ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ವಿಧಾನಸಭೆ ಚುನಾವಣೆಗೆ ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಬೆನ್ನಲ್ಲೇ ಅಸಮಾಧಾನಗೊಂಡಿದ್ದ ಲಕ್ಷ್ಮಣ ಸವದಿ ವಿಧಾನ ಪರಿಷತ್ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಲಕ್ಷ್ಮಣ ಸವದಿ ಅವರು ಪಕ್ಷದ ಧ್ವಜ ನೀಡುವ ಮೂಲಕ ಕಾಂಗ್ರೆಸ್‍ಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಈ ವೇಳೆ ಮಾತನಾಡಿದ ಅವರು, ನಾನು ಸೋತರೂ ನನಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದರು. ಅದನ್ನು ಮರೆತು ಈಗ ಪಕ್ಷ ಬಿಡುತ್ತಿದ್ದಾರೆ ಎಂದು ಈಗ ಬಿಜೆಪಿ ನಾಯಕರು ಒಂದು ಚರ್ಚೆ, ಟೀಕೆ ಮಾಡುತ್ತಿದ್ದಾರೆ. ಆದರೆ ಹೈಕಮಾಂಡ್ ನಾಯಕರು ಒಂದು ವಚನ ಕೊಟ್ಟಿದ್ದರು. ಅಥಣಿಯಿಂದ 2023ರ ಚುನಾವಣೆಗೆ ಟಿಕೆಟ್ ನೀಡುತ್ತೇನೆ ಎಂದಿದ್ದರು. ಆದರೆ ಯಾವುದೇ ಮಾಹಿತಿ ಇಲ್ಲದೆ ನನ್ನನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದರು. ಯಾವುದೇ ಜವಾಬ್ದಾರಿಯನ್ನು ನೀಡಲಿಲ್ಲ ಎಂದು ಕಿಡಿಕಾರಿದರು.
ಕೊಟ್ಟ ಮಾತಿನಂತೆ ಈ ಬಾರಿಯ ಚುನಾವಣೆಗೆ ಟಿಕೆಟ್ ನೀಡುವಂತೆ ಕೇಳಿದೆ. ವಲಸೆ ಬಂದ 17 ಜನರಿಗೆ ಟಿಕೆಟ್ ಕೊಡುತ್ತೇವೆ ಅಂತ ಮಾತು ಕೊಟ್ಟಿದ್ದೇವೆ ಅಂತ ಹೇಳಿ ಮಾತು ತಪ್ಪಿದರು. ಇವರು ವಚನ ಭ್ರಷ್ಟರು ಅನ್ನೋದನ್ನ ಈಗ ಒಪ್ಪುತ್ತಾರೋ? ಎಂದು ಪ್ರಶ್ನಿಸಿದ ಅವರು, ನಾನು ಎಲ್ಲಿ ಇರುತ್ತೇನೋ ಅಲ್ಲಿ ಪ್ರಾಮಾಣಿಕತೆ, ಶ್ರದ್ಧೆ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಬಿಜೆಪಿಗಿಂತ ಹೆಚ್ಚಿನ ಶದ್ಧೆಯಲ್ಲಿ ದುಡಿಯುತ್ತೇನೆ ಎಂದರು.