ಕನ್ನಡದ ಕಣ್ಮಣಿ,ಸಾಹಿತ್ಯ ಸಾಂಸ್ಕೃತಿಕ ಲೋಕದ ರಾಯಭಾರಿ ಡಾ.ಎಂ ಮೋಹನ್ ಆಳ್ವ”

Share the Post Now

ಲೇಖನ:ಡಾ.ಜಯವೀರ ಎ.ಕೆ*.
*ಕನ್ನಡ ಪ್ರಾಧ್ಯಾಪಕರು*
*ಖೇಮಲಾಪುರ*

ಸ್ವಾತಂತ್ರ್ಯ ಪೂರ್ವದ ಗುರುಕುಲ ಶಾಲೆಗಳು ಬ್ರಿಟೀಷರ ಮೆಕಾಲೆ ಶಿಕ್ಷಣದ ಮುಂದೆ ತಲೆಯೆತ್ತಲಾರದೆ ಮುಂಡಿಯೂರುವಂತಾದುದು ಈಗ ಇತಿಹಾಸ. ದೇಶ ಸ್ವತಂತ್ರವಾದಂತೆ ಮಾತೃಭಾಷಾ ಶಿಕ್ಷಣ ಎಲ್ಲೆಡೆ ವಿಜೃಂಭಿಸಿ, ಗ್ರಾಮೀಣ ಮಕ್ಕಳು ಶಾಲೆಯ ಮೆಟ್ಟಿಲು ಹತ್ತುವಂತಾಯಿತು. ಸುಮಾರು 1980ರ ಸುಮಾರಿಗೆ ಮಾಹಿತಿ ತಂತ್ರಜ್ಞಾನ ವಿಶ್ವದಲ್ಲೆಡೆ ಹಬ್ಬುತ್ತಿದ್ದಂತೆ, ಆಂಗ್ಲ ಭಾಷೆಗೆ ಎಲ್ಲಿಲ್ಲದ ಬೇಡಿಕೆ ಕುದುರಿತು. ಶಿಕ್ಷಣ ಲೋಕ ಆಂಗ್ಲ ಭಾಷಾ ಮಾಧ್ಯಮದತ್ತ ಸೆಳೆಯಲಾರಂಭಿಸಿದಾಗ ಸಾಕಷ್ಟು ಧನವಂತರು, ರಾಜಕಾರಣದ ಬಲಾಢ್ಯರು, ಸೇವಾಸಕ್ತರು ವಿದ್ಯಾಸಂಸ್ಥೆಗಳನ್ನು ಕಟ್ಟುವತ್ತ ದಾಪುಗಾಲಿಟ್ಟರು.



ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಮಕ್ಕಳು ಲಕ್ಷ ಲಕ್ಷ ಹಣ ಎಣಿಸುವಂತಾಗಬೇಕೆಂಬ ಕನಸು ಕಾಣುವ ಪೋಷಕರು, ಹಣ ಎಷ್ಟೇ ಖರ್ಚಾದರೂ ಅಡ್ಡಿಯಿಲ್ಲ ಒಳ್ಳೆಯ ಶಿಕ್ಷಣಕ್ಕಾಗಿ ಎಂಟತ್ತು ವರ್ಷಗಳಲ್ಲಿ ಮನೆಯಿಂದ ಹಾಸ್ಟೆಲುಗಳಿಗೆ ಅಟ್ಟದೇ ಹೋದರೆ ಬದುಕಿಲ್ಲವೆಂದು ಭಾವಿಸಿ, ಆತಂಕದಿಂದ ಅಂಕ ಗಳಿಕೆಯ ಹಾದಿ ಹಿಡಿದು ಬಿಂಕ ತೋರುವುದು, ಸೋತೆವೆಂದರೆ ಬದುಕು ಬರಡಾಯಿತೆಂಬ ಮಂಕು ಕವಿದು ಆಕಾಶವೇ ಕಳಚಿ ಬಿದ್ದಂತೆ ಭಾವಿಸುವುದು, ನಮ್ಮ ಕಣ್ಮುಂದೆ ಕಂಡುಬರುವ ಪ್ರಸ್ತುತ ವಿದ್ಯಮಾನ. ಅಪ್ಪ ಅಮ್ಮ ಹಾಗೂ ಮಕ್ಕಳ ಮಾನಸಿಕ ಒತ್ತಡಕ್ಕೆ, ಬೇಗುದಿಗೆ ಕಾರಣೀಭೂತವಾಗಿದೆ.



