ಮೊದಲ ತ್ರೈಮಾಸಿಕ ಕೆಡಿಪಿ ಸಭೆ; ಕಾಳಜಿ ಕೇಂದ್ರ, ಗೋಶಾಲೆ ಆರಂಭಿಸಲು ನಿರ್ದೇಶನ  ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಚಿವ :ಜಾರಕಿಹೊಳಿ ಸೂಚನೆ

Share the Post Now

ಬೆಳಗಾವಿ :ಕಾಳಜಿ ಕೇಂದ್ರ, ಗೋಶಾಲೆ ಆರಂಭಿಸಲು ನಿರ್ದೇಶನ  ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆಜಿಲ್ಲೆಯ ಮಳೆಯಾಗುತ್ತಿದ್ದರೂ ಕೆಲವೆಡೆ ಬರದ ಛಾಯೆ ಇದೆ. ಆದ್ದರಿಂದ ಅವಶ್ಯಕತೆ ಆಧರಿಸಿ ಕಾಳಜಿ ಕೇಂದ್ರಗಳು, ಮೇವಿನ ಕೊರತೆ ಇರುವ ಕಡೆಗಳಲ್ಲಿ ಗೋಶಾಲೆ ಆರಂಭಿಸಬೇಕು. ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸುವರ್ಣ ವಿಧಾನಸೌಧದ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ 2023-24 ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(20 ಅಂಶಗಳು ಸೇರಿದಂತೆ) ಜೂನ್ 2023 ಮಾಹೆಯ ಅಂತ್ಯದವರೆಗಿನ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಹೊಲಗಳಿಗೆ ಹೋಗುವ ರಸ್ತೆಗಳನ್ನು ನಿರ್ಮಿಸಿಕೊಡಲು ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

2019-20 ನೇ ಸಾಲಿನಲ್ಲಿ ಪ್ರವಾಹ/ಅತಿವೃಷ್ಟಿ ಯಿಂದ ಮನೆ ಕಳೆದುಕೊಂಡಿರುವವರಿಗೆ ಪರಿಹಾರ ಒದಗಿಸಲು ಅನುಕೂಲವಾಗುವಂತೆ ಕೂಡಲೇ ಮರು ಸಮೀಕ್ಷೆ ಮಾಡಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳಿಸಬೇಕು ಎಂದು ಹೇಳಿದರು.

ಅಥಣಿ ಭಾಗದಲ್ಲಿ ದ್ರಾಕ್ಷಿ ಬೆಳೆಗಾರರ ಸಭೆಯನ್ನು ನಡೆಸಿ ವಿಮಾ ಯೋಜನೆ ಸೇರಿದಂತೆ ಅಗತ್ಯವಿರುವ ಮಾಹಿತಿಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಕೆಲವೆಡೆ ಬರಗಾಲ ಪರಿಸ್ಥಿತಿ ಇರುವ ಬಗ್ಗೆ ಶಾಸಕರು ಗಮನಸೆಳೆದಾಗ ಮೇವಿನ ಕೊರತೆ ಇದ್ದಲ್ಲಿ ಅಗತ್ಯತೆ ಆಧರಿಸಿ ಗೋಶಾಲೆಗಳನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಅವರು ಖುದ್ದಾಗಿ ಪರಿಶೀಲಿಸಿ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ರಸ್ತೆ ಅಗೆತ; ನಿಗಾ ವಹಿಸಲು ನಿರ್ದೇಶನ:

ರಸ್ತೆ ದುರಸ್ತಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಕೇಬಲ್ ಅಳವಡಿಸಲು ಕೆಲವೆಡೆ ರಸ್ತೆ ಅಗೆಯಲಾಗುತ್ತಿದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಸೂಚನೆ ನೀಡಿದರು.

ಅನುಮತಿ ಇಲ್ಲದೇ ರಸ್ತೆ ಅಗೆಯುವುದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು. ನಿಯಮಾವಳಿ ಪ್ರಕಾರ ದುಡ್ಡು ಪಾವತಿಸಿ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಅಂತಹ ಕಾಮಗಾರಿಗಳನ್ನು ತಡೆಹಿಡಿಯಬೇಕು ಎಂದು ನಿರ್ದೇಶನ ನೀಡಿದರು.

