ಹೈದರಾಬಾದ್: ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ಕಾನ್ಸ್‌ಟೇಬಲ್ ಒಬ್ಬ ತನ್ನ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಚಾಕು ಇರಿದಿರುವ ಘಟನೆ ಮೆಹಬೂಬ್‌ನಗರದಲ್ಲಿ ನಡೆದಿದೆ.
ಚಾಕುವಿನ ಸರ್ಕಲ್ ಇನ್ಸ್‌ಪೆಕ್ಟರ್‌ನ ಹೊಟ್ಟೆಯ ಭಾಗವನ್ನು ಕಾನ್ಸ್‌ಟೇಬಲ್ ಗಂಭೀರವಾಗಿ ಸೀಳಿದ್ದಾನೆ. ಇನ್ನೂ ಅಚ್ಚರಿಯ ವಿಚಾರವೆಂದರೆ, ಕಾನ್ಸ್‌ಟೇಬಲ್‌ಗೆ ಈ ಕೃತ್ಯ ಎಸಗಲು ಠಾಣೆಯ ಇತರ ಕಾನ್ಸ್‌ಟೇಬಲ್‌ಗಳು ಹಾಗೂ ಕಾನ್ಸ್‌ಟೇಬಲ್‌ನ ಪತ್ನಿ ಶಕುಂತಲಾ ಕೂಡ ಸಹಾಯ ಮಾಡಿದ್ದಾರೆ. ಜನತೆಗೆ ಮಾದರಿಯಾಗಬೇಕಾದ ಪೊಲೀಸರು ತಮ್ಮ ತಮ್ಮಲ್ಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಆಘಾತಕ್ಕೆ ಕಾರಣವಾಗಿದೆ. ಮೆಹಬೂಬ್ ನಗರ ಜಿಲ್ಲಾ ಕೇಂದ್ರದಲ್ಲಿರುವ ಸಿಸಿಎಸ್ (ಕೇಂದ್ರ ಅಪರಾಧ ಪೊಲೀಸ್ ಠಾಣೆ)ಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಫ್ತಾರ್ ಅಹ್ಮದ್ ಮೇಲೆ ಗುರುವಾರ ಬೆಳಗ್ಗೆ ಹತ್ಯೆ ಯತ್ನ ನಡೆದಿದೆ.
ಜಿಲ್ಲಾ ಕೇಂದ್ರದ ಪೊಲೀಸ್ ಠಾಣೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್ ಸ್ಟೇಬಲ್ ಜಗದೀಶ್ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಲಾಗಿದೆ. ಸರ್ಕಲ್ ಇನ್ಸ್‌ಪೆಕ್ಟರ್ ಮೇಲೆ ಕಾನ್ ಸ್ಟೇಬಲ್ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಫ್ತಾರ್ ಅಹ್ಮದ್‌ನನ್ನು ಸ್ಥಳೀಯರು ಜಿಲ್ಲಾ ಕೇಂದ್ರದ ಎಸ್ ವಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿಐಜಿ ಚೌಹಾಣ್ ಮತ್ತು ಎಸ್ಪಿ ಹರ್ಷವರ್ಧನ್ ಸ್ಥಳಕ್ಕೆ ಆಗಮಿಸಿ ವಿವರ ಸಂಗ್ರಹಿಸಿದ್ದಾರೆ. ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆದರೆ ಈ ಘಟನೆ ಪೊಲೀಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಸರ್ಕಲ್ ಇನ್ಸ್‌ಪೆಕ್ಟರ್ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಬಳಿಕ ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ಪ್ರಸ್ತುತ ಶಿಫ್ಟ್ ಮಾಡಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಇಫ್ತಾರ್ ಅಹ್ಮದ್, ಜಗದೀಶ್ ಅವರ ಪತ್ನಿಯ ಜೊತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ. ಇದು ಗೊತ್ತಾದ ಬಳಿಕ ಜಗದೀಶ್ ಠಾಣೆಗೆ ಬಂದು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.