ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಅಥಣಿ:ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದಾದರೆ ನಮ್ಮವರೇ ಒಬ್ಬರು ಉನ್ನತ ಸ್ಥಾನಕ್ಕೇರುತ್ತಾರೆ ಎಂದರೆ ನನಗೆ ಸಂತೋಷವಾಗುತ್ತದೆ ಎಂದು ಕೊಳಗೇರಿ ನಿಗಮದ ಅಧ್ಯಕ್ಷ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅವರು ಶೇಗುಣಸಿ ಹಾಗೂ ಅರಟಾಳ ಗ್ರಾಮದಲ್ಲಿ ೪.೫ ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಒಂದು ವೇಳೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಲಕ್ಷ್ಮಣ ಸವದಿಯವರಿಗೆ ಟಿಕೇಟ್ ನೀಡಿದರೂ ಕೂಡ ನಾನು ಹಾಗೂ ಅವರು ಜವಾಬ್ದಾರಿಯಿಂದ ಚುನಾವಣೆಯ ಕೆಲಸ ನಿರ್ವಹಿಸುತ್ತೇವೆ ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು. ನನ್ನ ಹಾಗೂ ಲಕ್ಷ್ಮಣ ಸವದಿಯವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಆದರೆ ಕೆಲ ಸಂದರ್ಭದಗಳಲ್ಲಿ ನಮ್ಮ ಹಾಗೂ ಅವರ ಅಭಿಮಾನಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನದಿಂದ ಪೊಸ್ಟ ಮಾಡುತ್ತಾರೆ ಹೊರತು ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಹೈ ಕಮಾಂಡ್ ಯಾರಿಗಾದರೂ ಟಿಕೇಟ್ ನೀಡಲಿ ನಾವಿಬ್ಬರೂ ಕೂಡ ಬಿಜೆಪಿ ಪರ ಕೆಲಸ ಮಾಡುತ್ತೇವೆ ಇದರಲ್ಲಿ ನಮ್ಮಿಬ್ಬರಲ್ಲಿ ಅಷ್ಟೇ ಅಲ್ಲ ನಮ್ಮ ಕಾರ್ಯಕರ್ತರ ಮಧ್ಯೆಯೂ ಕೂಡ ಯಾವುದೇ ಗೊಂದಲ ಇಲ್ಲ ಎಂದ ಅವರು ಅಥಣಿ ಮತಕ್ಷೇತ್ರದ ಪೂರ್ವ ಭಾಗದ ಕೊಟ್ಟಲಗಿ ಸುತ್ತಮುತ್ತ ನೀರಾವರಿ ಒದಗಿಸುವ ೧೪೮೬.೪೧ ಕೋಟಿ ರೂ.ಗಳ ಏತ ನೀರಾವರಿ ಯೋಜನೆಗೆ ಫೆಬ್ರುವರಿ ಕೊನೆ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದರು.
ಶಾಸಕ ಮಹೇಶ ಕುಮಠಳ್ಳಿಯವರು ಶೇಗುಣಸಿ ಗ್ರಾಮದಲ್ಲಿ ೨೦ ಲಕ್ಷ ವೆಚ್ಚದ ಸಿದ್ಧಾರೂಢ ದೇವಸ್ಥಾನ ಸಮುದಾಯ ಭವನ, ೧೫೦ ಲಕ್ಷ ವೆಚ್ಚದಲ್ಲಿ ಕೂಡನ ಹಳ್ಳ ರಸ್ತೆ ಸುಧಾರಣೆ, ೫ ಲಕ್ಷ ವೆಚ್ಚದ ಕೂಡನಹಳ್ಳ ಎಲ್ಲಮ್ಮ ದೇವಸ್ಥಾನ ಹತ್ತಿರ ಸಮುದಾಯ ಭವನ, ೩೦ ಲಕ್ಷ ವೆಚ್ಚದ ಶೇಗುಣಸಿ-ಶಂಕರಹಟ್ಟಿ ಒಳ ರಸ್ತೆ ಸುಧಾರಣೆ ಹಾಗೂ ಅರಟಾಳ ಗ್ರಾಮದಲ್ಲಿ ೧೨ ಲಕ್ಷ ವೆಚ್ಚದ ಮಾಳಿಂಗೇಶ್ವರ ದೇವಸ್ಥಾನ ಸಮುದಾಯ ಭವನ ಹಾಗೂ ೨೦೩ ಲಕ್ಷ ವೆಚ್ಚದ ಜಲಜೀವನ ಮೀಶನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಧುರೀಣ ನಿಂಗಪ್ಪ ಪೂಜಾರಿ ಹಾಗೂ ಶೇಗುಣಸಿ ಮತ್ತು ಅರಟಾಳ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.