ ಕಾರ್ಯನಿರ್ವಹಿಸುತ್ತಿರುವ ಪೊಲೀಸರು. ಇದೇನೋ ಯಾವ ಭೂತ್‌ ಬಂಗಲೆ ಕಟ್ಟಡವಲ್ಲ. ಇದು ಕ್ಯಾಂಪ್‌ ಪೊಲೀಸ್‌ ಠಾಣೆಯ ಕಟ್ಟದ ಸದ್ಯದ ದುಸ್ಥಿತಿ.

ಹೌದು..ನಗರದ ಹೃದಯಭಾಗದಂತಿರುವ ಕ್ಯಾಂಪ್‌ ಪ್ರದೇಶದಲ್ಲಿರುವ ಇಲ್ಲಿನ ಪೊಲೀಸ್‌ ಠಾಣೆಯ ಪರಿಸ್ಥಿತಿಯನ್ನು ನೋಡಿದರೆ, ನಿಮಗೆ ಅಚ್ಚರಿಯಾಗಬಹುದು. ಇಲ್ಲಿನ ಆರಕ್ಷಕರು ಇಷ್ಟೊಂದು ಸಂಕಷ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರಾ ಎಂದು ಅನಿಸದೇ ಇರದು. ಈ ಠಾಣೆ ಕಟ್ಟಡವನ್ನು ಸುಮಾರು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ.  ಮಳೆ ಬಂದರೆ ಸಾಕು ಕಟ್ಟಡದ ಎಲ್ಲ ಕೊಠಡಿಗಳಲ್ಲಿ ತಟ..ತಟ… ಮಳೆ ಹನಿ ಸೋರುತ್ತಿದೆ. ಇಂತಹ ಶಿಥಿಲಗೊಂಡ ಕಟ್ಟಡ ರಕ್ಷಿಸುವುದರ ಜೊತೆಗೆ ಆರಕ್ಷಕರು ತಮ್ಮ ರಕ್ಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಆದರೆ ಇಂತಹ ದುಸ್ಥಿತಿ ಕಟ್ಟಡವನ್ನು ತೆರವುಗೊಳಿಸಿ ನೂತನ ಠಾಣೆ ನಿರ್ಮಿಸಲು ಪೊಲೀಸ್‌ ಇಲಾಖೆ ಕೂಡಾ ಈವರೆಗೂ ಆಲೋಚಿಸಿಲ್ಲ ಎಂಬುವುದು ವಿಪರ್ಯಾಸದ ಸಂಗತಿಯಾಗಿದೆ.

ಠಾಣೆ ನೋಡಿ ಮೂಗು ಮುರಿಯುತ್ತಿರುವ ಜನ: ಈ ಕ್ಯಾಂಪ್‌ ಪೊಲೀಸ್ ಠಾಣೆಯಲ್ಲಿ ಓರ್ವ ಸಿಪಿಐ, ಇಬ್ಬರು ಪಿಎಸ್‌ಐ, 20 ಜನ ಹವಾಲ್ದಾರ್, 40 ಜನ ಪೊಲೀಸ್‌ ಪೇದೆಗಳು ಸೇರಿದಂತೆ ಒಟ್ಟು 70 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಠಾಣೆ ಸದ್ಯ ದುಸ್ಥಿತಿಗೆ ತಲುಪಿದೆ. ಮಳೆಗೆ ಸೋರುತ್ತಿರುವ ಪೊಲೀಸ್‌ ಠಾಣೆ ಮುಂದೆ ಹೋಗು ಬರುವ ಜನ ಈ ಅವ್ಯವಸ್ಥೆ ನೋಡಿ ಮಳೆ ಬಂದರೆ ಇವರಿಗೆ ಭದ್ರತೆ ಇಲ್ಲ. ಇನ್ನೂ ಜನರ ಭದ್ರತೆ ಹೇಗೆ ನಿಭಾಹಿಸುತ್ತಾರೋ ಎಂದು ಮೂಗು ಮುರಿದು ಹೋಗುತ್ತಿದ್ದಾರೆ.

ಹೇಳತೀರದ ಪೊಲೀಸ್ ಪೇದೆಗಳ ಸಮಸ್ಯೆ: ಸಿಬ್ಬಂದಿ ಕೊರತೆ, ಉಪಕರಣ, ವಾಹನ ಸೌಲಭ್ಯಗಳ ಕೊರತೆ ನಡುವೆಯೂ ಪೊಲೀಸ್ ಸಿಬ್ಬಂದಿ ಚೆನ್ನಾಗಿಯೆ ಕೆಲಸ ಮಾಡುತ್ತಾರೆ. ಹೆಚ್ಚುವರಿ ಕೆಲಸದ ಒತ್ತಡ ವಹಿಸಿಕೊಳ್ಳುತ್ತಾರೆ. ಸಹಿಸಿಕೊಂಡು ಮರುಮಾತಿಲ್ಲದೆ ಶಿಸ್ತಿನ ಸಿಪಾಯಿಗಳಾಗಿ ಒಪ್ಪಿಸಿದ ಕೆಲಸ ಮಾಡುತ್ತಾರೆ. ತಮ್ಮ ಕೆಲಸದಲ್ಲಿ ಎದುರಾಗುವ ಅಪಾಯ, ಸೋಲು, ಪ್ರಾಣಭೀತಿ ಮರೆತು ಕೆಲಸ ನಿರ್ವಹಿಸುತ್ತಾರೆ. ಅಂತಹದೊಂದು ದುಡಿತವರ್ಗವೇ ಸರ್ಕಾರ ನೂತನ ಪೊಲೀಸ್‌ ಠಾಣೆ ನಿರ್ಮಿಸದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಬೇಕಿದೆ ಹೊಸ ಕಟ್ಟಡ: ಕಟ್ಟಡವು ಬಹುವರ್ಷದ್ದು, ಮಳೆ ಆರಂಭವಾದರೆ ಕಟ್ಟಡದ ಮೇಲೆ ಮಳೆ ನೀರು ನಿಂತು ಕೆಳಗಿನ ಕೊಠಡಿಗಳಿಗೆ ನೀರು ಸೋರುತ್ತಿದೆ. ಇದನ್ನು ಅರಿತ ಸಿಬ್ಬಂದಿ ಮಳೆರಾಯ ಪ್ರಾರಂಭವಾಗುವ ಮೊದಲೇ ಪೊಲೀಸ್ ಠಾಣೆ ಛಾವಣಿ ಮೇಲೆ ಹತ್ತಿ ಸಂಪೂರ್ಣ ಟಾರ್ಪಾಲ್  ಹಾಯಿಸಿ ನೀರು ಒಳಗೆ ಬಾರದಂತೆ ತಡೆಯುವುದು ಸಿಬ್ಬಂದಿಯ ಕಾರ್ಯವಾಗಿದೆ.  ಜಿಲ್ಲೆಯ ಹೆಚ್ಚಿನ ಪೊಲೀಸ್ ಠಾಣೆಗಳು ಸುಸಜ್ಜಿತ ಕಟ್ಟಡ ಹೊಂದಿದ್ದು, ಕ್ಯಾಂಪ್‌  ಠಾಣೆಗೂ ನೂತನ ಕಟ್ಟಡ ಭಾಗ್ಯ ಕೂಡಿಬರಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

Leave a Comment

Your email address will not be published. Required fields are marked *

error: Content is protected !!