ನವದೆಹಲಿ: ಗೃಹ ಬಳಕೆಯ 14 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ. ಸಬ್ಸಿಡಿ ಘೋಷಣೆ ಮಾಡಿದ ಬೆನ್ನಲ್ಲೇ ಈಗ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಕಡಿತಗೊಂಡಿದೆ.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCs) 19-ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 158 ರೂ. ಕಡಿತಗೊಳಿಸಿವೆ. ಹೊಸ ಬೆಲೆಗಳು ಇಂದಿನಿಂದಲೇ ಜಾರಿಗೆ ಬರಲಿವೆ. ವಾಣಿಜ್ಯ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪರಿಷ್ಕರಣೆಗಳು ಪ್ರತಿ ತಿಂಗಳ ಮೊದಲ ದಿನದಂದು ನಡೆಯುತ್ತವೆ.
ಈ ಹಿಂದೆ ರಕ್ಷಾ ಬಂಧನದ ಮುನ್ನಾದಿನದಂದು ದೇಶದ ಮಹಿಳೆಯರಿಗೆ ಉಡುಗೊರೆಯಾಗಿ ಕೇಂದ್ರ ಸರ್ಕಾರವು ಗೃಹ ಬಳಕೆಯ ಎಲ್‌ಪಿಜಿಗೆ 200 ರೂ. ಸಬ್ಸಿಡಿ ಘೋಷಣೆ ಮಾಡಿತ್ತು. ಆಗಸ್ಟ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಒಎಂಸಿಗಳು 99.75 ರೂ. ರಷ್ಟು ಕಡಿತಗೊಳಿಸಿದ್ದವು. ಜುಲೈನಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ತಲಾ 7 ರೂ.ಗಳಷ್ಟು ಹೆಚ್ಚಿಸಲಾಗಿತ್ತು.
ಈ ಏರಿಕೆಗೆ ಮೊದಲು ಈ ವರ್ಷದ ಮೇ ಮತ್ತು ಜೂನ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸತತ ಎರಡು ಬಾರಿ ಕಡಿತ ಮಾಡಲಾಗಿತ್ತು. ಮೇ ತಿಂಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 172 ರೂ. ಕಡಿತಗೊಂಡಿದ್ದರೆ ಜೂನ್‌ನಲ್ಲಿ 83 ರೂ. ಕಡಿತಗೊಂಡಿದೆ.