ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ದೊಡ್ಡ ದೊಡ್ಡ ಮಳಿಗೆಗಳ ನಾಮಫಲಕದಲ್ಲಿ ಮೊದಲ ಪ್ರಾಶಸ್ತ್ಯ ಕನ್ನಡಕ್ಕೆ ನೀಡದ ಮಾಲೀಕರಿಗೆ ಪಾಲಿಕೆ ಆಯುಕ್ತ ಅಶೋಕ ದುಡುಗುಂಟಿ ಸ್ವತಃ ತಾವೇ ತಪಾಸಣೆ ನಡೆಸಿ ಗುರುವಾರ ನೋಟಿಸ್ ನೀಡಿ ಬಿಸಿ ಮುಟ್ಟಿಸಿದ್ದಾರೆ.ಬೆಳಗಾವಿ ನಗರದಲ್ಲಿ ವ್ಯಾಪಾರ ವಹಿವಾಟು ನಡೆಸುವ ಮಳಿಗೆಗಳ ಮೇಲೆ ಕಡ್ಡಾಯವಾಗಿ 60% ಕನ್ನಡದಲ್ಲಿಯೇ ನಾಮಫಲಕ ಅಳವಡಿಸಬೇಕೆಂಬ ನಿಯಮ ಇದ್ದರೂ ಕನ್ನಡಕ್ಕೆ ಪ್ರಾಶಸ್ತ್ಯ ನೀಡದೆ ಆಂಗ್ಲ ಹಾಗೂ ಮರಾಠಿ ಭಾಷೆಗೆ ಮೊದಲ ಆದ್ಯತೆ ತೋರುವ ದೊಡ್ಡ ದೊಡ್ಡ ಅಂಗಡಿ ಮಾಲೀಕರಿಗೆ ಮಹಾನಗರ ಪಾಲಿಕೆಯಿಂದ ಬಿಸಿ ಮುಟ್ಟಿಸುವ ಕಾರ್ಯವನ್ನು ಆಯುಕ್ತ ದುಡಗುಂಟಿ ಮಾಡಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.ನಗರದ ಚನ್ನಮ್ಮ ವೃತ್ತ, ಗಣಪತಿ ಗಲ್ಲಿ, ಬಿಮ್ಸ್ ಎದುರಿನ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಬಟ್ಟೆ ಅಂಗಡಿಯ ಮಾಲೀಕರು ಅಕ್ರಮವಾಗಿ ಮಳಿಗೆಯ ಮುಂಭಾಗದಲ್ಲಿರುವ ಫುಟ್ ಪಾತ್ ಗಳ ಮೇಲೆ ವ್ಯಾಪಾರ ವಹಿವಾಟು ನಡೆಸಿ ಪಾಲಿಕೆ ಆದಾಯಕ್ಕೆ ಹಾಗೂ ಸುಗಮ ಸಂಚಾರಕ್ಕೆ ಕಂಟಕವಾಗಿದ್ದನ್ನು ತೆರವುಗೊಳಿಸುವಂತೆ ಖಡಕ ಎಚ್ಚರಿಕೆಯನ್ನು ಪಾಲಿಕೆ ಆಯುಕ್ತರು ಮಾಡಿದ್ದಾರೆ.