ರಾಜ್ಯ ಸರ್ಕಾರದಿಂದ ಮಲತಾಯಿ ಧೋರಣೆ-ಶಾಸಕ ನಿಖಿಲ್ ಕತ್ತಿ ಆರೋಪ
ಹುಕ್ಕೇರಿ: ಹುಕ್ಕೇರಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ನಿಂದ ಶಾಸಕ ನಿಖಿಲ್ ಕತ್ತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ಕೋರ್ಟ್ ಸರ್ಕಲ್‌ವರೆಗೆ ತೆರಳಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಕೂಡಲೇ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು. ಬಳಿಕ ಬೇಡಿಕೆಯ ಮನವಿಯನ್ನು ತಹಸೀಲದಾರರಿಗೆ ಸಲ್ಲಿಸಿದರು.
ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ರೈತರು ತೊಂದರೆಯಲ್ಲಿದ್ದಾರೆ. ಕೆಲ ರೈತರೂ ಬಿತ್ತನೆ ಕೂಡ ಮಾಡಿಲ್ಲ. ಬೆಳೆದ ಬೆಳೆಗಳು ನೀರಿಲ್ಲದೇ ಒಣಗಿ ಹೋಗಿವೆ. ಜನರಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ. ಕಾರಣ ಸರ್ಕಾರ ತಕ್ಷಣವೇ ಹುಕ್ಕೇರಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರಸ್ತುತ ವಿಧಿಸುತ್ತಿರುವ ಅನಿಯಮಿತ ವಿದ್ಯುತ್ ನಿಲುಗಡೆ(ಲೋಡ್ ಶೆಡ್ಡಿಂಗ್)ಯಿಂದ ರೈತರು, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಲೋಡ್ ಶೆಡ್ಡಿಂಗ್‌ನಿಂದ ಕೃಷಿ ಚಟುವಟಿಕೆಗಳ ಮೇಲೆ ಕರಾಳಛಾಯೆ ಆವರಿಸಿದೆ. ಕೂಡಲೇ ಈ ಕ್ರಮ ರದ್ದುಪಡಿಸಿ ನಿಯಮಿತ ವಿದ್ಯುತ್ ಪೂರೈಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
ಈ ವೇಳೆ ಶಾಸಕ ನಿಖಿಲ್ ಕತ್ತಿ ಮಾತನಾಡಿ, ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತಾಳುತ್ತಿದೆ. ರೈತ ವಿರೋಧಿ, ಜನರಿಗೆ ಬೇಡವಾದ ನೀತಿಗಳನ್ನು ಜಾರಿಗೊಳಿಸುತ್ತಿದೆ. ಮಹತ್ವದ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸತ್ಯೆಪ್ಪಾ ನಾಯಿಕ, ಬ್ಲಾಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಹಿರಾಶುಗರ ನಿರ್ದೇಶಕರಾದ ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಸುರೇಶ ದೊಡಲಿಂಗನವರ, ಮುಖಂಡರಾದ ಪಿ.ಎಸ್.ಮುತಾಲಿಕ, ಶಶಿರಾಜ ಪಾಟೀಲ, ಗುರು ಕುಲಕರ್ಣಿ, ರಾಜು ಮುನ್ನೋಳಿ, ಕೆ.ಜಿ.ಪಾಟೀಲ, ರಾಮಣ್ಣಾ ಗೋಟೂರಿ, ಸುನೀಲ ಬೈರನ್ನವರ, ಮಹಾನಿಂಗ ಸನದಿ, ಆದರ್ಶ ಅಂಕಲಗಿ, ಶೀಲತ ಬ್ಯಾಳಿ, ಪ್ರಶಾಂತ ಪಾಟೀಲ, ತುಕಾರಾಮ ಬಸ್ತವಾಡ, ಕಾಡೇಶ ಹುದ್ದಾರ, ನೀಲಪ್ಪಾ ಕೋಲೆ, ರಾಜು ಕೋರೆ, ಗಿರೀಶ ಕುಲಕರ್ಣಿ, ಮಯೂರ ಗಸ್ತಿ ಮತ್ತಿತರರು ಉಪಸ್ಥಿತರಿದ್ದರು.