ಶಿಕ್ಷಣ ಪಠ್ಯದಾಚೆಯೂ ಇದೆ, ಶಿಕ್ಷಣದೊಂದಿಗೆ ಅದರಲ್ಲೂ ಪರಿಣತಿ ಸಾಧಿಸಿ ಬದುಕು ಕಟ್ಟಿಕೊಂಡು ಮೆರೆದು, ಆತ್ಮಾನಂದ ಅನುಭವಿಸಿ, ಭಾರತೀಯ ಸಂಸ್ಕೃತಿಯ ವಾರಸುದಾರರಾಗಬೇಕೆಂಬ ದೂರದರ್ಶಿತ್ವವುಳ್ಳ ಶಿಕ್ಷಣ ಸಂಸ್ಥೆಗಳು ಕಾಣಸಿಗುವುದು ವಿರಳಾತಿ ವಿರಳ. ಅಲ್ಲೋ ಇಲ್ಲೋ ಕಾಣುವ ಇಂತಹ ಸಂಸ್ಥೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಒಂದಷ್ಟು ಎತ್ತರದಲ್ಲಿ ನಿಂತು ಮಾದರಿಯನಿಸುತ್ತವೆ.



ವಿದ್ಯಾಲಯ, ದೇವಾಲಯಗಳು ಯಾವತ್ತೂ ಸೇವಾ ಕ್ಷೇತ್ರಗಳು. ಸಮಾಜದ ಸಂಸ್ಕಾರ ರೂಪಿಸುವ ಪುಣ್ಯಕ್ಷೇತ್ರಗಳು. ಮಾನವೀಯತೆಯ ಹಾದಿ ತೋರುವ ಶೃದ್ಧಾ ಕೇಂದ್ರಗಳು. ಅವುಗಳ ಚುಕ್ಕಾಣಿ ಹಿಡಿದವರು ಅದಕ್ಕೆ ತಕ್ಕಂತಹ ಸಂಸ್ಕಾರ ಸಂಸ್ಕೃತಿ ಸಂಪನ್ನರಿರಬೇಕು. ಬರೆದಿಟ್ಟಂತೆ ಅಥವಾ ಯಾಂತ್ರಿಕೃತ ಆಡಳಿತಾತ್ಮಕ ವ್ಯವಸ್ಥೆ ಅಲ್ಲಿಗೆ ಒಗ್ಗದು. ಸಮಯ ಸಂದರ್ಭಕ್ಕೆ ತಕ್ಕಂತೆ ವಿದ್ಯೆಯಲ್ಲಿ ಅಳವಡಿಸಿಕೊಳ್ಳಬೇಕಾದ ರೂಪಿಸಿಕೊಳ್ಳಬೇಕಾದ ಮೌಲ್ಯ ಅರಿತು ಮೈಗೂಡಿಸಿಕೊಳ್ಳಬಲ್ಲ ಚಿಂತಕರು ದೀರ್ಘಕಾಲ ಚುಕ್ಕಾಣಿ ಹಿಡಿದಾಗ ಅಲ್ಲೊಂದು ಶಕ್ತಿ ಆವಿರ್ಭವಿಸಬಹುದು.



