ಬೆಳಗಾವಿ
ವರದಿ :ಸಂಜೀವ್ ಬ್ಯಾಕುಡೆ
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಅನ್ನಪೂರ್ಣ ಗುರುವಾರ ಆರಾಮಿಲ್ಲ ಅಂತಾ ಹೇಳಿ ರಜೆ ಪಡೆದು ಮನೆಗೂ ಹೋಗದೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗಿನವರೆಗೂ ಹುಡುಕಿ ಕುಟುಂಬದವರು ಕಾಣೆಯಾದ ಬಗ್ಗೆ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶುಕ್ರವಾರ ಸಂಜೆ 4.30ರ ಹೊತ್ತಿಗೆ ರಾಯಬಾಗ ರೈಲು ನಿಲ್ದಾಣದ ಹತ್ತಿರ ರೈಲಿಗೆ ಹಾರಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಸಾವನ್ನಪ್ಪಿದ ಮಾಹಿತಿ ತಿಳಿಯುತ್ತಿದ್ದಂತೆ ಬೆಳಗಾವಿ ರೈಲ್ವೆ ಪೋಲಿಸ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ರೇಲ್ವೆ ಪೊಲೀಸರು ಪರಿಶೀಲಿಸಿದಾಗ ಘಟನಾ ಸ್ಥಳದಲ್ಲಿ ಅವರ ವ್ಯಾನಿಟಿ ಬ್ಯಾಗ್ ಕ್ಯಾರಿಬ್ಯಾಗ ಸಿಕ್ಕಿದ್ದು, ಬ್ಯಾಗಲ್ಲಿ ಮರಣಪತ್ರ ಸಿಕ್ಕಿದ್ದು ಅದರಲ್ಲಿ ನನ್ನ ಸಾವಿಗೆ ಮುಖ್ಯೋಪಾಧ್ಯಾಯ ರಾಜು ಜಮಾದಾರ, ಉಮಾ ಟೀಚರ ಹಾಗೂ ಮಯೂರಿ ಎಂಬ ಹೆಸರುಗಳು ಉಲ್ಲೇಖಿಸಿರುವುದು ಕಂಡು ಬಂದಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಜುನ್ನೇದಿಯಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ರಾಜು ಜಮಾದಾರ ಎರಡುಮೂರು ವರ್ಷಗಳಿಂದ ಅವರಿಗೆ ನೀಡುತ್ತಿರುವ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜನಸಾಮಾನ್ಯರ ಬಾಯಲ್ಲಿ ಕೇಳಿಬರುತ್ತಿದೆ.
ಕುಡಚಿ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಅನ್ನಪೂರ್ಣ ರಾಜು ಬಸಾಪುರೆ ಮೃತ ದುರ್ದೇವಿ ಎಂದು ತಿಳಿದು ಬಂದಿದೆ.
ಇನ್ನು ಶನಿವಾರ ಕುಡಚಿ
ಪಟ್ಟಣಕ್ಕೆ ಮೃತದೇಹವನ್ನು ತರಲಾಯಿತು. ಮೃತರ ಕುಟುಂಬಸ್ಥರು, ನೂರಾರು ಜನರು ಶಿಕ್ಷಕಿ ಸಾವನ್ನಪ್ಪಿದ ಸುದ್ದಿ ಕೇಳಿಯೂ ಶಾಲೆ ನಡೆಸಿದ್ದಾರೆ ಎಂಬ ಸುದ್ದಿ ತಿಳಿದು ಶಿಕ್ಷಕಿಯ ಮೃತ ದೇಹವನ್ನು ಶಾಲೆಯ ಆವರಣದಲ್ಲಿಟ್ಟು ಕೆಲ ಕಾಲ ಪ್ರತಿಭಟನೆ ನಡೆಸಿದರು. ಆತ್ಮಹತ್ಯೆಗೆ ಕಾರಣವಾದ ಆರೋಪಿಗಳ ಮೇಲೆ ಕ್ರಮ ಜರುಗಿಸಬೇಕು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಂಡ ಮಕ್ಕಳು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಕುಡಚಿ ಪೊಲೀಸ್ ಸಿಬ್ಬಂದಿ ಬಂದು ಗಲಭೆಯನ್ನು ನಿಯಂತ್ರಿಸಿದರು.
ನಂತರ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಇಕಬಾಲ ಸತ್ತಾರ ಹಾಗೂ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಐ.ಎನ.ಪಟೇಲ ಮಾತನಾಡಿ ಮೃತರ ಕುಟುಂಬದ ಒಬ್ಬರಿಗೆ ಸಂಸ್ಥೆಯಲ್ಲಿ ತಾತ್ಕಾಲಿಕ ಕೆಲ ತಿಂಗಳ ನಂತರ ಸರಕಾರಿ ನಿಯಮದನ್ವಯ ನೌಕರಿ ನೀಡುವ ಭರವಸೆ ನೀಡಿದರು. ಮರಣ ಪತ್ರದಲ್ಲಿ ಉಲ್ಲೇಖಿಸಿದವರ ಮೇಲೆ ಆರೋಪ ಸಾಬೀತಾದರೆ ಅವರ ಮೇಲೆ ಸಂಸ್ಥೆಯಿಂದ ಕ್ರಮ ಜರುಗಿಸಲಾಗುವುದು ಎಂದರು.
ನಂತರ ಸ್ಥಳದಲ್ಲಿ ನೆರೆದ ಆಡಳಿತ ಮಂಡಳಿಯವರು, ಕುಟುಂಬಸ್ಥರು ಸಾರ್ವಜನಿಕರು ಕೆಲ ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ.
ಪ್ರಕರಣವು ಯಾವ ತಿರುವು ಪಡೆಯಲಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