ಬೆಳಗಾವಿ
ರಾಯಬಾಗ : ರವಿಯ ಚಂಬೆಳಕಿನಲಿ,
ಕೃಷ್ಣೆಯ ದಡದಲ್ಲಿ,
ಗಡಿನಾಡಿನ ಕನ್ನಡ ತರಂಗ ನಿನಾದದಲಿ,
ಮೊಳಗಲಿದೆ ಮೊಳಗಲಿದೆ ಕನ್ನಡ ಝಂಕಾರ. ಹೌದು ಯಥೇಚ್ಚವಾಗಿ ಹಾಲು ಹೊಂದಿರುವ ಗಡಿನಾಡಿನ ರಾಯಭಾಗ ತಾಲೂಕಿನ ಕಟ್ಟಕಡೆಯ ಗ್ರಾಮ ರುಚಿಕಟ್ಟಾದ ಪೇಡೆಗಳ ಮಾರಾಟ ಮಾಡಿ ಹೆಸರುವಾಸಿಯಾದ, ನದಿದಡದ ದೊಡ್ಡ ಹೃದಯದ ಸಣ್ಣ ಹಳ್ಳಿ ಅದು ಆಧ್ಯಾತ್ಮದಾನಂದದ ತವರು ಮನೆ ಪರಮಾನಂದವಾಡಿ.
ಈ ಬಾರಿಯ 6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡ ಹಬ್ಬವಾಗಿ ಆಚರಣೆಗೆ ಒಳಪಡುತ್ತಿದ್ದುದು ಎಲ್ಲಾ ಕನ್ನಡ ಮನಸ್ಸುಗಳನ್ನು ತನ್ನತ್ತ ಆಕರ್ಷಸುತ್ತಿದೆ. ಇತ್ತ ಚುಮುಚುಮು ಚಳಿಯಲ್ಲಿ ಪೇಡೆಯ ರುಚಿ ಸವೆಯುವುದರೊಂದಿಗೆ ಹೊತ್ತಿಗೆ ಸರಿಯಾಗಿ ಹೊತ್ತಿಗೆಗಗಳ ಕನ್ನಡದ ಸಿಹಿ ಭೋಜನ ಒಡಲ ತುಂಬಲಿದೆ. ಪುಸ್ತಕ ಮೇಳ, ತಾಲೂಕಾ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಕುಂಭದಾರತಿ,ಕವಿಗೋಷ್ಠಿ, ಭಾಷಾ ವಿಶ್ಲೇಷಣೆ, ಚಿಂತನ ಗೋಷ್ಠಿ,ಕನ್ನಡ ಹೃದಯಗಳ ಬಡಿತವನ್ನು ಬಿಸಿಯಾಗಿಸುವ ತವಕದಲ್ಲಿದೆ ಈ ನದಿ ತೀರ.
ಹಳ್ಳಿಯಾದರೇನು ಕನ್ನಡಕ್ಕೇನು ಕೊರತೆಯಿಲ್ಲಾ
ಹಳೆಯದಾದರೇನು ರುಚಿಗೇನು ಕಮ್ಮಿಯಿಲ್ಲ
ಪೇಡೆ ವಾಡೆ ಆನಂದದ ಗೋಡೆ ಪರಮಾನಂದವಾಡೆ ಇದೀಗ ಎಲ್ಲರ ಮನವನ್ನು ಸೆಳೆದು ಕನ್ನಡದಾರತಿಯ ಬೆಳಕಿನಲಿ ಅಕ್ಷರದ ಹೊಂಗಿರಣ ಚಾಚಿ ಅಕ್ಷರಗಳ ಹೂರಣದ ಹೋಳಿಗೆ ಉಣಬಡಿಸಲಿದೆ.