ಇಸ್ಲಾಂಪುರ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಕೂಡಲೇ ಪ್ರಕರಣಗಳನ್ನು ದಾಖಲಿಸಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನ್ನಭಾಗ್ಯ ಯೋಜನೆಯಡಿ ಎಲ್ಲ ಅರ್ಹ ಫಲಾನುಭವಿಗಳಿಗೆ ನಗದು ಜಮೆ ಮಾಡಬೇಕು ಎಂದು ಹೇಳಿದರು.

ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ:

ಬೆಳಗಾವಿ ನಗರದಲ್ಲಿ ನಿರ್ಮಿಸಲು ಉದ್ಧೇಶಿಸಲಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸಭೆಯಲ್ಲಿ ಮಾಹಿತಿಯನ್ನು ನೀಡಿದರು.

ಸದ್ಯಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಲಭ್ಯವಿರುವ ಒಟ್ಟಾರೆ 9 ಎಕರೆ ಜಾಗೆಯಲ್ಲಿ ಎರಡು ಎಕರೆ ಜಾಗೆಯನ್ನು ಬಳಸಿಕೊಂಡು ಜಿಲ್ಲಾಧಿಕಾರಿ ಕಚೇರಿಯನ್ನು ನಿರ್ಮಿಸಲು ಉದ್ಧೇಶಿಸಲಾಗಿದೆ.

ಉಳಿದ ಜಾಗೆಯಲ್ಲಿ ಪಾರ್ಕಿಂಗ್, ಉದ್ಯಾನ ಮತ್ತಿತರ ಮೂಲಸೌಕರ್ಯ ಒದಗಿಸಲಾಗುವುದು. ಈ ಯೋಜನೆ ಕುರಿತು ಜನ ಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಬೇಕೆಂದು ತಿಳಿಸಿದರು.

ಎಲ್ಲ ವಿಕಲಚೇತನರಿಗೆ ವಾಹನ-ಸಚಿವೆ ಹೆಬ್ಬಾಳಕರ್:

ರಾಜ್ಯದಲ್ಲಿರುವ ಎಲ್ಲ ವಿಕಲಚೇತನರಿಗೆ ಅವರ ಅಗತ್ಯತೆ ಆಧರಿಸಿ ಒಂದು ಬಾರಿಗೆ ದ್ವಿಚಕ್ರ ವಾಹನ ನೀಡಲು ತೀರ್ಮಾನಿಸಲಾಗಿದೆ. ಆದ್ದರಿಂದ ಅರ್ಹ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಹೆಸ್ಕಾಂ ನಿರ್ಲಕ್ಷ್ಯ ದಿಂದ ವಿದ್ಯುತ್ ತಂತಿ ತಗುಲಿ ಮರಣ ಹೊಂದಿರುವವರಿಗೆ ಕೂಡಲೇ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಬಾಡಿಗೆ ಕಟ್ಟಡಗಳಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಸಾಧ್ಯವಿದ್ದಷ್ಟು ಶಾಲಾ ಆವರಣದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ಆದ್ಯತೆ ನೀಡಬೇಕು. ಈ ರೀತಿ ಮಾಡುವುದರಿಂದ ಅಂಗನವಾಡಿ ಮಕ್ಕಳು ಮುಂದೆ ಅದೇ ಶಾಲೆಗೆ ಪ್ರವೇಶ ಪಡೆಯಲು ಅನುಕೂಲವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆ; ಫಲಾನುಭವಿಗಳ ನೋಂದಣಿಗೆ ಸೂಚನೆ:

ಗೃಹಲಕ್ಷ್ಮೀ ಯೋಜನೆಗೆ 17 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಜುಲೈ 20 ರಿಂದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ನೋಂದಣಿ ಪ್ರಕ್ರಿಯೆ ಹಾಗೂ ನೋಂದಾಯಿತ ಫಲಾನುಭವಿಗಳ ಸಂಖ್ಯೆ ಮತ್ತಿತರ ವಿಷಯಗಳನ್ನು ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಹಶೀಲ್ದಾರರಿಗೆ ಸೂಚನೆ ನೀಡಿದರು.

