ಮಕ್ಕಳ ಸಾಹಿತ್ಯ ಅಬಾಲವೃದ್ಧರಿಗೂ ಅಪ್ಯಾಯಮಾನವಾಗಿರಬೇಕು: ಪ್ರೊ.ಎಲ್.ಎಸ್.ವಂಟಮೂರೆ

Share the Post Now

ಬೆಳಗಾವಿ.ರಾಯಬಾಗ:* ಸಾಹಿತ್ಯದ ಎಲ್ಲ ಪ್ರಕಾರಗಳಿರುವಷ್ಟೇ ಮೌಲ್ಯಯುತವಾದ ಸ್ಥಾನ ಮಕ್ಕಳ ಸಾಹಿತ್ಯಕ್ಕಿದೆ.ಮಕ್ಕಳ ಸಾಹಿತ್ಯವು ಕೋಮಲವಾದ ಪುಷ್ಪ ಲತೆ ಇದ್ದಂತೆ.ಮಕ್ಕಳ ಮನ ಮುದಗೊಳಿಸಿ ಕಲಿಕೆ ಸುಲಿದ ಬಾಳಿ ಹಣ್ಣಿನಂತಾಗುತ್ತದೆ.ಹಾಗಾಗಿ ಮಕ್ಕಳ ಸಾಹಿತ್ಯ ಅಬಾಲವೃದ್ಧರಿಗೂ ಅಪ್ಯಾಯಮಾನವಾಗಿರಬೇಕು ಎಂದು ಶಿರಗುಪ್ಪಿಯ ಕೆ.ಎಲ್.ಇ. ಸಂಸ್ಥೆಯ ವಾಣಿಜ್ಯ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಸಂಯೋಜಕರು,ಪ್ರಾಧ್ಯಾಪಕರು, ಯುವ ಚುಟುಕು ಕವಿಗಳಾದ ಪ್ರೊ.ಎಲ್.ಎಸ್.ವಂಟಮೂರೆ ಅವರು ಅಭಿಮತ ವ್ಯಕ್ತಪಡಿಸಿದರು.



ಅವರು ಕಳೆದ 6 ರಂದು ಭಾನುವಾರ ತಾಲ್ಲೂಕಿನ ಭಿರಡಿಯ ಶ್ರೀ ಮಹಾದೇವ ಶಿಕ್ಷಣ ಸಂಸ್ಥೆಯ ಅನುದಾನಿತ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಾಯಬಾಗ ತಾಲ್ಲೂಕು ಘಟಕದ ಉದ್ಘಾಟನೆ, ನೂತನ ಪದಾಧಿಕಾರಿಗಳ ಪದಗ್ರಹಣ, ಹಾಗೂ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.



