ಬೆಳಗಾವಿ.ಕಾಗವಾಡ :* ವ್ಯಕ್ತಿ ಕ್ರೂರವಾಗಿರಬಹುದು ಆದರೆ ಮಾನವ ಮಾತ್ರ ಕರುಣಾಮಯಿ ಎಂಬ ಉಕ್ತಿಯಂತೆ ಮಾನವೀಯ ಮೌಲ್ಯಗಳಾದ ದಯೆ ಕರುಣೆ ಪರೋಪಕಾರದಂತಹ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡ ವ್ಯಕ್ತಿ ಅವನ ನೈಜ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬೇಡಕಿಹಾಳದ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು,ಪ್ರಾಧ್ಯಾಪಕ ಡಾ.ಹೊಂಬಯ್ಯ ಹೊನ್ನಲಗೆರೆ ಅವರು ಅಭಿಮತ ವ್ಯಕ್ತಪಡಿಸಿದರು.
ಅವರು ಇತ್ತೀಚೆಗೆ ಶನಿವಾರ ಜೀವನ ಮೌಲ್ಯಗಳು ಸಂಸ್ಕೃತಿಯ ಪ್ರತಿಬಿಂಬ”: ದಿನಾಂಕ 12 ರಂದು ಕಾಗವಾಡ ತಾಲ್ಲೂಕು ಕೆ.ಎಲ್.ಇ. ಪದವಿ ಮಹಾವಿದ್ಯಾಲಯ ಶಿರಗುಪ್ಪಿಯಲ್ಲಿ ಹಮ್ಮಿಕೊಂಡಿದ್ದ “ಕಲಾ ವೈಭವ 2023” ಕೊನೆಯ ದಿನ ಸಾಂಪ್ರದಾಯಿಕ ದಿನೋತ್ಸವ ಸಮಾರಂಭದಲ್ಲಿ “ಸಾಹಿತ್ಯ ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳು” ಈ ವಿಷಯ ಕುರಿತು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಮಾನವೀಯ ಮೌಲ್ಯಗಳು ಅಧಃಪತನವಾಗುತ್ತಿರುವ ಈ ಕಾಲ ಘಟ್ಟದಲ್ಲಿ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳ ಕುರಿತು ಪುಸ್ತಕದಲ್ಲಿ ಚಿಂತಕರು ಪ್ರತಿಪಾದಿಸಿದ ಮೌಲ್ಯಗಳನ್ನು ಕೇವಲ ಓದಿ ಅರ್ಥ ಮಾಡಿಕೊಂಡರೆ ಸಾಲದು,ನಿಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಮಾಣಿಕನಾಗಿದ್ದವನು ಎಂದಿಗೂ ಅಪ್ರಾಮಾಣಿಕ ಹಾದಿಯಲ್ಲಿ ಸಾಗಲಾರನು. ಆತ್ಮಸಾಕ್ಷಿ ವಿರುದ್ಧ ಎಂದೆಂದಿಗೂ ಹೋಗಬಾರದು ಎಂಬ ಮೌಲ್ಯವನ್ನು ನೀವೆಲ್ಲರೂ ಸೂಕ್ಷ್ಮವಾಗಿ ಅರಿಯಬೇಕು.