ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಕೈಜೋಡಿಸಿ: ನ್ಯಾಯವಾದಿ ಎಮ್.ಎನ್.ಕೊಪರ್ಡೆ
ವರದಿ :ಸಂತೋಷ ಮುಗಳಿ
ಸಮೀರವಾಡಿ: ಮಕ್ಕಳು ದೇಶದ ಸಂಪತ್ತು ಆದರೆ, ಇಂದು ಮಕ್ಕಳನ್ನು ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿದೆ. ಆದ್ದರಿಂದ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗಾಗಿ ತಾವೆಲ್ಲರೂ ಕೈಜೊಡಿಸಬೇಕಿದೆ ಎಂದು ನ್ಯಾಯವಾದಿ ಎಮ್.ಎನ್.ಕೊಪರ್ಡೆ ಹೇಳಿದರು.
ಅವರು ಜೂ.24 ಸೋಮವಾರದಂದು ಗ್ರಾಮದ ಸೋಮೈಯಾ ವಿನಯ ಮಂದಿರ ಪ್ರೌಢ ಶಾಲೆಯಲ್ಲಿ , ಬಾಗಲಕೋಟ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಬನಹಟ್ಟಿ ಹಾಗೂ ವಿವಿಧ ಏಳು ಸಂಗಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಬಾಲ ಕಾರ್ಮಿಕ ರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡುತ್ತಾ, ಬಾಲ ಕಾರ್ಮೀಕ ಪದ್ದತಿಯಿಂದ ಲಕ್ಷೋಪ ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ತಮ್ಮ ಬಾಲ್ಯದ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರ ಮಕ್ಕಳನ್ನು ರಕ್ಷಿಸಲು ಕಟ್ಟುನಿಟ್ಟಿನ ಕನೂನುಗಳನ್ನು ಜಾರಿಗೆ ತಂದಿದೆ. ಸಮಾಜದ ಎಲ್ಲರೂ ಸೇರಿ ಮಕ್ಕಳನ್ನು ರಕ್ಷಿಸಲು ಸಹಕಾರ ನೀಡಬೇಕು ಎಂದು ಹೇಳಿ, ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾನೂನು ಮತ್ತು ಅದರ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಸಸಿಗೆ ನೀರುಣಿಸುವ ಮೂಲಕ ಸೈದಾಪೂರ ಗ್ರಾಮ ಪಂಚಾಯತಿ ಅಧ್ಯಕ್ಷ ಪಿಯೂಷ ಒಸ್ವಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಗುಲಾಬಿ ಪುಷ್ಪ ನೀಡಿ ಸ್ವಾತಿಸಿದರು.
ಬಳಿಕ ಗೊದಾವರಿ ಸಕ್ಕರೆ ಕಾರ್ಖಾನೆಯ ಆಡಳಿತಾಧಿಕಾರಿ ದಿನೇಶ ಶರ್ಮಾ ಮಾತನಾಡಿ, ಬಾಲ ಕಾರ್ಮಿಕ ಪದ್ದತಿ ಬಡತನ, ಅನಕ್ಷರತೆ ಮತ್ತು ಆಥಿಕವಾಗಿ ಹಿಂದುಳಿದಾಗ ಮಕ್ಕಳನ್ನು ದುಡಿಯಲು ಕಳುಹಿಸುತ್ತಾರೆ. ಅದರಿಂದ ಬರುವ ಹಣದಲ್ಲಿ ಪಾಲಕರು ಸಂತೋಷ ಪಡುತ್ತಾರೆ. ಅದಕ್ಕೆ ಸುತ್ತಮುತ್ತಲಿನ ಚಿಕ್ಕ ವಯಸ್ಸಿನ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಮಾಡಿ, ಮಕ್ಕಳ ಹಕ್ಕನ್ನು ರಕ್ಷಿಸಿ, ಮಕ್ಕಳು ದೇಶದ ಭವಿಷ್ಯ, ಸಮಾಜದ ತಪ್ಪು ತಿಳುವಳಿಕೆಯನ್ನು ತೆಗೆದು ಹಾಕಬೇಕು ಎಂದು ಹೇಳಿದರು.
ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ಸರ್ಕಾರ ಸಾಕಷ್ಟು ಕಟ್ಟು ನಿಟ್ಟಿನ ಕಾನೂನುಗಳನ್ನು ಮತ್ತು ಮಕ್ಕಳನ್ನು ರಕ್ಷಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಬಿಸಿಯೂಟ, ಪಠ್ಯ ಪುಸ್ತಕ, ಹಾಗೂ ಸಮವಸ್ತ್ರ ಇಂತಹ ಬಹಳಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ. ಅದರ ಸದುಪಯೋಗ ಪಡಿಸಿಕೊಳ್ಳಲು ಸುತ್ತಲಿನ 14 ವಯಸ್ಸಿನೊಳಗಿನ ಮಕ್ಕಳಿಗೆ ತಿಳಿ ಹೇಳಬೇಕು ಮತ್ತು ಎಲ್ಲಿಯಾದರೂ ಮಕ್ಕಳನ್ನು ಬಲವಂತವಾಗಿ ದುಡಿಸಿಕೊಳ್ಳುವುದು ಕಂಡು ಬಂದರೆ ತಕ್ಷಣ ಮಕ್ಕಳ ಸಹಾಯವಾನಿ 1098 ಗೆ ಕರೆ ಮಾಡಿ ಮಾಹಿತಿ ನಿಡಬೇಕು ಎಂದು ಮಜದೂರ ಯುನಿಯನ್ ಅಧ್ಯಕ್ಷ ಬಸವರಾಜ ಪೂಜೇರಿ ಕರೆ ನಿಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಪಿ ಎಸ್ ಬಾಣಕಾರ, ಸಂಯೋಜನಾಧಿಕಾರಿ ಬಿ ಎಮ್ ಬಡಿಗೆರ, ಪಿಡಿ ಭಸ್ಮೆ, ಪಿಡಿಓ ಸಿ ಎ ಹಿರೇಕುರುಬರ, ಕಾರ್ಖಾನೆಯ ಆಡಳಿತಾಧಿಕಾರಿ ಆರ್ ವ್ಹಿ ಸೊನವಾಲಕರ್, ಎಮ್ ರಾಮಚಂದ್ರ, ಸುನಿಲ ಅಕ್ಕತಂಗೇರಹಾಳ, ಮುಖ್ಯೋಪಾಧ್ಯಾಯ ವ್ಹಿ ಎಚ್ ಭಜಂತ್ರಿ, ಬಿ ಎಸ್ ಶೀಳ್ಳೀನ, ಎಸ್ ಬಿ ಭೂಸರಡ್ಡಿ, ಹಾಗೂ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಪಾಲಕರು ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು,
ಶಿಕ್ಷಕ ಎಸ್ ಎ ಕನಕರಡ್ಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಪಿಡಿಓ ಸಿ ಎ ಹಿರೇಕುರುಬರ ವಂದಿಸಿದರು
ಸಮೀರವಾಡಿಯ ಸೋಮೈಯಾ ವಿನಯ ಮಂದಿರ ಪ್ರೌಢ ಶಾಲೆಯಲ್ಲಿ ಬಾಲ ಕಾರ್ಮಿಕ ರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ನ್ಯಾಯವಾದಿ ಎಮ್ ಎನ್ ಕೊಪರ್ಡೆ ಮಾತನಾಡುತ್ತಿರುವುದು.