*ಆಧ್ಯಾತ್ಮಿಕ ಹಿನ್ನೆಲೆ :*
ಪರಮಾನಂದವಾಡಿಯ ಜನರ ಮನ ಪೇಡೆಯ ರುಚಿಯಂತೆ ಪರಮಾನಂದವನ್ನೇ ನೀಡುವಂಥದ್ದು. ಇಲ್ಲಿ ಪೂಜ್ಯ ಸದ್ಗುರು ಶ್ರೀ ಬ್ರಹ್ಮಾನಂದ ಮಹಾಸ್ವಾಮೀಜಿಗಳು ನೆಲೆಸಿದ್ದ ತಾಣವಿದೆ.ತದನಂತರ ಬಂದ ಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಆಗಮಿಸಿ ಅನೇಕ ಸಾಮಾಜಿಕ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ.ಆ ತಾಣದಲ್ಲಿ ಈಗ ಡಾ. ಅಭಿನವ ಬ್ರಹ್ಮಾನಂದ ಪೂಜ್ಯರ ಸಾನಿಧ್ಯದ ಪುಷ್ಪವರಳಿದೆ. ಧ್ಯಾನ, ಯೋಗ, ಆಧ್ಯಾತ್ಮಗಳ ತುಂತುರು ಹನಿಗಳು ಜನಮನಕ್ಕೆಲ್ಲ ಪಾವನ ತೀರ್ಥ ಸಿಂಪಡಿಸಿದಂತಾಗಿದೆ. ಇಲ್ಲಿನ ಆ ನವಿರಾದ, ತಂಪಾದ ವಾತಾವರಣದಲ್ಲಿ ಧ್ಯಾನಾಸಕ್ತರಾದವರು ಎಂತಹ ಪರಿಸ್ಥಿತಿ ಬಂದರೂ ಬಿಟ್ಟು ಹೋಗಲಾರರು ಅಂತಹ ಪವಿತ್ರ ಆನಂದವನ್ನೀಯುವ, ಪರಬ್ರಹ್ಮ ಸ್ವರೂಪ ಪರಮಾನಂದದ ಕ್ಷೇತ್ರ ಪರಮಾನಂದವಾಡಿ.
*ಪೇಡೆಯ ಇತಿಹಾಸ :*
ಹಳ್ಳಿಯಾದರೇನು ಶಿವ ಇದು ಸಾಧಾರಣವಲ್ಲ ಏಕೆಂದರೆ ಇಲ್ಲಿನ ಜನ ಸೃಜನಾತ್ಮಕ ವಿಚಾರವಂತರು,ಜಾಣ ಜನ ಅನ್ನೋದಕ್ಕೆ ಅಲ್ಲಿನ ವ್ಯಾಪಾರ ವಹಿವಾಟುಗಳೇ ಕಾರಣ.ಹಿರಿಯರು ಹೇಳುವಂತೆ,ಒಂದು ದಿನ ಪರಮಾನಂದವಾಡಿಯಲ್ಲಿ ಬರಗಾಲ ಬಿತ್ತಂತೆ. ದನಕರುಗಳು ಬಹಳ ಸಂಖ್ಯೆಯಲ್ಲಿ ಇದ್ದುದ್ದರಿಂದ ಆಗ ಬರಿ ಹಾಲು ಬಿಟ್ಟರೆ ಬೇರೆ ಏನೂ ಅಧಿಕವಾಗಿ ಸಿಗುವ ಪದಾರ್ಥವಿರಲಿಲ್ಲ ಹಾಗಾಗಿ ಅಲ್ಲಿನ ಜನ ಹಾಲು ಹೆಚ್ಚಾಗಿ ಉಳಿದ ಹಾಲನ್ನು ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದರು. ಆ ಸಮಯದಲ್ಲಿ ತೇರದಾಳದ ಪ್ರತಿಷ್ಟಿತ ಮನೆತನವಾದ ಬಾಬಗೊಂಡ ಅವರು ಆ ಊರಿಗೆ ಬಟ್ಟೆ ಮಾರಲು ಬರುತ್ತಿದ್ದರಂತೆ. ಅವರು ಅಲ್ಲಿನ ಹಾಲು, ಹಾಲಿನಂತಹ ಜನರನ್ನು ನೋಡಿ ಹೇಳಿದರಂತೆ ನೀವು ಈ ಉಳಿದಿರುವ ಹಾಲನ್ನು ಕೆಡಿಸುವ ಬದಲು ಅದಕ್ಕೆಬೆಲ್ಲ ಅಥವಾ ಸಕ್ಕರೆ, ಏಲಕ್ಕಿ ಹಾಕಿ ಪೇಡೆ ಮಾಡಿ ಮಾರಬಹುದಲ್ಲವೇ ಎಂದಾಗ ಅಲ್ಲಿನ ಪಂಡಿತರು ಮೊದಲ ಬಾರಿ ಪೇಡೆ ತಯಾರಿಸಿ ಮಾರಾಟ ಮಾಡಲಾರಾಂಭಿಸಿದರು. ಅಂದು ಪ್ರಾರಂಭವಾದ ಪೇಡೆ ಮಾರಾಟ ಇಂದು ಹಲವಾರು ಕುಟುಂಬಗಳ ಆಧಾರ ಸ್ಥ0ಭವಾಗಿ ಸ್ವಾವಲ0ಭಣೆಯ ಬದುಕಿಗೆ ದಾರಿಯಾಗಿ ಪರಮಾನಂದವನ್ನು ನೀಡುವಂತಾಗಿದೆ.