ಹಿಂದಿನ ಕಾಲದಲ್ಲಿ ನಮ್ಮ ಅಜ್ಜಿಯರು ಮಕ್ಕಳನ್ನು ಸುಂದರವಾದ ಜೋಗುಳ ಪದಗಳನ್ನು ಹಾಡಿಯೇ ಮಲಗಿಸುತ್ತಿದ್ದರು. ಇಂದಿನ ತಾಂತ್ರಿಕ ಯುಗದಲ್ಲಿ ಅಜ್ಜಿಯರ ಸ್ಥಾನ ಮೊಬೈಲ್ ಕಂಪ್ಯೂಟರ್ ಟಿ.ವಿ.ಆಕ್ರಮಿಸಿಕೊಂಡು ಆ ಒಂದು ಪದ ಲಾಲಿತ್ಯ ಇಂದು ಕಣ್ಮರೆಯಾಗಿದ್ದರ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದರು.ಮಕ್ಕಳ ಸಾಹಿತ್ಯದಲ್ಲಿ ತೀವ್ರ ಕುತೂಹಲ, ವಿವೇಕ ಜಾಗೃತಿ, ನೈತಿಕ ಮೌಲ್ಯಗಳು, ಪರಿಸರ,ಸಂಸ್ಕೃತಿ ಯಂತಹ ವಿಷಯ ವಸ್ತುಗಳು ಅಡಕವಾಗಿರಬೇಕು. ರಂಜನೆಯ ಜೊತೆಗೆ ಆಲೋಚನಾ ಶಕ್ತಿಯನ್ನೂ ಸಹ ಮಕ್ಕಳ ಸಾಹಿತ್ಯ ಉದ್ದೀಪನಗೊಳಿಸಬೇಕು ಎಂದು ಪ್ರತಿಪಾದಿಸಿದರು. ಈ ಪರಿಷತ್ತು ಆರಂಭದಿಂದ ನಿರಂತರವಾಗಿ ಕ್ರಿಯಾಶೀಲವಾಗಿ ವಿನೂತನ, ಸೃಜನಶೀಲ, ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸಿ, ಎಲೆ ಮರೆಯ ಗ್ರಾಮೀಣ ಅಪೂರ್ವ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ನೀಡುವ ಕಾರ್ಯವನ್ನು ಈ ನೂತನ ಮಕ್ಕಳ ಸಾಹಿತ್ಯ ಪರಿಷತ್ತು ಪ್ರಥಮ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ರಾಂತ ಶಿಕ್ಷಕ ಹಾಗೂ ಸಾಹಿತಿ ಶ್ರೀ ಕುಮಾರ ಅವಳೆ ಮಾತನಾಡಿ “ಮಕ್ಕಳು ತಾವು ಕಲಿಯುವ ಮಾತೃಭಾಷೆಯಲ್ಲಿ ಕವಿತೆ ರಚಿಸಬೇಕು.ಹಿರಿಯರ ಸಾಹಿತ್ಯ ಓದಿ ಅರಿಯಬೇಕು. ನಮ್ಮ ಕನ್ನಡ ಸಾಹಿತ್ಯದಲ್ಲಿ ಕಡಿಮೆ ಓದಿದವರು ಡಿ.ವಿ.ಜಿ. ಸಿಂಪಿ ಲಿಂಗಣ್ಣ, ಹಾಗೂ ಕಾರಂತರು ಅದ್ಬುತ ಸಾಹಿತ್ಯ ರಚಿಸಿ ಸಾಹಿತ್ಯ ಲೋಕದಲ್ಲಿಯೇ ವಿರಾಜಮಾನರಾಗಿ ಜನಮಾನಸದಲ್ಲಿ ನೆಲೆಯೂರಿ ಸಾರಸ್ವತ ಲೋಕ ಸಿರಿವಂತಗೊಳಿಸಿದ್ದು ಅತ್ಯಂತ ಗಮನಾರ್ಹ ಎಂದು ಹೇಳಿ, ಮಕ್ಕಳ ಮನಸ್ಸು ಬಿಳಿ ಹಾಳೆ ಇದ್ದ ಹಾಗೆ ಶಿಕ್ಷಕರು ಅವರಿಗೆ ಚೆನ್ನಾಗಿ ಸಂಸ್ಕಾರ ನೀಡಿದರೆ ಅವರನ್ನೂ ಸಹ ನಾವು ಕವಿಗಳನ್ನಾಗಿ ಮಾಡಲು ಸಾಧ್ಯ ಎಂದು ಹೇಳಿದರು. ಇದಕ್ಕೂ ಮೊದಲು ಆಗಮಿಸಿದ್ದ ಗಣ್ಯ ಮಹೋದಯರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ವೇದಿಕೆ ಮೇಲಿನ ಗಣ್ಯರನ್ನು ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಪರವಾಗಿ ಆತ್ಮೀಯವಾಗಿ ಸತ್ಕರಿಸಲಾಯಿತು.
ನೂತನವಾಗಿ ನೇಮಕಗೊಂಡ ತಾಲ್ಲೂಕಿನ ಎಲ್ಲ ಪದಾಧಿಕಾರಿಗಳಿಗೆ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀ ಸಿದ್ದರಾಮ ನಿಲಜಗಿ ಅವರು ಪ್ರಮಾಣ ಪತ್ರಗಳನ್ನು ನೀಡಿ ಪದಗ್ರಹಣ ಮಾಡಿಸಿ ಸಕಲರಿಗೂ ಶುಭ ಕೋರಿದರು.ಉದ್ಘಾಟಕರಾಗಿ ಆಗಮಿಸಿದ್ದ ಭಿರಡಿ ಗ್ರಾ.ಪಂ.ನೂತನ ಅಧ್ಯಕರು,ಉದ್ಯಮಿಗಳಾದ ಶ್ರೀ ಸದಾಶಿವ ವ.ದೇಶಿಂಗೆ ಅವರು ಮಾತನಾಡಿ “ನಮ್ಮ ಗ್ರಾಮದಲ್ಲಿ ಇಂದು ನೂತನ ಮಕ್ಕಳ ಸಾಹಿತ್ಯ ಪರಿಷತ್ ಉದ್ಘಾಟನೆಗೊಳ್ಳುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ ಎಂದು ಹೇಳಿ, ಈ ಪರಿಷತ್ತು ತಾಲ್ಲೂಕಿನ ತುಂಬ ಅರಳುವ ಉದಯೋನ್ಮುಖ ಪ್ರತಿಭಾವಂತ ಮಕ್ಕಳ ಹೃನ್ಮನ ಗೆಲ್ಲುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.