ಬುದ್ಧ, ಬಸವ, ಮಹಾವೀರ, ಏಸು, ಹಾಗೂ ಪೈಗಂಬರ್ ಇಡೀ ತಮ್ಮ ಜೀವನದುದ್ದಕ್ಕೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನೇ ಪ್ರತಿಪಾದಿಸಿದರು ಎಂದು ವಿಶ್ಲೇಷಿಸಿದರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು, ಶ್ರಮ ಸಂಸ್ಕೃತಿಯನ್ನು ಅಳವಡಿಸಿಕೊಂಡ ಜನಪದರು ತಮ್ಮ ಇಡೀ ಜೀವನದಲ್ಲಿ ಜೀವನ ಮೌಲ್ಯಗಳನ್ನು ಚೆನ್ನಾಗಿ ಅರಿತು ಮುಂದಿನ ಜನಾಂಗಕ್ಕೆ ಆದರ್ಶ ಪ್ರಾಯರಾದರು ಎಂದರು. ನಾವು ಮೊದಲು ಬದಲಾದರೆ ಸಮಾಜ ತಾನೇ ಬದಲಾವಣೆ ಆಗುತ್ತದೆ. ಬಸವಣ್ಣನವರ ಸಪ್ತಸೂತ್ರವನ್ನು ಚೆನ್ನಾಗಿ ಪ್ರತಿಪಾದಿಸುವ “ಕಳಬೇಡ ಕೊಲಬೇಡ” ವಚನವನ್ನು ನಾವು ಚೆನ್ನಾಗಿ ಪಚನ ಮಾಡಿಕೊಂಡರೆ ನಮ್ಮ ಜೀವನದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು. ಉಪನ್ಯಾಸದ ಕೊನೆಗೆ ಎರಡು ಸುಂದರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ವಿದ್ಯಾರ್ಥಿಗಳ ಮನಸೂರೆಗೊಂಡರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಜಯವೀರ ಎ.ಕೆ. ಅವರು “ಸರಳ ಜೀವನದಲ್ಲಿ ಉನ್ನತ ಚಿಂತನೆಯನ್ನು ಮೈಗೂಡಿಸಿಕೊಂಡ ಡಾ ಹೊಂಬಯ್ಯ ಹೊನ್ನಲಗೆರೆ ಅವರು ನಮ್ಮ ನಡುವಿನ ಓರ್ವ ಕ್ರಿಯಾಶೀಲ ಬರಹಗಾರರು. ಅವರು ಮಾತನಾಡುವ ಮಂಡ್ಯ ಭಾಗದ ಅಚ್ಚಕನ್ನಡ ಭಾಷೆ ನಾವು ಕೇಳುವುದೇ ಒಂದು ಕುತೂಹಲ. ಬೇಡಕಿಹಾಳ ಎಂಬ ಗಡಿಭಾಗದಲ್ಲಿ ಇಂದು ಕನ್ನಡ ಕಟ್ಟುವ ಕಾಯಕದಲ್ಲಿ ನಿರತರಾದ ಡಾ. ಹೊಂಬಯ್ಯ ನಿಜಕ್ಕೂ ಓರ್ವ ಅಪರೂಪದ ಕನ್ನಡ ಕಿಂಕರ ಎಂದು ಹೇಳಿದರು. ಸಾಹಿತ್ಯದಲ್ಲಿ ಸಂಸ್ಕೃತಿ ಹೇಗೆ ಮಡುಗಟ್ಟಿ ನಿಂತಿದೆ. ಜೀವನ ಮೌಲ್ಯಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಂಡು ನಾವು ಏಕೆ ಬಾಳಬೇಕು ಎಂಬುದನ್ನು ತಿಳಿಯಬೇಕಾದರೆ ಡಾ.ಹೊಂಬಯ್ಯ ಸರ್ ಅವರಂತಹ ಸಂಪನ್ಮೂಲ ವ್ಯಕ್ತಿಗಳಿಂದ ಅರಿಯಲು ನೀವೆಲ್ಲರೂ ಅವರ ವಿದ್ವತಪೂರ್ಣ ಭಾಷಣವನ್ನು ಚೆನ್ನಾಗಿ ಆಲಿಸಬೇಕೆಂದು ಪ್ರಾಸ್ತಾವಿಕ ಹಾಗೂ ಅತಿಥಿ ಪರಿಚಯ ನುಡಿಗಳ ಮೂಲಕ ತಮ್ಮ ಮನದ ಮಾತುಗಳನ್ನು ಆಪ್ತವಾಗಿ ಹಂಚಿಕೊಂಡರು. ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಪಾಟೀಲ ಅವರು “ಸಂಶೋಧಕರು,ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳಾದ ಡಾ.