ಗೃಹಲಕ್ಷ್ಮೀ ಯೋಜನೆಯ ಹೊಸ ನೋಂದಣಿ ಸ್ಥಗಿತಗೊಂಡಿಲ್ಲ. ಇಲಾಖೆ ವೆಬ್‌ಸೈಟ್ ನಲ್ಲಿ ಮಾಡಿರುವ ಪ್ರಕಟಣೆ ಬಗ್ಗೆ ನನಗೆ ಗೊತ್ತಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿತ ಫಲಾನುಭವಿಗಳ ಖಾತೆಗೆ ರೂ.2000 ಜಮಾಗೊಳಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗದಿರಲೆಂದು, ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿ ಸಲಾಗಿದ್ದು, ಶೀಘ್ರವೇ ನೋಂದಣಿ ಪುನರಾರಂಭಗೊಳ್ಳಲಿದೆ ಎಂದು ಪ್ರಕಟಿಸಲಾಗಿತ್ತು. ಇಲಾಖೆಯ ಈ ಪ್ರಕಟಣೆ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು.
ವಿಚಾರವಾಗಿ ವಿಧಾನಸೌಧದಲ್ಲಿ ಗುರುವಾರ ಸ್ಪಷ್ಟನೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇಲಾಖೆ ವೆಬ್‌ಸೈಟ್‌ನಲ್ಲಿ ಮಾಡಿರುವ ಪ್ರಕಟಣೆ ಬಗ್ಗೆ ನನಗೆ ಗೊತ್ತಾಗಿಲ್ಲ. ಈ ಬಗ್ಗೆ ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರ ಜೊತೆ ಚರ್ಚೆ ನಡೆಸಿದ್ದೇನೆ. ಯಾಕೆ ಹೀಗೆ ಆಗಿದೆ ಎಂದು ಗೊತ್ತಾಗಿಲ್ಲ ಕೂಡಲೇ ಆ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಬುಧವಾರವೂ 10,000 ನೋಂದಣಿ ಆಗಿದೆ.
ಮುಂಚೆ ಒಂದು ಲಕ್ಷ ದಿಂದ ಐದು ಲಕ್ಷದವರೆಗೆ ಅರ್ಜಿ ಬರುತ್ತಿತ್ತು. ಈಗ ಕಡಿಮೆಯಾಗಿದ್ದು, ದಿನಕ್ಕೆ ಸುಮಾರು 10 ಸಾವಿರ ಅರ್ಜಿ ಬರುತ್ತಿದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್, ನಾವು ಈಗಾಗಲೇ 1.8 ಕೋಟಿ ವರೆಗೆ ಇಲಾಖೆಯಿಂದ ಹಣ ಕಳಿಸಿ ಬಿಟ್ಟಿದ್ದೇವೆ. ನಮ್ಮ ಟಾರ್ಗೆಟ್ 1.28 ಕೋಟಿ ಯಜಮಾನಿಯರಿಗೆ ಹಣ ಸಂದಾಯ ಮಾಡುವುದಾಗಿದೆ. ಯಾರು ಹೊಸ ಪಡಿತರ ಚೀಟಿ ಮಾಡುತ್ತಾರೆ. ಅವರಿಗೂ ಗೃಹಲಕ್ಷ್ಮೀ ಲಾಭ ಸಿಗಲಿದೆ
ನೋಂದಣಿ ಸ್ಥಗಿತದ ಬಗ್ಗೆ ವೆಬ್‌ಸೈಟ್‌ನಲ್ಲಿ ಹೋಗಿರುವುದು ಅಚಾತುರ್ಯದಿಂದ ಆಗಿದೆ. ಈ ಬಗ್ಗೆ ಸಂಬಂಧ ಪಟ್ಟವರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಯಾರೂ ಗೊಂದಲಕ್ಕೀಡಾಗುವುದು ಬೇಡ. ಈ ತರ ಮಾಡಿದವರಿಗೆ ನೋಟಿಸ್ ಜಾರಿ ಮಾಡಲು ತಿಳಿಸಲಾಗಿದೆ. ಇದು ಸಣ್ಣ ವಿಚಾರವಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಯಾರು ಇದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.