ಆಳ್ವಾಸ್ ಸಂಸ್ಥೆಗಳ ಡಾ. ಎಂ. ಮೋಹನ ಆಳ್ವರದು ಕುಟುಂಬದಿಂದ ಬಳುವಳಿಯಾಗಿ ಬಂದಿರುವ ಸಂಸ್ಕಾರ, ಸಂಸ್ಕೃತಿ ಮುಪ್ಪರಿಗೊಂಡ ಪರಿಪಕ್ವ ವ್ಯಕ್ತಿತ್ವ. ಅವರೊಬ್ಬ ಸಮಾಜದ ಮನಸ್ಸುಗಳನ್ನು ಅರಿತು ಕಾಲಕಾಲಕ್ಕೆ ನೀಡುವ ಸಂಸ್ಕಾರಗಳ ದೂರಗಾಮಿ ಪರಿಣಾಮ ಅರಿತ ವೈದ್ಯ, ಮಾತ್ರವಲ್ಲ ತನ್ನ ಶ್ರಮದ ಫಲದಿಂದಾಗಿ ಅನುಭವ ಸಂಪಾದಿಸಿದ ಮನೋವೈದ್ಯ. ಶೈಕ್ಷಣಿಕ ಸಾಮ್ರಾಜ್ಯ ಕಟ್ಟಲು ಟೊಂಕಕಟ್ಟಿ ನಿಂತ ನಮ್ರ ಸೇವಕ. ಅನಭಿಷಿಕ್ತ ದೊರೆ, ಹುಟ್ಟು ನಾಯಕ. ಹಲವು ವರ್ಷಗಳಿಂದ ಮೌಲ್ಯಗಳ ಕಾಪಿಟ್ಟ ಬಂಟ( ವೀರಸೇವಕ ). ದಕ್ಷಿಣ ಕನ್ನಡದ ಬಂಟ ಸಮುದಾಯದ ಕಣ್ಮಣಿ. ಬಂಟ ಜನಾಂಗ ಪರಂಪರೆ, ಸಮುದಾಯ,ಸ್ವಾಭಿಮಾನದ ರಕ್ಷಕರು. ಇಂತಹ ಉನ್ನತ ಚಿಂತನೆಯ ನಾಯಕತ್ವ ಆಳ್ವಾಸ್ ಸಂಸ್ಥೆಯನ್ನು ಜಗತ್ತು ಕಣ್ಣರಳಿಸಿ ನೋಡುವಂತೆ ಮಾಡಿದೆ.



ವಿದ್ಯಾಸಂಸ್ಥೆಗಳಲ್ಲಿ ಪಾಠ ಪ್ರವಚನಗಳು ಮನಮುಟ್ಟುವಂತೆ ಇರಲೇಬೇಕು. ಅದು ಅವಶ್ಯ. ಅದುವೇ ಭೂಷಣ. ಉನ್ನತಿಗೆ ಶಿಸ್ತು ಅವಿಭಾಜ್ಯ ಅಂಗ. ಇದರೊಂದಿಗೆ ಸ್ಕೌಟ್ಸ್ ಗೈಡ್ಸ್, ಸೇವಾದಳ, ಯಕ್ಷಗಾನ,ನೃತ್ಯ, ಸಂಗೀತ,ಆಟೋಟ, ಚರ್ಚಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳು ಇವುಗಳಲ್ಲಿ ಯಾರು ಯಾರಿಗೆ ಯಾವುದರಲ್ಲಿ ಆಸಕ್ತಿ ಇರುವುದೋ ಅವುಗಳನ್ನು ಆಯ್ಕೆ ಮಾಡಿ ಸಜ್ಜುಗೊಳಿಸಿ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಒದಗಿಸಬೇಕು. ಸ್ಪರ್ಧೆ ಪ್ರದರ್ಶನಗಳು ವಿವಿಧ ಸ್ತರಗಳಲ್ಲಿ ನಡೆದು ಬಹುಮಾನಗಳ ಸಿಂಹಪಾಲು ಆಳ್ವಾಸ್ ಮುಡಿಗೇರುತ್ತವೆ. ವಿದ್ಯಾಗಿರಿಯ ಸ್ವರಾಜ್ ಮೈದಾನದಲ್ಲಂತೂ ನೂರಾರು ಕ್ರೀಡೆಗಳಲ್ಲಿ ಅವರವರ ಪ್ರತಿಭಾ ಪ್ರದರ್ಶನಕ್ಕೆ,ಪರಿಣತರು ಸದಾ ಕೈಬೀಸಿ ಕರೆದು ಬೆನ್ನು ತಟ್ಟುತ್ತಲೇ ಇರುತ್ತಾರೆ. ರಾಷ್ಟ್ರೀಯ,ಅಂತರಾಷ್ಟ್ರೀಯ ವಿದ್ಯಾರ್ಥಿ ಸಾಧಕರ ಬೆನ್ನೆಲುಬಾಗಿ ನಿಲ್ಲುತ್ತಾರೆ ಮೋಹನ ಆಳ್ವ. ಪ್ರವೇಶಾತಿಯಲ್ಲಿ ವಿನಾಯಿತಿ, ಉಚಿತ ಶಿಕ್ಷಣ ಇವೆಲ್ಲ ಸಾಧಕರ ಸಾಧನೆಗೆ ತಕ್ಕಂತೆ ಒದಗಿ ಬರುತ್ತವೆ. ಏನುಂಟು, ಏನಿಲ್ಲ, ಇನ್ನೇನು ಬೇಕು. ಸಾಧಕರ ಸ್ವರ್ಗವೆಂಬಂತಿದೆ.