ಹೊಂಬಯ್ಯ ಸರ್ ಅವರ ಉಪನ್ಯಾಸ ನಿಜಕ್ಕೂ ಅದ್ಬುತ ಹಾಗೂ ಅಪ್ಯಾಯಮಾನವಾಗಿತ್ತು. ನೀವೆಲ್ಲರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕೆಂದು ತಮ್ಮ ಅಧ್ಯಕ್ಷೀಯ ಆಶಯ ನುಡಿಗಳ ಮೂಲಕ ಹಂಚಿಕೊಂಡರು.ಇದೇ ಸಂದರ್ಭದಲ್ಲಿ ಸೊಗಸಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಣೆ ಮಾಡುವ ಮೂಲಕ ಕಾರ್ಯಕ್ರಮದ ಮೆರುಗು ಇಮ್ಮಡಿಗೊಳಿಸಿ ಮುಖ್ಯ ಅತಿಥಿಗಳ ಪ್ರಶಂಸೆಗೆ ಪಾತ್ರಳಾದ ಮಹಾವಿದ್ಯಾಲಯದ ಅಂತಿಮ ಬಿ.ಕಾಂ.ವಿದ್ಯಾರ್ಥಿನಿ ಭರವಸೆಯ ಆಕರ್ಷಕ ನಿರೂಪಕಿ ಕು.ನಪೀಸಾ ಅರಬ ಅವರಿಗೆ ಮುಖ್ಯ ಅತಿಥಿಗಳಾಗಿದ್ದ ಡಾ.ಹೊಂಬಯ್ಯ ಗುರುಗಳು ಹಾಗೂ ವೇದಿಕೆ ಮೇಲಿನ ಗಣ್ಯ ಮಾನ್ಯರು ಹೂ ಗುಚ್ಛ ನೀಡಿ ಗೌರವಿಸಿದರು. ವಾಣಿಜ್ಯ ವಿಭಾಗದ ಸಂಯೋಜಕರಾದ ಪ್ರೊ.ಎಲ್.ಎಸ್.ವಂಟಮೂರೆ, ಕನ್ನಡ ಪ್ರಾಧ್ಯಾಪಕರಾದ ಡಾ ಜಯವೀರ ಎ.ಕೆ. ಪ್ರೊ.ಎ.ಎಸ್.ಶಿರಗುಪ್ಪೆ, ಪ್ರೊ.ರಾಧಿಕಾ ಯಾದವ,ಪ್ರೊ.ರಾಹುಲ್ ಮಾಂಜರೆ,ವೇದಿಕೆ ಮೇಲೆ ಉಪಸ್ಥಿತರಿದ್ದರು. ಕು.ನಂದಿನಿ ಹಾಗೂ ಸಂಗಡಿಗರು ಸ್ವಾಗತ ಗೀತೆಗೆ ಕಂಠದಾನ ನೀಡಿದರು.ಆರಂಭದಲ್ಲಿ ಕು. ಲಕ್ಷ್ಮಿ ಘೋಸರವಾಡೆ ಸ್ವಾಗತಿಸಿದರು.ಕು.ನಪೀಸಾ ಅರಬ ಕಾರ್ಯಕ್ರಮ ನಿರೂಪಿಸಿದರು.ಕೊನೆಗೆ ಕು.ಸೌರಭ ಪ್ರಧಾನೆ ವಂದಿಸಿದರು. ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಹಲವಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ನಮ್ಮ ಮೂಲ ಜನಪದ ವಿಶಿಷ್ಟ ವಿಭಿನ್ನವಾದ ಸಂಸ್ಕೃತಿಯನ್ನು ಬಿಂಬಿಸುವ ಬಗೆ ಬಗೆಯ ಸಮೂಹ ಗೀತನೃತ್ಯ ಮಾಡುವ ಮೂಲಕ “ಕಲಾ ವೈಭವ 2023” ಸಾಂಪ್ರದಾಯಿಕ ದಿನೋತ್ಸವಕ್ಕೆ ಅಂದ ಹೆಚ್ಚಿಸಿ, ಉತ್ತಮ ಮೆರುಗು ಇಮ್ಮಡಿಗೊಳಿಸಿ ನೆರೆದ ಪ್ರೇಕ್ಷಕರ ಮನಸೂರೆಗೊಂಡರು.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*