ಬೆಳಗಾವಿ.
ರಾಯಬಾಗ: ತಹಶೀಲ್ದಾರ್ ಸುರೇಶ ಮುಂಜೆ ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ನೌಕರರು ಅಭಾಜಿ ವೃತ್ತದಲ್ಲಿ ರಸ್ತೆ ಬಂದ್ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು.
ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ ಪೋಳ ಮಾತನಾಡಿ, ತಹಶೀಲ್ದಾರ್ ಅವರು ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ರೈತ ಸಂಘದ ಮುಖಂಡರು ಎಂದು ಹೇಳಿಕೊಂಡು ಕೆಲವರು ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಜಮೀನಿಗೆ ಸಂಬಂಧಿಸಿದ ವಿಷಯವಾಗಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ. ತಹಶೀಲ್ದಾರ್ ರು ಈ ಜಮೀನಿನ ಬಗ್ಗೆ ನ್ಯಾಯಾಲಯದಿಂದ ತಡೆಯಾಜ್ಞೆ ಇರುವುದರಿಂದ ಅದರಲ್ಲಿ ಯಾವುದೇ ವಹಿವಾಟು ಮಾಡಲು ಬರುವುದಿಲ್ಲ ಮತ್ತು ತಾವು ಕಚೇರಿ ಕೆಲಸ ನಿಮಿತ್ತ ಬೆಂಗಳೂರಿನ ಹೈಕೋರ್ಟ್‌ಗೆ ಹೋಗುತ್ತಿದ್ದು, ಬಂದ ನಂತರ ಪರಿಶೀಲಿಸುವುದಾಗಿ ಹೇಳಿದ್ದಾರೆ.
ಆದರೆ ಆರೋಪಿಗಳು ತಹಶೀಲ್ದಾರರಿಗೆ ಏರು ಧ್ವನಿಯಲ್ಲಿ ಏಕವಚನದಲ್ಲಿ ನಿಂದಿಸಿ, ಕಚೇರಿ ಮುಖ್ಯದ್ವಾರವನ್ನು ಬಂದ್ ಮಾಡಿ, ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದನ್ನು ನೌಕರರ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಇಂತಹ ಘಟನೆಯಿಂದ ತಾಲ್ಲೂಕಿನ ಸರ್ಕಾರಿ ನೌಕರರಲ್ಲಿ ಭೀತಿಯುಂಟಾಗಿದ್ದು, ಈ ರೀತಿಯ ಗೂಂಡಾ ವರ್ತನೆಯಿಂದ ಸರ್ಕಾರಿ ನೌಕರರ ಮಾನಸಿಕ ಸ್ಥೆರ್ಯ ಕುಸಿಯುತ್ತಿದೆ. ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ ನೀಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರರು ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಸದಸ್ಯರು, ಮತ್ತು ಕನ್ನಡ ಪರ ಸಂಘಟನೆಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರ ಸಂಘದ ಮನವಿಯನ್ನು ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಕಚೇರಿಯ ಗ್ರೇಡ್-2 ತಹಶೀಲ್ದಾರ್ ಪರಿಮಳಾ ದೇಶಪಾಂಡೆ ಅವರು ಮನವಿಯನ್ನು ಸ್ವೀಕರಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ, ಸಿಪಿಐ ಬಿ.ಎಸ್.ಮಂಟೂರ, ಪಿಎಸ್‌ಐ ಶಿವಶಂಕರ ಮುಕರಿ, ರಾಜು ಶಿರಗಾಂವೆ,ಮಹೇಶ್ ಐಹೋಳೆ,ವಿಶ್ವನಾಥ ಹಾರೂಗೇರಿ, ಅಧಿಕಾರಿಗಳಾದ ಅರುಣ್ ಮಾಚಕನೂರ, ಕಿರಣ ಚಂದರಗಿ, ಬಸವರಾಜಪ್ಪ ಆರ್, ಕಲ್ಪನಾ ಕಾಂಬಳೆ, ಭಾರತಿ ಕಾಂಬಳೆ, ಶಂಕರಗೌಡ ಪಾಟೀಲ, ಬಿ.ಎಂ.ಮಾಳಿ, ಪರಮಾನಂದ ಮಂಗಸೂಳಿ, ಡಿ.ಎಸ್.ಮಾಡಲಗಿ, ಎಂ.ಕೆ.ಶೇತಸನದಿ, ವಿನಾಯಕ ಭಾಟೆ, ವಿನೋದ ಚವ್ಹಾಣ,ಎಚ್.ಎಚ್.ನಾಗನ್ನವರ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಮತ್ತು ಪಿಡಿಓಗಳು ಪಾಲ್ಗೊಂಡಿದ್ದರು.
ವರದಿ :ಕರೇಪ್ಪಾ ಎಸ್ ಕಾಂಬಳೆ