ವಿಶ್ವಮಟ್ಟದ ಕಲಾ ವೈಭವಗಳು ಮೆರೆದು ಮೂಡುಬಿದಿರೆ ಸಾಂಸ್ಕೃತಿಕ ಲೋಕದ ಮಿನುಗುತಾರೆ ಎನಿಸಿದೆ. ಆಳ್ವಾಸ್ ನುಡಿಸಿರಿ,ಆಳ್ವಾಸ್ ವಿರಾಸತ್, ಆಳ್ವಾಸ್ ವಿದ್ಯಾರ್ಥಿಸಿರಿ, ಆಳ್ವಾಸ್ ಕೃಷಿಮೇಳ, ಆಳ್ವಾಸ್ ಕಲಾಮೇಳ, ಇನ್ನೂ ಮರೆಯದ, ಮರೆಯಲಾರದ ಇತ್ತೀಚೆಗೆ ಜರುಗಿದ ಸ್ಕೌಟ್ ಗೈಡ್ ಅಂತರಾಷ್ಟ್ರೀಯ ಜಾಂಬೂರಿ ಇವೆಲ್ಲವೂ ರಾಷ್ಟ್ರಕ್ಕೆ ಮಾದರಿ ಎನಿಸಿವೆ. ವಿಶ್ವವಿದ್ಯಾನಿಲಯಗಳೆ ರೂಢಿಸಿಕೊಳ್ಳಬಲ್ಲಂತಿವೆ. ಆಳ್ವಾಸ್ ಶಿಕ್ಷಣ ಲೋಕದ ಸುಮಾರು 22 ಸಹಸ್ರ ವಿದ್ಯಾರ್ಥಿಗಳಲ್ಲಿ 20 ಸಹಸ್ರ ವಿದ್ಯಾರ್ಥಿಗಳು ವಸತಿ ನಿಲಯವನ್ನೇ ಆಶ್ರಯಿಸಿದ್ದಾರೆ. ಇದೊಂದು ದಾಖಲೆ ಸರಿ. ಎಲ್ಲೂ ಕಾಣಸಿಗದ,ಕಂಡು ಕೇಳರಿಯದ ಅದ್ಭುತ ಲೋಕ ಸೃಷ್ಟಿಗೊಂಡು ಅಚ್ಚರಿಯುಂಟು ಮಾಡಿವೆ. ಆದರ್ಶತೆ ಅರಳಿ ನಿಂತು ಮನಕೆ ಮುದ ನೀಡಿ ಗರಿಗೆದರಿ ಕುಣಿದು ಕುಪ್ಪಳಿಸುವಂತಹ ಆನಂದ ಲೋಕ, ಮಕ್ಕಳಿಗೆ ನೂರಾರು ಕನಸುಗಳ ಬಿತ್ತಿ ನಾನಾ ತೆರದಿ ಬದುಕು ರೂಪಿಸಿಕೊಳ್ಳಲು ಸ್ಫೂರ್ತಿ ಹೊಮ್ಮಿಸುತ್ತದೆ. ಮಕ್ಕಳ ಕಣ್ಣ ಮುಂದೆ ಆದರ್ಶತೆಗಳ ಬಿಚ್ಚಿಡುವುದೇ ಕಲಿಕೆ ತಾನೇ?

