ಬೆಂಗಳೂರು ಮಾದರಿಯಲ್ಲಿ ಸುಸಜ್ಜಿತ ಬಾಲ ಭವನ ನಿರ್ಮಾಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ,
ರಾಜ್ಯದಲ್ಲೇ ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ಆರೋಗ್ಯ, ಶಿಕ್ಷಣ, ಮನೋರಂಜನೆಯ ಸಕಾರಾತ್ಮಕ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಿ, ಪೂರ್ಣ ವ್ಯಕ್ತಿತ್ವ ರೂಪಿಸುವ ಉದ್ದೇಶದಿಂದ ಬಾಲಭವನವನ್ನು ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮಿನಿ ರೈಲು, ಫ್ಯಾಂಟಸಿ ಪಾರ್ಕ್, ವಿಜ್ಞಾನ ಉದ್ಯಾನ, ಥೇಯಟರ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಿರುವ ಬೆಂಗಳೂರು ಮಾದರಿಯ ಸುಸಜ್ಜಿತ ಬಾಲಭವನ ನಿರ್ಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜವಾಹರ್ ಬಾಲಭವನ ಸೊಸೈಟಿ ಬೆಂಗಳೂರು, ನಿರ್ಮಿತಿ ಕೇಂದ್ರ ಹಾಗೂ ಬಾಲ ಭವನ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಡಿ.17) ಜಾಧವನಗರದ ಎನ್.ಸಿ.ಸಿ. ಕಚೇರಿಯ ಹಿಂಭಾಗದಲ್ಲಿ ನಡೆದ ಜಿಲ್ಲಾ ಬಾಲಭವನ ಭೂಮಿ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಾಲ ಭವನ ನಿಯೋಜಿತ ಜಾಗೆಯ ಇಂದಿನ ಮೌಲ್ಯ ಸುಮಾರು 100 ಕೋಟಿ ಬೆಲೆ ಬಾಳುತ್ತದೆ. ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ಆಸ್ತಿ ಬಾಲಭವನ ನಿರ್ಮಾಣಕ್ಕೆ ನಮಗೆ ಸಿಕ್ಕಿದ್ದು ಸಂತಸ ತಂದಿದೆ. ಅಂದಾಜು 3 ಎಕರೆ ಜಾಗೆಯಲ್ಲಿ 20 ಕೋಟಿ ಅನುದಾನದಲ್ಲಿ ಬಾಲಭವನ ನಿರ್ಮಾಣವಾಗಲಿದೆ. ಈಗಾಗಲೇ 2 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವಂತ ಜಿಲ್ಲಾ ಕಟ್ಟಡವಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಇಲಾಖೆಯ ಸ್ವಂತ ಕಟ್ಟಡ ನಿಯೋಜಿತ ಜಾಗೆಯಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಒಟ್ಟು 6 ಕೋಟಿ ಅನುದಾನದಲ್ಲಿ ಜಿಲ್ಲಾ ಕಛೇರಿ ನಿರ್ಮಾಣಕ್ಕೆ ಈಗಾಗಲೇ 4 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.
ಈ ವರ್ಷ ಜಿಲ್ಲೆಯಲ್ಲಿ 600 ಮೇಲ್ಪಟ್ಟು ಅಂಗನವಾಡಿ ಮಾಡಲಾಗುವುದು. ಮತ್ತು ಮೇಲ್ದರ್ಜೆಗೇರಿಸುವ ಅಂಗನವಾಡಿಗಳನ್ನು ಸಹ ಪಟ್ಟಿ ಮಾಡಲಾಗಿದೆ. ಈ ವರ್ಷ ಹೆಚ್ಚು ಮಳೆಯಾಗಿರುವ ಕಾರಣ 200 ಅಂಗನವಾಡಿಗಳಿಗೆ ತಲಾ 1 ಲಕ್ಷ ರೂಪಾಯಿಗಳನ್ನು ದುರಸ್ತಿಗೆ ನೀಡಲಾಗಿದೆ .
ಅದೇ ರೀತಿಯಲ್ಲಿ ಸುಮಾರು ಸವದತ್ತಿಯಲ್ಲಿ 10 ಕೋಟಿ ಅನುದಾನದಲ್ಲಿ ಅತಿಥಿ ಗೃಹ, ವಾಣಿಜ್ಯ ಮಳಿಗೆಗಳು ಉದ್ಘಾಟಿಸಲಾಗಿದೆ. ಕಳೆದ ವರ್ಷ ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವಯಕ್ತಿಕ ಸಾಲ ಸೌಲಭ್ಯ ನೀಡಲಾಗಿದೆ ಎಂದರು.