ಅಲ್ಲದೆ ಸಣ್ಣ ಹಳ್ಳಿಯಾದರೂ ಇಲ್ಲಿನ ಸುಮಾರು 30ಕ್ಕೂ ಅಧಿಕ ಜನ ಯುವಕರು ಭಾರತ ದೇಶದ ಸೈನ್ಯದಲ್ಲಿ ಹೆಮ್ಮೆಯ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವುದು ಈ ಸಂದರ್ಭದಲ್ಲಿ ಹೆಮ್ಮೆ ತಂದಿದೆ.ಇಲ್ಲಿನ ಮೀರಾಸಾಬ ಮುಲ್ಲಾ ಮತ್ತು ಅಬ್ದುಲ್ ಮುಲ್ಲಾ ಎಂಬುವವರು ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ತಮ್ಮದೇಯಾದ ಕೀರ್ತಿ ಗಳಿಸಿದ್ದಾರಲ್ಲದೆ, ಬಹುಮುಖ ಪ್ರತಿಭೆಗಳ ವ್ಯಕ್ತಿತ್ವದ ಮಹಾಜನತೆ ಪರಮಾನಂದವಾಡಿಯ ಆನಂದವನ್ನು ಯಾವುದೇ ಜಾತಿ,ಮತ,ಪಂಗಡಗಳ ಭೇದವಿಲ್ಲದೆ ಪರಮಾನಂದಾಗೊಳಿಸಿದ್ದಾರೆ.
*ರಾಯಬಾಗ ಕನ್ನಡ ಸಾಹಿತ್ಯ ಪರಿಷತ್ತು :*
ಬಾಗೇನಾಡಿನ ಕನ್ನಡ ಕಲ್ಪತರು ಎಂದೆಂಸಿಕೊಂಡಿರುವ ರಾಯಬಾಗ ಕನ್ನಡ ಸಾಹಿತ್ಯ ಪರಿಷತ್ತು,ಅನೇಕ ಸಾಮಾಜಿಕ, ಸಾಹಿತ್ತಿಕ,ಸಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ವಿಶೇಷ ಛಾಪು ಮೂಡಿಸಿದೆ. ಹಳ್ಳಿ- ಹಳ್ಳಿಗಳಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮಗಳು, ಸದಸ್ಯತ್ವ ಅಭಿಯಾನ, ಕನ್ನಡ ಕಾವಲುಗಾರರ ಹಾಗೂ ಅಗಲಿದ ಕನ್ನಡ ಕಲಿಗಳ ಜಯಂತಿಯನ್ನು ಆಚರಿಸಿ ಅವರ ಸುಸ್ಮರಣೆ ಮಾಡಿದ ಕಾರ್ಯ ನಿಜಕ್ಕೂ ಯುವ ಪೀಳಿಗೆಗಳ ನವ ಹೃದಯದಲ್ಲಿ ಕನ್ನಡ ರಸ ವಿಮರ್ಶೆಯಾಗುವಂತೆ ಮಾಡಿದೆ. ತಾಲೂಕಿನ ಕವಿ, ಬರಹಗಾರರನ್ನು ಒಂದೆಡೆ ಸೇರಿಸಿ ಕವಿಗೋಷ್ಠಿ ಹಮ್ಮಿಕೊಂಡು ವಿಶೇಷ ಮೆರುಗು, ಬಿನ್ನಾಣ ಗಳಿಸಿರುವ ರಾಯಬಾಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಪರಮಾನಂದವಾಡಿಯ ಆನಂದದ ಅಂಗಳದಲ್ಲಿ ಕನ್ನಡದ ಮಧುವನಗಿತ್ತಿಯಂತೆ ಅಲಂಕಾರಗೊಳ್ಳುತ್ತಿದ್ದಾಳೆ.
*ಶೈಕ್ಷಣಿಕ ಇತಿಹಾಸ :*
ಪರಮಾನಂದವಾಡಿಯಲ್ಲಿ ಮೊದಲು ಪ್ರಾರಂಭವಾದ ಶಾಲೆ ಅದು ಸರ್ಕಾರಿ ಕನ್ನಡ ಶಾಲೆ ತದನಂತರ ಅನುದಾನಿತ ಶಾಲೆಗಳಾದ ಎಸ್ ಆರ್ ಡಿ ಹಾಗೂ ಶ್ರೀ ಮಹಾಕಾಳಿ, ಶ್ರೀ ಗುರುಸಿದ್ದೇಶ್ವರ,ಶ್ರೀ ಗುರುದೇವ ಹಾಗೂ ಶ್ರೀ ಬಸವಗೋಪಾಲ ಶಾಲೆಗಳು ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮೈದಳೆದು ಇದೀಗ 2 ಸಾವಿರಕ್ಕಿಂತಲೂ ಅಧಿಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕಾಗಿವೆ.ಇದು ಆ ಭಾಗದ ಜನರ ಕನ್ನಡ ಪ್ರೇಮವನ್ನು ಜೀವಸ್ಯ ಕಂಠಸ್ಯವಾಗಿಸಿದೆ.
