ಮೈಸೂರು :ಪ್ರಸ್ತುತ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರದಿಂದ ಸರ್ವಾನುಮತದಿಂದ ಆಯ್ಕೆಯಾದ ಹೆಸರಾಂತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಇತ್ತೀಚೆಗೆ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಆಯ್ಕೆಗೊಳಿಸಿದ ಘನ ಸರಕಾರಕ್ಕೆ ಗೌರವಾಭಿನಂದನೆ ನುಡಿ ಸಮರ್ಪಿಸುವ ಸಾಂದರ್ಭಿಕವಾಗಿ ಮಾತನಾಡುವಾಗ “ನನಗಿಂತಲೂ ಹಿರಿಯರಾದ 92 ವರ್ಷದ ಜ್ಞಾನ ವೃದ್ಧರು, ಹಿರಿಯರು, ಶರಣ ಸಾಹಿತಿಗಳಾದ ಗೋ.ರು.ಚನ್ನಬಸಪ್ಪ ಅವರನ್ನು, ಸಂಗೀತ ಸಾಧಕ ಶ್ರೀ ರಾಜೀವ ತಾರಾನಾಥ ಅವರನ್ನು, ಹಾಗೂ ಕನ್ನಡ ಸಾರಸ್ವತ ಲೋಕದ ವಿಶಿಷ್ಟ ಮೇರು ಸಾಹಿತಿ ಶ್ರೀ ದೇವನೂರು ಮಹಾದೇವ ಅವರಂತಹ ಗಣ್ಯಾತಿ ಗಣ್ಯರು ಇರುವಾಗ ಇಂತಹ ಮಹೋನ್ನತ ಅವಕಾಶ ಅವರಿಗೆ ನೀಡಿದರೆ ಒಳ್ಳೆಯದಿರುತ್ತಿತ್ತು ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದ್ದು ಹಂಸಲೇಖ ಅವರ ವಿಶಾಲ ಮನೋಭಾವಕ್ಕೆ ಹಿಡಿದ ರನ್ನಗನ್ನಡಿ. ಈಗ ನಿಮ್ಮ ಸರಧಿ ಬಂದಿದೆ. ನೀವು ಈ ಬಾರಿ ಈ ಉದ್ಘಾಟನಾ ಕಾರ್ಯ ನೆರವೇರಿಸಬೇಕು ಎಂದು ಸರ್ಕಾರ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ತಾವು ಹೇಳುವ ಆ ಎಲ್ಲ ಮಹೋದಯರಿಗೂ ಈ ಸುವರ್ಣ ಅವಕಾಶ ಬಂದೇ ಬರುತ್ತದೆ ಎಂದು ಅಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳ ಮಾತಿಗೆ ಹಂಸಲೇಖ ಅವರು ಮಾರ್ಮಿಕವಾಗಿಯೇ ತಮ್ಮ ಪ್ರತ್ಯುತ್ತರ ಹಾಗೂ ಅನುಭವಗಳನ್ನು ಹಂಚಿಕೊಂಡಿದ್ದು ಗಮನಾರ್ಹ. “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂಬ ವಚನೋಕ್ತಿಯ ಸದ್ಭಾವ ಮೈಗೂಡಿಸಿಕೊಂಡ ಸರಳ ಸಜ್ಜನಿಕೆಯ ಘನ ಮನ ಸಂಪನ್ನರು. ಇಂದು ಅಧಿಕಾರ, ಗೌರವ, ಪುರಸ್ಕಾರ, ಕುರ್ಚಿಗಾಗಿ, ಹಪಹಪಿಸುವ ಸ್ವಾರ್ಥ ವ್ಯಕ್ತಿಗಳ ನಡುವೆ ಹಂಸಲೇಖ ಅವರು ತಮ್ಮ ಹೃದಯ ವೈಶಾಲ್ಯತೆಯಿಂದ ವಿಭಿನ್ನ ವ್ಯಕ್ತಿತ್ವದಿಂದ “ಆದರ್ಶದ ಆಲದ ಮರ”ವಾಗಿ ಸರ್ವರ ಗಮನ ಸೆಳೆಯುತ್ತಾರೆ.! ನನ್ನಂತಹ ಕಿರಿಯ ವ್ಯಕ್ತಿಯನ್ನು ಈ ಉದ್ಘಾಟನೆಗೆ ಆಹ್ವಾನಿಸಿದ್ದು ,ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕನಸು ಇಂದು ನನಸಾದ ಅಮೋಘ ಘಳಿಗೆಯಾಗಿದೆ. ಅರಮನೆಗೆ ನಾಡಿನ ಎಲ್ಲಾ ವರ್ಗದ ಜನಗಳು ಬರಬೇಕೆಂಬುದು ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಮಹೋನ್ನತ ಹೆಬ್ಬಯಕೆಯೂ ಆಗಿತ್ತು. ಅವರ ಜನಪರ ಕಾಳಜಿ ಹಾಗೂ ಘನ ಕಾರ್ಯಗಳನ್ನು ಔಚಿತ್ಯಪೂರ್ಣವಾಗಿ, ಸೊಗಸಾಗಿ ಅನಾವರಣಗೊಳಿಸಿ ಶ್ಲಾಘಿಸಿದ್ದು ಅತ್ಯಂತ ಸ್ಮರಣೀಯವಾಗಿತ್ತು.
ಡಾ.ಜಯವೀರ ಎ.ಕೆ*
【ಕನ್ನಡ ಪ್ರಾಧ್ಯಾಪಕರು,】