ಇಲ್ಲಿ ನಡೆವ ಸಾಹಿತ್ಯ ಸಮ್ಮೇಳನಗಳು,ಸಾಹಿತ್ಯ ಲೋಕದ ಸಾಹಿತಿ ದಿಗ್ಗಜರು ಎವೆಯಿಕ್ಕದೆ ನೋಡುವಂತಿದೆ. ಎಡ ಬಲ ಪಂಥಗಳು ಮೌನ ವಹಿಸಿ,ಕಣ್ಣರಳಿಸಿ, ಕಿವಿತೆರೆದು ಆನಂದ ತುಂದಿಲರಾಗುವಂತೆ ಮಾಡಿರುವುದೇ ಇಲ್ಲಿನ ಹೆಚ್ಚುಗಾರಿಕೆ. ಇಲ್ಲಿ ಬಂದರೆಂದರೆ ಅವರಿಗೊಂದು ಹೆಮ್ಮೆ. ಅವಕಾಶ ಸಿಗದವರಿಗೆ ಮನದಲ್ಲಿ ಕೊರಗು. ಇಲ್ಲಿ ನೀಡುವ ಪ್ರಶಸ್ತಿ ಪುರಸ್ಕಾರಗಳು ರಾಜ್ಯ,ರಾಷ್ಟ್ರ ಸಾಹಿತ್ಯ ಪ್ರಶಸ್ತಿಗಳಿಗೆ ಒಂದಿನಿತು ಕಡಿಮೆ ಇಲ್ಲ. ಪುರಸ್ಕರಿಸುವ ವಿಧಿ ವಿಧಾನಗಳು ರಾಜಗಾಂಭೀರ್ಯ ಪಡೆದಿದೆ. ಅವುಗಳ ಕಾಣುವುದೇ ಕಣ್ಣಿಗೆ ಹಬ್ಬ. ಸಂಘಟಕರಿಗೆ ಮಾದರಿ. ಅಂಕೆ ಇಲ್ಲದ ಸಮಯ ಹಳಿ ತಪ್ಪಿಸುತ್ತದೆ. ಗೊಂದಲದ ಗೂಡುಗಳಂತಿರುವ ಸಭಾ ನಿರ್ವಹಣೆ ಇಲ್ಲಿ ಕಾಣಸಿಗದು. ಎಲ್ಲೆಡೆ ಅತಿಥಿಗಳ ಕಾಯುವಂತಿದ್ದರೆ,ಇಲ್ಲಿ ಅತಿಥಿಗಳೇ ಕಾಯುವಂತಿರುವ ಸಮಯ ಪಾಲನೆ, ಹೀಗೂ ಸಾಧ್ಯವೇ ಎಂಬಂತಿದೆ. ವೇದಿಕೆ ಇರಲಿ ಸಭಾಂಗಣವಿರಲಿ, ಊಟ ತಿಂಡಿಗಳಿರಲಿ, ಆವರಣದ ಅಲಂಕಾರವಿರಲಿ, ಸಭಿಕರಿರಲಿ ವಾಹನಗಳಿರಲಿ, ಎಲ್ಲೆಲ್ಲಿ ಇರಬೇಕು ಅಲ್ಲಲ್ಲಿ ಇದ್ದು ಅಚ್ಚುಕಟ್ಟುತನ. ದುಗುಡ ದುಮ್ಮಾನಗಳಿಲ್ಲ,ಗೊಂದಲಕ್ಕೆ ನೆಲೆ ಇಲ್ಲ, ನೂಕು ನುಗ್ಗಲು ಇಲ್ಲವೇ ಇಲ್ಲ. ಇವೆಲ್ಲವುಗಳ ನಿಯಂತ್ರಣಕ್ಕೆ ತರಬೇತಿ ಪಡೆದ ಶಿಕ್ಷಕ ವಿದ್ಯಾರ್ಥಿಗಳ ಪಡೆಯೇ ಕಟಿಬದ್ಧವಾಗಿದೆ.