*ಕೃಷಿಯಲ್ಲಿ ಪರಮಾನಂದ* :
2 ಸಾವಿರ ಎಕರೆ ನೀರಾವರಿ ಜಮೀನು ಹೊಂದಿರುವ ಹಚ್ಚ ಹಸುರಿನ, ಫಲವತ್ತಾದ ಭೂಮಿ ಈ ಪರಮಾನಂದವಾಡಿ ಗ್ರಾಮ.ಇಲ್ಲಿ 60 ಕ್ಕೂ ಅಧಿಕ ರೈತ ಮನೆತನಗಳು ವ್ಯವಸಾಯದಲ್ಲಿ ತಮ್ಮನ್ನು ತಾವು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ.1 ಸಾವಿರ ಎಕರೆ ಕಬ್ಬು ಬೆಳೆಯನ್ನು ಬೆಳೆಯುವ ಇಲ್ಲಿನ ಅನ್ನದಾತರು ಕಬ್ಬಿನ ಸಾಹುಕಾರಾರಾಗಿ ಹಸಿರು ಟವೆಲ್ ಹೆಗಲ ಮೇಲೆ ಹಾಕಿಕೊಂಡು ರಾಜನಂತೆ ಉದಾತ್ತ ಜೀವನ ಸಾಗಿಸುತ್ತಿದ್ದಾರಲ್ಲದೆ ಸಾವಯವ ಕೃಷಿ, ಪ್ರಗತಿಪರ ಅನ್ನದಾತರಾಗಿ, ಗೋವಿನಜೋಳ,ಅರಿಸಿನ, ಕಡ್ಲಿ, ತರಕಾರಿಯಂತಹ ಅನೇಕ ಜೀವನಪಾಯ ಬೆಳೆಗಳನ್ನು ಬೆಳೆದು ಸಂತೋಷದಿಂದ ಉಪಜೀವನ ಮಾಡುತ್ತಾರೆ ಇಲ್ಲಿನ ರೈತರು.
*ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ :*
ಜನವರಿ ತಿಂಗಳ 21 ರಂದು ಜರುಗಲಿರುವ ರಾಯಭಾಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನ 6 ನೇ ತಾಲೂಕಾ ಸಮ್ಮೇಳನಕ್ಕೆ ಹಿರಿಯರಾದ ,ಕನ್ನಡದ ಮೇಲೆ ಅಪಾರ ಪ್ರೀತಿ, ಕಾಳಜಿ ಹೊಂದಿರುವ, ಪ್ರಖರ ಜಾಣ ವಾಗ್ಮಿಗಳಾದ,ರಾಯಬಾಗ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರರಾಗಿ ಆಯ್ಕೆಯಾದ ಡಿ ಎಸ್ ನಾಯಿಕರವರನ್ನು ಈಗಾಗಲೇ ಆಹ್ವಾನಿಸಿ, ಸತ್ಕಾರಿಸಲಾಗಿದೆ.ಹಿರಿಯ ಸಾಹಿತಿ ಡಾ. ವ್ಹಿ. ಎಸ್ ಮಾಳಿಯವರ, ಎಲ್ ಎಸ್ ಚೌರಿಯವರ ಸೂಕ್ತ ಮಾರ್ಗದರ್ಶನ ಹಾಗೂ ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ,ಪ್ರಮುಖರಾದ ಬಸವರಾಜ ಸನದಿ ಹಾಗೂ ಪದಾಧಿಕಾರಿಗಳಾದ ಟಿ ಎಸ್ ವಂಟಗೂಡಿ,ಶಿಕ್ಷಕರಾದ ಎಸ್ ಬಿ ಕ್ಯಾಸ್ತಿ, ಸುಖದೇವ ಕಾಂಬಳೆ ಮುಂತಾದವರ ಶ್ರಮದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಉತ್ಸಾಹದ ಚಿಲುಮೆಯಾಗಿ ಕನ್ನಡದ ಕುಲುಮೆಯಲಿ ಅಕ್ಷರ ಜಾತ್ರೆ ದೀಪ್ತಿಯಂಕುರಿಸಲಿ ಎಂಬುದೇ ನಮ್ಮಾಶಯ
*ಲೇಖನ ✍🏻:ಸುನೀಲ್ ಕಬ್ಬೂರ*