ಬೆಂಗಳೂರು ನಂತರ ಬೆಳಗಾವಿಯಲ್ಲಿ ದೊಡ್ಡ ಮಟ್ಟದಲ್ಲಿ ಬಾಲ ಭವನ ನಿರ್ಮಾಣ ಆಗುತ್ತಿದೆ. ಸದ್ಯಕ್ಕೆ ಬಾಲ ಭವನ ನಿರ್ಮಾಣಕ್ಕೆ 20 ಕೋಟಿ ಅನುದಾನ ಮಿಸಲಿದೆ. ಅನುದಾನದ ಯಾವುದೇ ಕೊರತೆಯಿಲ್ಲ.
ಒಂದು ವೇಳೆ ಅನುದಾನದ ಕೊರತೆಯಾದಲ್ಲಿ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಅತೀ ಸುಂದರ ಮಾದರಿಯ ಬಾಲಭವನ ನಿರ್ಮಾಣಕ್ಕೆ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದರು.
ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಮಾತನಾಡಿ , ಮಕ್ಕಳ ಆಟ, ಕ್ರೀಡೆ, ಮನೋರಂಜನೆ ಉತ್ತಮ ಹವ್ಯಾಸಕ್ಕೆ ನಗರಕ್ಕೆ ಅಗತ್ಯವಿರುವ ಬಾಲಭವನ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಷಯ. ಮಕ್ಕಳಿಗೆ ಮನೋರಂಜನೆ ಹಾಗೂ ಮನೋವಿಕಾಸಕ್ಕೆ ಬಾಲ ಭವನ ಅತ್ಯಗತ್ಯವಾಗಿದೆ.
ಮಕ್ಕಳ ವ್ಯಕ್ತಿತ್ವ ವಿಕಸನ ವೃದ್ಧಿಗೆ ಅಗತ್ಯವಾದ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಕ್ರೀಡೆಯಂತ ಪಠ್ಯೇತರ ಚಟುಟಿಕೆಗಳ ತರಬೇತಿ ನೀಡುವುದು. ಮಕ್ಕಳು ವೈಯಕ್ತಿಕ ಮತ್ತು ಮಾನಸಿಕವಾಗಿ ವಿಕಾಸ ಹೊಂದುವಂತೆ ನೋಡಿಕೊಳ್ಳುವುದು ಬಾಲ ಭವನದ ಮುಖ್ಯ ಧ್ಯೇಯ ಎಂದು ಶಾಸಕ ಆಸೀಫ್ (ರಾಜು) ಸೇಠ ಅವರು ಹೇಳಿದರು.
ರಾಜ್ಯ ಬಾಲ ಭವನ ಅಧ್ಯಕ್ಷರು ನಾಯ್ಡು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಸಿದ್ದೇಶ್ವರ ಎನ್. ಬೆಂಗಳೂರು ಜವಾಹರ ಬಾಲಭವನ ಕಾರ್ಯದರ್ಶಿ ಬಿ.ಎಚ್ ನಿಶ್ಚಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ್, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕರಾದ ಶೇಖರಗೌಡ ಕುರಡಗಿ, ನಗರ ಸೇವಕ ಸಂದೀಪ ಜೀರಗ್ಯಾಳ, ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಶಿಶು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಾಲಭವನ ನಿರ್ಮಾಣ: ಭೂಮಿಪೂಜೆ:
ಕಾರ್ಯಕ್ರಮದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಬೆಳಗಾವಿ ಉತ್ತರ ವಿಧಾನಸಭಾ ಶಾಸಕ ಆಸೀಫ್ (ರಾಜು) ಸೇಠ ಅವರು ಬಾಲ ಭವನ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಬಾಲ ಭವನ ಅಧ್ಯಕ್ಷರು ನಾಯ್ಡು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಸಿದ್ದೇಶ್ವರ ಎನ್. ಬೆಂಗಳೂರು ಜವಾಹರ ಬಾಲಭವನ ಕಾರ್ಯದರ್ಶಿ ಬಿ.ಎಚ್ ನಿಶ್ಚಲ್ ಹಾಜರಿದ್ದರು.
***