ಅಥಣಿ : ಅಥಣಿ ತಾಲೂಕಿನ ಕೊಕಟನೂರ ಯಲ್ಲಮ್ಮದೇವಿ ಜಾತ್ರೆಗೆ ಆಗಮಿಸಿದ್ದ ಇಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆಗೈದಿದ್ದರಿಂದ ಓರ್ವ ಸಾವಿಗೀಡಾಗಿ, ಇನ್ನೋರ್ವ ಗಾಯಗೊಂಡಿರುವ ಘಟನೆ ಮಂಗಳವಾರ ಸಂಭವಿಸಿದೆ.
ಅಥಣಿ ಪಟ್ಟಣದವರಾದ ಗಣೇಶ ಪಂಡಿತ ಸಿಕ್ಕಲಗಾರ (23) ಮೃತನಾಗಿದ್ದು, ನರೇಂದ್ರ ಸಂಜಯ ಘಟಕಾಂಬಳೆ (32) ಗಂಭೀರ ಗಾಯಗೊಂಡಿದ್ದಾರೆ. ಗ್ರಾಮದ ಪಾಟಣಕರ ಗದ್ದೆಯ ಬಸ್ ನಿಲ್ದಾಣದ ಹಿಂದುಗಡೆ ಘಟನೆ ಜರುಗಿದೆ. ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡ ಗಣೇಶ ಹಾಗೂ ನರೇಂದ್ರ ಚೀರಾಡುತ್ತಾ ಗದ್ದೆಯಲ್ಲಿ ಬಿದ್ದಿರುವ ಸಪ್ಪಳ ಕೇಳಿಸಿಕೊಂಡ, ಅಲ್ಲಿನ ನಿವಾಸಿಗಳು ಆಂಬುಲೆನ್ಸ್ ವಾಹನಕ್ಕೆ ಕರೆ ಮಾಡಿದ್ದಾರೆ. ನಂತರ ಕೊಕಟನೂರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿಂದ ಕರೆದೊಯ್ದು ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗಲೇ ಗಣೇಶ ಸಿಕ್ಕಲಗಾರ ಸಾವಿಗೀಡಾಗಿದ್ದಾನೆ. ಗಾಯಗೊಂಡ ನರೇಂದ್ರನನ್ನು ಅಥಣಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸ್ಥಳಕ್ಕೆ ಬೆಳಗಾವಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾನಿಂಗ ನಂದಗಾಂವಿ, ಅಥಣಿ ಡಿವೈಎಸ್‌ಪಿ ಶ್ರೀಪಾದ ಜಲ್ಲೆ, ಸಿಪಿಐ ರವೀಂದ್ರ ನಾಯ್ಕಡಿ, ಪಿಎಸ್‌ಐಗಳಾದ ಶಿವರಾಜ ಧರಿಗೋಣ, ಶಿವಾಜಿ ಪವಾರ ಭೇಟಿ ನೀಡಿದ್ದಾರೆ.
*ವರದಿ ರವಿ ಬಿ ಕಾಂಬಳೆ ಬೆಳಗಾವಿ