ಸರಕಾರದ ಯೋಜನೆಯನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿಗಳನ್ನು ನೇಮಿಸಲಾಗಿದೆ.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಗೃಹಲಕ್ಷ್ಮೀ ಯೋಜನೆ ಕುರಿತು ಪ್ರತಿದಿನ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಶಾಸಕ ಮಹಾಂತೇಶ ಕೌಜಲಗಿ ಅವರು ನರೇಗಾ ಯೋಜನೆಯಡಿ ಹೊಲಗಳಿಗೆ ಹೋಗುವ ರಸ್ತೆಗಳನ್ನು ನಿರ್ಮಿಸಿಕೊಡಬೇಕು. ಜಲಜಜೀವನ ಮಿಷನ್ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಕೂಡಲೇ ಹಸ್ತಾಂತರಿಸಬೇಕು.

ಧಾರವಾಡ ಜಿಲ್ಲೆಗೆ ಹೋಲಿಸಿದರೆ ಪಕ್ಕದಲ್ಲೇ ಇರುವ ಬೆಳಗಾವಿ ಜಿಲ್ಲೆಯ ರೈತರಿಗೆ ಬೆಳೆವಿಮೆ ಪರಿಹಾರದಲ್ಲಿನ ತಾರತಮ್ಯ ಇದುವರೆಗೆ ಸರಿಪಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಆಸ್ಪತ್ರೆಯಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಕೊರತೆ ಕುರಿತು ಪ್ರಸ್ತಾಪಿಸಿದ ಶಾಸಕ ಮಹಾಂತೇಶ ಕೌಜಲಗಿ, ದಾಸ್ತಾನು ಇದ್ದಾಗಲೂ ಬೇಡಿಕೆ ಸಲ್ಲಿಸಿದರೆ ಸಕಾಲದಲ್ಲಿ ಔಷಧ ಸಾಮಗ್ರಿ ಪೂರೈಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಶಾಸಕ ಭರಮಗೌಡ(ರಾಜು) ಕಾಗೆ, ಕಾಗವಾಡ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲವೆಡೆ ಐದು ವರ್ಷಗಳ ಹಿಂದೆ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿರುವವರಿಗೆ ಇದುವರೆಗೆ ಪರಿಹಾರ ದೊರಕಿರುವುದಿಲ್ಲ ಎಂದರು.

ಶಾಪುರದಲ್ಲಿ 90 ಮನೆಗಳ ಕೆಟಗರಿ ವರ್ಗೀಕರಣ ಅಸಮರ್ಪಕವಾಗಿ ಮಾಡಲಾಗಿದ್ದು, ಇದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ದ್ರಾಕ್ಷಿ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ಕಾಗವಾಡ ಮತಕ್ಷೇತ್ರದಲ್ಲಿ ಮೇವಿನ ಕೊರತೆಯನ್ನು ನೀಗಿಸಬೇಕು ಎಂದರು.

ಕ್ಷೇತ್ರದಲ್ಲಿ ಒಂದೆಡೆ ಬರಗಾಲ ಪರಿಸ್ಥಿತಿ ಇದ್ದರೆ ಇನ್ನೊಂದೆಡೆ ಮಳೆ ಜಾಸ್ತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಾಸಕರಾದ ಆಸಿಫ್(ರಾಜು) ಸೇಠ್, ಬೆಳಗಾವಿ ನಗರದಲ್ಲಿ ಇರುವ ಸರಕಾರಿ ಆಸ್ಪತ್ರೆಯಲ್ಲಿ ಶೇ.60 ರಷ್ಟು ನರ್ಸಿಂಗ್ ಸಿಬ್ಬಂದಿ ಕೊರತೆ ಇದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು

Leave a Comment

Your email address will not be published. Required fields are marked *

error: Content is protected !!