ಬಾಲಭವನ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ

Share the Post Now


ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದಾಗಿ ಬೆಳಗಾವಿ ನಗರ ಮಧ್ಯದಲ್ಲೇ ನಿರ್ಮಾಣವಾಗುತ್ತಿರುವ ಬೃಹತ್ ಮತ್ತು ಮಾದರಿ ಬಾಲಭವನ ಕಾಮಗಾರಿಗೆ ಮಂಗಳವಾರ ಬೆಳಗ್ಗೆ 9.30ಕ್ಕೆ ಭೂಮಿ ಪೂಜೆ ನಡೆಯಲಿದೆ.

ರಾಜ್ಯ ಬಾಲಭವನ ಸೊಸೈಟಿಯಿಂದ ಬೆಳಗಾವಿ ಬಾಲಭವನ ಸೊಸೈಟಿ ಮೂಲಕ 20 ಕೋಟಿ ರೂ. ವೆಚ್ಚದಲ್ಲಿ ನೂತನ ಬಾಲಭವನ ನಿರ್ಮಾಣವಾಗಲಿದೆ. ಜಿಲ್ಲಾಧಿಕಾರಿಗಳ ಗೃಹ ಕಚೇರಿ ಪಕ್ಕದಲ್ಲಿ (ಎನ್ ಸಿಸಿ ಕಚೇರಿ ಹಿಂಬಾಗ) 3 ಎಕರೆ ವಿಸ್ತೀರ್ಣದಲ್ಲಿ ಬೆಂಗಳೂರಿನ ಬಾಲಭವನಕ್ಕಿಂತ ಸುಂದರವಾಗಿ, ವಿಶಿಷ್ಟವಾಗಿ ಬೆಳಗಾವಿ ಬಾಲಭವನ ನಿರ್ಮಿಸಲು ಉದ್ದೇಶಿಸಲಾಗಿದೆ.  ರೈಲು, ಫ್ಯಾಂಟಸಿ ಪಾರ್ಕ್ ಸೇರಿದಂತೆ, ಮಕ್ಕಳು ಆಟದೊಂದಿಗೆ ಕಲಿಯುವುದಕ್ಕೆ ಅವಕಾಶವಾಗುವಂತೆ ಸರ್ವವಿಧದ ಸೌಕರ್ಯಗಳನ್ನು ಬಾಲಭವನ ಒಳಗೊಳ್ಳಲಿದೆ. ಈಗಾಗಲೆ 2 ಕೋಟಿ ರೂ. ಬಿಡುಗಡೆಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಘನ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಆಸೀಫ್ ಸೇಠ್ ವಹಿಸುವರು. ಜಿಲ್ಲೆಯ ಶಾಸಕರು, ಸಂಸದರು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯದಲ್ಲೇ ವಿಶಿಷ್ಟವಾಗಿ ನನ್ನ ಸ್ವಂತ ಜಿಲ್ಲೆಯಲ್ಲಿ ಬಾಲಭವನ ನಿರ್ಮಿಸಬೇಕೆನ್ನುವ ಕನಸು ಹೊತ್ತು ಬೆಳಗಾವಿ ಬಾಲಭವನ ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಕಲಿಯುವುದಕ್ಕೆ ಮತ್ತು ನಲಿಯುವುದಕ್ಕೆ ಇದೊಂದು ಅತ್ಯುತ್ತಮ ಸ್ಥಳವಾಗಬೇಕೆನ್ನುವುದೇ ನನ್ನ ಉದ್ದೇಶ. ಹಾಗಾಗಿ ನಗರ ಮಧ್ಯದಲ್ಲೇ ಅತ್ಯಂತ ವಿಶಾಲವಾದ ಜಾಗದಲ್ಲಿ ಬಾಲಭವನ ನಿರ್ಮಿಸಲಾಗುತ್ತಿದೆ
– ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು

Leave a Comment

Your email address will not be published. Required fields are marked *

error: Content is protected !!