ಮೋಹನ ಆಳ್ವರದು ಮಾತಿಗೆ ನಿಲುಕದ ವ್ಯಕ್ತಿತ್ವ. ನಿಮ್ಮಿಂದ ಹೇಗೆ ಸಾಧ್ಯವಾಯಿತು ಎಂದು ಕೇಳುವಾಗ ನನ್ನ ಕಣ್ಣೆದುರು ತಂದೆ ತಾಯಿ ಆದರ್ಶವಿದೆ. ಸ್ಫೂರ್ತಿ ನೀಡುವ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮನದ ಮೇಲೆ ಅಪಾರ ಪ್ರಭಾವ ಬೀರಿದ ಶ್ರೀ ಶ್ರೀ ವಿಶ್ವೇಶತೀರ್ಥರು, ಸಮಾಜವೆಂಬ ವಿಶ್ವವಿದ್ಯಾನಿಲಯ ಕಾರಣವೆನ್ನುತ್ತಾರೆ. ನುಡಿದಂತೆ ನಡೆವ, ನಡೆದಂತೆ ನುಡಿವ ಮೋಹನ ಆಳ್ವರ ಸಾಧನೆಯ ಫಲವಾಗಿ ಸಾವಿರ ಕಂಬದ ಬಸದಿಗೆ ಪ್ರಸಿದ್ಧವಾಗಿರುವ ಮೂಡುಬಿದಿರೆ ಸಾವಿರ ಸಾವಿರ ಸಾಹಿತಿಗಳ, ಕಲಾವಿದರ, ಕ್ರೀಡಾಪಟುಗಳ, ವಿದ್ಯಾರ್ಥಿಗಳ, ಸಾಧಕರ ನಿಜ ನೆಲೆಯಾಗಿದೆ. ಇದರ ಬೆನ್ನಿಗಿರುವ ಸಂಕಷ್ಟ, ನೋವು, ಸಾಲ ಸೋಲ, ಟೀಕೆ, ಸಮಯವರಿಯದ ಶ್ರಮ ಅರಿತ ಹೃದಯವಂತರಿಗಿದು ಮಕ್ಕಳ ವಿಕಸನ ಕೇಂದ್ರ. ಅರಿಯದೇ ಕುಟುಕುವ ಕಟುಕರಿಗಿದು ಉದ್ದಿಮೆ.

