ಸಮಾಜ ಮತ್ತು ರಾಷ್ಟ್ರದ ಉನ್ನತಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ. ಆದ್ದರಿಂದ ಮಹಿಳೆಯರ ಸಾಮಾಜಿಕ ಸಂಘಟನೆ ಮತ್ತು ರಾಷ್ಟ್ರದ ಹಿತದ ಹಿನ್ನೆಲೆಯಲ್ಲಿ ಮಹಿಳೆಯ ವಿಶೇಷ ಮಹಿಳಾ ಸಮಾವೇಶ ಇದೇ ನವೆಂಬರ್ 5ರಂದು ಬೆಳಗಾವಿ ನಗರದ ವಿದ್ಯಾಧಿರಾಜ ಸಭಾಗೃಹದಲ್ಲಿ ಜರುಗಲಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಅಲ್ಕಾತಾಯಿ ಇನಾಂದಾರ ಹೇಳಿದರು.
ನಗರದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಾಶ್ಚಿಮಾತ್ಯ ದೃಷ್ಟಿಕೋನದಲ್ಲಿ ಮಹಿಳೆಯನ್ನು ಅಬಲೆ ಎಂದು ಬಿಂಬಿಸಲಾಗಿದೆ. ಆದರೆ ಭಾರತದಲ್ಲಿ ಮಹಿಳೆಯನ್ನು ಶಕ್ತಿಯ ಪ್ರತೀಕ ಎಂದು ಗೌರವಿಸುವ ಪ್ರತೀತವಿದೆ. ಮಹಿಳೆಯರನ್ನು ಸಮಾಜ ಮತ್ತು ರಾಷ್ಟ್ರದ ಉನ್ನತಿಯಲ್ಲಿ ರಚನಾತ್ಮಕವಾಗಿ ಮುಖ್ಯವಾಹಿನಿಗೆ ತರುವುದು ಮತ್ತು ಜಾಗೃತಗೊಳಿಸುವ ಅವಶ್ಯಕತೆಯಿದೆ. ಆದ್ದರಿಂದ ಈ ಕಾರ್ಯಕ್ರಮ ಆಯೋಜಿಲಾಗುತ್ತಿದೆ ಎಂದರು.
ಬೆಳಗಾವಿಯ ಉನ್ನತಿ ಟ್ರಸ್ಟ್ ಮತ್ತು ಕರ್ನಾಟಕ ಉತ್ತರ ಪ್ರಾಂತ ಮಹಿಳಾ ಸಮನ್ವಯ ಸಹಯೋಗದಲ್ಲಿ ನಗರದ ವಿದ್ಯಾಧಿರಾಜ ಸಭಾಗೃಹದಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಲೇಖಕಿ ಆಶಾ ರತನಜಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಪುಣೆಯ ಮಹಿಳಾ ಸಮನ್ವಯದ ಅಖಿಲ ಭಾರತೀಯ ಸಹ ಸಂಯೋಜಿಕಾ ಭಾಗ್ಯಶ್ರೀ (ಚಂದಾ) ಸಾಠೆ ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ನಂತರ ಸಮಾವೇಶದಲ್ಲಿ ಪಾಲ್ಗೊಂಡ ಮಹಿಳೆಯರನ್ನು ಅವರ ವೃತ್ತಿ ಆಧಾರದ ಮೇಲೆ 11 ವಿಭಾಗಗಳಲ್ಲಿ ವಿಂಗಡಿಸಿ, ಪ್ರತ್ಯೇಕವಾಗಿ ಚರ್ಚೆ ಮತ್ತು ಸಂವಾದ ಕಾರ್ಯಕ್ರಮ ಜರುಗಲಿದೆ. ಸಮಾರೋಪ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಅವರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಾಂತ ಸಹ ಸಂಯೋಜಿಕಾ ಆಶಾ ನಾಯಕ ಮಾತನಾಡಿ, ಕರ್ನಾಟಕ ಉತ್ತರ ಪ್ರಾಂತದಲ್ಲಿ ವಿವಿಧ 14 ವಿಭಾಗಗಳಲ್ಲಿ ಮಹಿಳಾ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲಾಗುತ್ತಿದೆ. ದೇಶಾದ್ಯಂತ 450ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸಮಾವೇಶ ಆಯೋಜಿಸುವ ಗುರಿ ಇದ್ದು, ಈಗಾಗಲೇ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸಮಾವೇಶ ಅತ್ಯಂತ ಯಶಸ್ವಿಯಾಗಿ ಜರುಗಿದೆ. ಚಿಕ್ಕೋಡಿಯಲ್ಲಿ ಡಿಸೆಂಬರ್ 3ರಂದು ಆಯೋಜಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷೆ ಡಾ.ಜ್ಯೋತಿ ತುಕ್ಕಾರ, ಉನ್ನತ ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮಿ ಮಿರ್ಜಿ, ಶಿಲ್ಪಾ ವೇರ್ಣೆಕರ್, ಪದ್ಮಜಾ ಭಟ್, ಆಶಾ ರಮೇಶ ಮತ್ತು ಗೌರಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.