ಬೆಳಗಾವಿ.ರಾಯಬಾಗ:ಕುಸ್ತಿ ಇದು ಒಂದು ಸಾಂಪ್ರದಾಯಿಕ ಆಟ. ಮೊದಲು ರಾಜಮನೆತನದ ಕುಟುಂಬಗಳಿಗೆ ಮನರಂಜನೆಯ ಮಾರ್ಗವಾಗಿತ್ತು. ಆದರೆ ಇದೀಗ ಭಾರತಕ್ಕೆ ಅಂತರಾಷ್ಟ್ರೀಯ ಖ್ಯಾತಿಯನ್ನು ತರುವ ದೃಢವಾದ ವೃತ್ತಿಪರ ಕ್ರೀಡೆಯಾಗಿ ಹೊರಹೊಮ್ಮಿದೆ. ಪುರುಷ ಕ್ರೀಡೆಗಳಲ್ಲಿ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲ್ಪಟ್ಟ ಈ ಕುಸ್ತಿ ಕಾಳಗ ಇಂದಿಗೂ ಗ್ರಾಮೀಣ ಪ್ರದೇಶದ ಜಾತ್ರೆ ಉತ್ಸವಗಳಲ್ಲಿ ಆಯೋಜಿಸುವ ಜಂಗಿ ನಿಕಾಲಿ ಕುಸ್ತಿಗಳನ್ನು ನೋಡಲು ಕುಸ್ತಿ ಆಟದ ಕ್ರೀಡಾಭಿಮಾನಿಗಳು ಸಾಗರೋಪಾದಿಯಲ್ಲಿ ಸೇರಿ ಮೈತುಂಬ ಕಣ್ಣಾಗಿಸಿಕೊಂಡು ಕುತೂಹಲದಿಂದ ವೀಕ್ಷಣೆ ಮಾಡುತ್ತಿರುವುದು ಗಮನೀಯ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಹಾರೂಗೇರಿ ಪಟ್ಟಣವು ಹಲವು ಸಾಧಕರನ್ನು ಈ ನಾಡಿಗೆ ನೀಡಿದೆ. ಇಲ್ಲಿನ ಹಲವು ಶಾಲಾ ಕಾಲೇಜುಗಳ ಆವರಣದಲ್ಲಿ ಇರುವ ಸುವ್ಯವಸ್ಥಿತ ವಿಶಾಲವಾದ ಆಟದ ಮೈದಾನಗಳು ಅಪ್ರತಿಮ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಅದ್ವಿತೀಯ ಸಾಧನೆ ಮಾಡಲು ಹೇಳಿ ಮಾಡಿಸಿದ ಒಂದು ವಿಶೇಷ ತಾಣವಾಗಿವೆ ..ಪಟ್ಟಣದ ಪ್ರತಿಷ್ಠಿತ ಎಸ್.ವಿ.ಈ. ಎಸ್.ಸ್ವತಂತ್ರ ಪದವಿಪೂರ್ವ ಕಾಲೇಜಿನ ಪಿ.ಯು.ಸಿ.ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿ ಕು.ಅಭಿಲಾಷ ಗಜಾನನ ಗಸ್ತಿ, ಇತ್ತೀಚೆಗೆ ಕಾರದಗಾ ದಲ್ಲಿ ನಡೆದ ಪ್ರಸಕ್ತ ಸಾಲಿನ “ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆ”ಯಲ್ಲಿ ಎದುರಾಳಿಯನ್ನು ಅತ್ಯಂತ ಚಾಕಚಕ್ಯತೆಯಿಂದ ಸೋಲಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಈ ಭಾಗದಲ್ಲಿ ಭರವಸೆಯ ಕುಸ್ತಿ ಪಟುವಾಗಿ ಎಲ್ಲರ ಗಮನ ಸೆಳೆದಿದ್ದಾನೆ. ಪ್ರೌಢ ಶಾಲೆಯಲ್ಲಿ ಓದುವಾಗಲೇ ಕುಸ್ತಿ ಕ್ರೀಡೆಯ ಬಗ್ಗೆ ವಿಪರೀತ ಗೀಳು ಹಚ್ಚಿಕೊಂಡ ಅಭಿಲಾಷ ಗಸ್ತಿ, ಕುಸ್ತಿ ಕ್ರೀಡೆಯಲ್ಲಿ ಅಪಾರ ಆಸಕ್ತಿ ಇರಿಸಿಕೊಂಡು ಇದೇ ಕ್ರೀಡೆಯಲ್ಲಿ ತಾನು ಗಣನೀಯ ಸಾಧನೆ ಮಾಡಬೇಕೆಂದು ಮನದಲ್ಲಿ ಸಂಕಲ್ಪ ಮಾಡಿ, ಶ್ರದ್ಧೆ ನಿಷ್ಠೆ ಆತ್ಮವಿಶ್ವಾಸ ಹಾಗೂ ಏಕಾಗ್ರತೆಯನ್ನು ಏಕತ್ರಯ ಮಾಡಿಕೊಂಡು ಕುಸ್ತಿ ಕ್ರೀಡೆಯಲ್ಲಿ ಅಪೂರ್ವ ನಕ್ಷತ್ರವಾಗಿ ಮಿನುಗುತ್ತಿರುವ ಅಪ್ಪಟ ಗ್ರಾಮೀಣ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾನೆ.