ಅಲ್ಲಿ ಕಲಿಯ ಬಯಸುವವರು ಕೇವಲ ರ್‍ಯಾಂಕ್ ಪಡೆದವರಲ್ಲ. ಬಡವರ್ಗ, ದೈಹಿಕ ನ್ಯೂನತೆ, ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ, ಕಲೆ ಸಾಂಸ್ಕೃತಿಕ, ಕ್ರೀಡೆ ಮುಂತಾದ ರಂಗಗಳಿಗೆ ಸೇರಿದ ಸುಮಾರು ಆರನೂರು ಮಕ್ಕಳನ್ನು ದತ್ತು ಸ್ವೀಕರಿಸಿ ಶಿಕ್ಷಣ ನೀಡುತ್ತಾರೆ. ಅವರಿಗಾಗಿ ವೆಚ್ಚ ಸುಮಾರು ಎಂಟು ಕೋಟಿ. ರಾಜ್ಯಕ್ಕೆ ಮಾದರಿಯೆನಿಸುವ ಕನ್ನಡ ವಸತಿ ಶಾಲೆಯೊಂದು ಪ್ರವೇಶಾತಿಗೆ ನೂಕು ನುಗ್ಗಲಿನೊಂದಿಗೆ ಇರುವುದು ಅಚ್ಚರಿಯ ಸಂಗತಿ. 600 ಮಕ್ಕಳಿಗೆ ಎಲ್ಲವೂ ಉಚಿತ. ಎಲ್ಲರೂ ಕನ್ನಡವನ್ನು ಉಳಿಸಬೇಕೆಂದು ಬೊಬ್ಬಿರಿದರೆ ಕನ್ನಡ ನಾಡಿಗೆ, ಸರಕಾರಕ್ಕೆ ಮಾದರಿ ಎನಿಸುವ ಕಾರ್ಯ ನಡೆಸಿ ಆದರ್ಶತೆ ಮೆರೆದ ಧೀಮಂತ. ಆಡದೇ ಮಾಡಿ ತೋರಿದ ಆಳ್ವರಿಗೆ ಅವರೇ ಸರಿ ಸಾಟಿ. ಸಂಗೀತ ನೃತ್ಯ, ಯಕ್ಷಗಾನ ಕ್ರೀಡೆ, ಮಲ್ಲಕಂಬ,ಕಥಕ್ ಯಾವುದು ಬೇಕೋ ಅದರಲ್ಲಿ ತರಬೇತಿ. ಕನ್ನಡ ಮಾಧ್ಯಮದ ಮಕ್ಕಳಿಗಾಗಿ ವರ್ಷಕ್ಕೆ ಆರು ಏಳು ಕೋಟಿ ಖರ್ಚು. ಆರುನೂರು ಸೀಟುಗಳಿಗೆ ಸುಮಾರು 12000 ಅರ್ಜಿಗಳು ಹರಿದು ಬರುತ್ತವೆ. ನಿರಂತರ ಹದಿನಾರು ವರ್ಷಗಳಿಂದ ನೂರಕ್ಕೆ ನೂರು ಫಲಿತಾಂಶ. ಇವರೆಲ್ಲ ಶೇಕಡ 60ಕ್ಕೂ ಹೆಚ್ಚು ಅಂಕ ಪಡೆಯುತ್ತಾರೆಂಬುದು ವಿಚಿತ್ರ ಆದರೂ ನಿಜ.