ನಂತರ ನಡೆದ ಬಾಲ ಕವಿಗೋಷ್ಠಿಯಲ್ಲಿ ತಾಲ್ಲೂಕಿನ ಬೇರೆ ಬೇರೆ ಗ್ರಾಮಗಳಿಂದ ಆಗಮಿಸಿದ 25 ಕ್ಕೂ ಹೆಚ್ಚು ಬಾಲ ಕವಿಗಳು ತಮ್ಮ ಸ್ವರಚಿತ ಪುಟ್ಟ ಪುಟ್ಟ ಕವಿತೆಗಳನ್ನು ವಾಚಿಸಿ ಉಪಸ್ಥಿತರಿದ್ದ ಎಲ್ಲ ಪ್ರೇಕ್ಷಕರ ಗಮನ ಸೆಳೆದು ವೇದಿಕೆಯ ಮೇಲಿನ ಗಣ್ಯ ಮಹೋದಯರ ಪ್ರಶಂಸೆಗೆ ಪಾತ್ರರಾದರು.ಎಲ್ಲ ಮಕ್ಕಳ ಕವಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಮ.ಸಾ.ಪ.ತಾಲ್ಲೂಕು ಘಟಕದ ಅಧ್ಯಕ್ಷ ಕು.ಅಮರ ಕಾಂಬಳೆ ಶ್ರೀ ಶಿವಪ್ಪ ಭೀ. ಕುಮಟೋಳೆ, ಶ್ರೀ ವಿಜಯಕುಮಾರ ಮಾನೆ,ತಾಲ್ಲೂಕು ಕ.ರ.ವೇ. ಅಧ್ಯಕ್ಷ ಶ್ರೀ ಅಶೋಕ ಅಂಗಡಿ, ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಶ್ರೀ ಅನೀಲ ಶೆಟ್ಟಿ,ಭಿರಡಿ ಪ್ರಾಥಮಿಕ ಶಾಲೆಯ ಪ್ರದಾನ ಗುರುಗಳು,ಮ.ಸಾ.ಪ.ಘಟಕದ ಸಕಲ ಪದಾಧಿಕಾರಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು. ಭಿರಡಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಅಪ್ಪಾಸಾಬ ಸುತಾರ ಸ್ವಾಗತಿಸಿದರು. ಮ.ಸಾ.ಪ.ಘಟಕದ ಗೌರವಾಧ್ಯಕ್ಷರು, ಪ್ರಾಧ್ಯಾಪಕರಾದ ಡಾ.ಜಯವೀರ ಎ.ಕೆ.ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಜೇಂದ್ರ ಕಾಂಬಳೆ ಹಾಗೂ ಕು.ರುಕ್ಮಿಣಿ ಪಾಂಡ್ರೆ ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಸುರೇಖಾ ಕುಳ್ಳೊಳ್ಳಿ ವಂದಿಸಿದರು.

ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!