ಅಭಿಲಾಷ ಇವರ ತಂದೆ ಗಜಾನನ ಗಸ್ತಿ, ಪ್ರಸಿದ್ಧ ಕುಸ್ತಿಪಟುಗಳು. ಅಡಹಳ್ಳಿಹಟ್ಟಿಯಂತಹ ಪ್ರಸಿದ್ಧ ಪೈಲ್ವಾನರ ಜೊತೆ ಇವರ ತಂದೆ ಕುಸ್ತಿ ಆಡಿದ್ದಾರೆ. ಅಭಿಲಾಷ ಅವರ ಅಜ್ಜಂದಿರರಾದ ಪ್ರಧಾನಿ ಗಸ್ತಿ ಹಾಗೂ ಶಂಕರ ಗಸ್ತಿ ಉತ್ತಮ ಕುಸ್ತಿಪಟುಗಳಾಗಿ ಈ ಭಾಗದಲ್ಲಿ ಹೆಸರು ಮಾಡಿದ್ದಾರೆ. ಪ್ರಧಾನಿ ಗಸ್ತಿ ಅವರು ದಸರಾ ಕ್ರೀಡಾಕೂಟದಲ್ಲಿ ಬೆಳ್ಳಿ ಗದೆ ಗಿಟ್ಟಿಸಿಕೊಂಡ ಗಟ್ಟಿ ಕುಳ.
ಹಾರೂಗೇರಿ ಪಟ್ಟಣದಲ್ಲಿ ಕುಸ್ತಿ ಮನೆತನ ಎಂದರೆ ಅದು ಗಸ್ತಿ ಅವರ ಮನೆತನ ಎಂದು ಈ ಭಾಗದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ಸಂಗತಿಯಾಗಿದೆ.
ತಂದೆಗೆ ತಕ್ಕ ಮಗನಾಗಿ ಇಂದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರ ಹಿಂದೆ ಅಭಿಲಾಷನ ಅತ್ಯಂತ ಕಠಿಣ ಪರಿಶ್ರಮ ,ಪ್ರಾಮಾಣಿಕ ಪ್ರಯತ್ನ ನಿರಂತರ ತಾಲೀಮು ಇದಕ್ಕೆ ಪುಷ್ಟಿ ನೀಡಿದೆ. ಕುಟುಂಬಲ್ಲಿ ತಂದೆಯ ಪ್ರೇರಣೆ,ಅಜ್ಜಂದಿರರ ಪ್ರೋತ್ಸಾಹದ ಸುರಿಮಳೆ ಕಾಲೇಜಿನ ದೈಹಿಕ ನಿರ್ದೇಶಕರಾದ ಪ್ರೊ. ಮಹಾದೇವ ಭಜಂತ್ರಿ ಅವರ ಸಮರ್ಥ ಮಾರ್ಗದರ್ಶನ ಈ ಅಮೋಘ ಸಾಧನೆಯ ಗೆರೆ ಸ್ಪರ್ಶಿಸಲು ಪ್ರಮುಖ ಕಾರಣವಾಗಿದೆ ಎಂದು ಸಾಧಕ ಕ್ರೀಡಾಪಟು ಅಭಿಲಾಷ ಗಸ್ತಿ ಹೆಮ್ಮೆಯಿಂದ ನುಡಿಯುತ್ತಾನೆ.
ಹಾರೂಗೇರಿಯ ಹೆಸರನ್ನು ಕುಸ್ತಿ ಕ್ರೀಡೆಯ ಮೂಲಕ ಅಭಿಲಾಷ ಗಸ್ತಿ ರಾಷ್ಟ್ರ ಮಟ್ಟದಲ್ಲಿ ಸಾಧನೆಯ ಎವರೆಸ್ಟ್ ಶಿಖರ ಏರುವಂತಾಗಲಿ ಎಂದು ಆಶಿಸೋಣ.
*ಲೇಖನ:ಡಾ.ಜಯವೀರ ಎ.ಕೆ*.
*ಕನ್ನಡ ಪ್ರಾಧ್ಯಾಪಕರು*
*ಖೇಮಲಾಪುರ*