ಗೋಕಾಕ: ದಿವಂಗತ ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ಒಂದೇ ನಾಣ್ಯದ ಎರಡು ಮುಖಗಳು. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ರವಿವಾರ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ತಮ್ಮ ಅಧಿಕಾರವಧಿಯಲ್ಲಿ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಜಿಲ್ಲೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಕೆಲವರು ಬ್ಯಾಂಕ ಹಾಗೂ ಸೋಸೈಟಿಗಳ ದುರ್ಬಳಕೆಯಿಂದ ಹಣಬಲ ತೋರಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಿಬಿಐ ತನಿಖೆಯ ಮೂಲಕ ವಾಸ್ತವಿಕತೆಯನ್ನು ಜನರ ಮುಂದಿಡಲು ಒತ್ತಾಯಿಸುವದಾಗಿ ತಿಳಿಸಿದರು.
ನಾನು ಜಾತಿ ರಾಜಕಾರಣ ಮಾಡದೆ ಬಸವತತ್ವದಲ್ಲಿ ವಿಶ್ವಾಸವಿಟ್ಟು ಜನರ ಸೇವೆ ಮಾಡುತ್ತಿದ್ದೇನೆ. ಜನಪ್ರತಿನಿಧಿಗಳಾಗಲು ಎಲ್ಲ ಸಮುದಾಯಗಳ ಆಶೀರ್ವಾಧ ಅತಿಅವಶ್ಯ. ಜಾತಿ ರಾಜಕಾರಣಕ್ಕೆ ಮಹತ್ವ ನೀಡದೆ ಬಲಿಷ್ಠ ಭಾರತ ನಿರ್ಮಾಣಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಜಗದೀಶ ಶೆಟ್ಟರ ಅವರಿಗೆ ತಮ್ಮ ಮತ ನೀಡುವಂತೆ ಕೋರಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಮಾತನಾಡಿ. ಕಾಂಗ್ರೇಸ್ನವರು ನಾಟಕೀಯ ಹಿಂದುತ್ವ ತೋರಿಸದೇ ಬಿಜೆಪಿ ಸರಕಾರ ಜಾರಿಗೆ ತಂದ ಮತಾಂತರ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತೋರಿಸುವ ಮೂಲಕ ಪ್ರಾಮಾಣಿಕ ಹಿಂದುತ್ವ ತೋರಿಸುವಂತೆ ಸವಾಲು ಹಾಕಿದರು.
ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಮಾತನಾಡಿ, ನರೇಂದ್ರ ಮೋದಿಯವರ ದಕ್ಷ ಆಡಳಿತದಿಂದ ಜಗತ್ತಿನ ರಾಜಕಾರಣ ನಿರ್ಧರಿಸುವ ಶಕ್ತಿ ದೊರೆತು ಮೋದಿಯವರು ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿ ಬಾಂಬ್ ಸಂಸ್ಕೃತಿ ಮರೆಯಾಗಿ ಜನತೆ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ನಿಮ್ಮ ಒಂದು ಮತ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ ಇನ್ನೂ ದೇಶವನ್ನು ಬಲಿಷ್ಠಗೊಳಿಸಿ ವಿಶ್ವಗುರುವನ್ನಾಗಿಸುತ್ತದೆ. ತಮ್ಮ ಮತವನ್ನು ಬಿಜೆಪಿ ಅಭ್ಯರ್ಥಿಗೆ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ, ಸಂಸದೆ ಮಂಗಲಾ ಅಂಗಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.