ಶತಾಯುಷಿ 106 ರ ಹರೆಯದ ತಂದೆ ಆನಂದ ಆಳ್ವರು ಆರೋಗ್ಯ ಭಾಗ್ಯವಿರುವ ಪುಣ್ಯವಂತರು. ತಾಯಿ ಸುಂದರಿ ಆಳ್ವರು ಲಾಲಿಸಿ ಪಾಲಿಸಿ ಸಂಸ್ಕಾರವಿತ್ತ ಪರಿ ಅನುಪಮ. ಮಗ ವಿವೇಕ್ ಆಳ್ವ ತಂದೆಗೆ ಹೆಗಲೆಣೆಯಾಗಿದ್ದಾರೆ, ಪತ್ನಿ ಡಾ. ಗ್ರೀಷ್ಮ ವೈದ್ಯರು. ಇನ್ನೊಬ್ಬ ಮಗ ಡಾ.ವಿನಯ ಆಳ್ವ ಖ್ಯಾತ ಸರ್ಜನ್, ಪತ್ನಿ ಡಾ. ಹಾನಾ ಆಳ್ವಾ ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ. ಮೊಮ್ಮಕ್ಕಳು ಸೇರಿ ನಾಲ್ಕು ತಲೆಮಾರುಗಳ ಕೂಡು ಕುಟುಂಬ ಒಂದೇ ಸೂರಿನಡಿ ಬದುಕು ಕಟ್ಟಿಕೊಂಡಿರುವುದು ಇಂದಿನ ದಿನಮಾನಗಳಲ್ಲಿ ಅದ್ಭುತವೇ ಸರಿ. ಪ್ರತಿ ವರ್ಷ ಕನ್ನಡಮ್ಮನ ಎನಿತೆನಿತು ಬಗೆಯ ಸೇವಾ ಕೈಂಕರ್ಯಗಳಿಗೆ ಸದ್ದು ಗದ್ದಲವಿಲ್ಲದೆ, ಧಿಮಾಕು ತೋರದೆ, 35 -40 ಕೋಟಿಗಳಷ್ಟು ಧನ ವಿನಿಯೋಗ ನಡೆಸುತ್ತಿರುವ ಆಳ್ವರದು ಊಹೆಗೂ ನಿಲುಕದ ದಿಟ ದಾಸೋಹ. ಕುಟುಂಬವೆಲ್ಲ ಹುಟ್ಟೂರಲ್ಲೇ ನೆಲೆ ನಿಂತು ಮೂಡುಬಿದರೆಯಲ್ಲಿ ಕಲೆ, ಸಾಂಸ್ಕೃತಿಕ, ಶೈಕ್ಷಣಿಕ ಲೋಕವನ್ನು ಬಾನೆತ್ತರಕ್ಕೇರಿಸಿ, ಸಹಸ್ರ ಸಹಸ್ರ ಮಂದಿಗೆ ಅನ್ನದ ದಾರಿ ತೋರಿದ ಈ ಪರಿಯ ಅನುಪಮ ಸೇವೆ ಊರ ಜನರ ಭಾಗ್ಯವೆನ್ನಲೇ ಬೇಕು. ಆತ್ಮ ನಿರ್ಬರ ಭಾರತಕ್ಕೆ ದೊಡ್ಡ ಕೊಡುಗೆ.

ರಾಷ್ಟ್ರೀಯ ಕನ್ನಡ ರತ್ನ ಪುರಸ್ಕಾರ, ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಇನ್ನೂ ಹತ್ತು ಹಲವು ಪ್ರಶಸ್ತಿಗಳು ಮುಡಿಗೇರಿದರು ಬರಬೇಕಾದ ಪ್ರಶಸ್ತಿಗಳು ಇನ್ನೂ ಬಂದಿಲ್ಲ. ಬರಬೇಕು, ಬರಬಹುದು. ಡಾ. ಎಂ.ಮೋಹನ ಆಳ್ವ ಪ್ರಶಸ್ತಿಗಳ ಮಾನದಂಡಗಳಿಂದ ಅಳೆಯ ಬಲ್ಲ ವ್ಯಕ್ತಿತ್ವವಲ್ಲ. ಅದರಾಚೆಗೂ ಬೆಳೆದು ನಿಂತ ಮಹಾನ್ ಪ್ರತಿಭಾವಂತ.

ಕಾರಂತರ ನಾಡು, ಚಿಂತಕರ ಬೀಡು ಪುತ್ತೂರು. ಶಿಕ್ಷಣ ಮತ್ತು ಸಾಂಸ್ಕೃತಿಕ ಲೋಕದ ರಾಯಭಾರಿ ಡಾ. ಎಂ. ಮೋಹನ ಆಳ್ವ ಅವರಿಗೆ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಕಳೆದ ತಿಂಗಳು *ಸ್ವರ್ಣ ಸಾಧನ ಪ್ರಶಸ್ತಿ* ಪ್ರಧಾನವಿತ್ತು ಗೌರವ ಸಮರ್ಪಿಸಿದ್ದು ಸ್ಮರಣೀಯ ಎನಿಸಿದೆ.

Leave a Comment

Your email address will not be published. Required fields are marked *

error: Content is protected !!