ಬೆಳಗಾವಿ
ವರದಿ ಶ್ರೀನಾಥ್ ಶಿರಗೂರ
: ಅನುಭಾವ ಕವಿ ಶ್ರೀ ಮೀರಾಸಾಬ್ ಮುಲ್ಲಾ ವೇದಿಕೆ”
ಪರಮಾನಂದವಾಡಿ: ಎರಡು ಸಾವಿರ ವರ್ಷಗಳಷ್ಟು ಇತಿಹಾಸವಿರುವ ಶ್ರೀಮಂತ ಭಾಷೆ ಕನ್ನಡ, ಅಂತ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೊಸ ಪೀಳಿಗೆಗೆ ಕನ್ನಡವನ್ನು ಸರಿಯಾಗಿ ಕಲಿಸುವುದು ಅರ್ಥ ಮಾಡಿಸುವುದು ಬಹಳ ಮುಖ್ಯ ಎಷ್ಟೇ ಭಾಷೆಯನ್ನು ಕಲಿತರೂ ಮಾತೃಭಾಷೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ರಾಯಬಾಗ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಧರ್ಮಣ್ಣ ನಾಯಿಕ ಸಲಹೆ ನೀಡಿದರು.
ಗ್ರಾಮದ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಆವರಣದಲ್ಲಿ ಶನಿವಾರ ಜರುಗಿದ ರಾಯಬಾಗ ತಾಲೂಕಾ 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸರ್ವಾಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ರಾಯಬಾಗ ತಾಲೂಕು ಹೊಯ್ಸಳರ ಕಾಲದ ಸಾಹಿತ್ಯ ಪರಂಪರೆಯನ್ನು ಹೊಂದಿದ್ದು ಇಲ್ಲಿ ಬ್ರಿಟಿಷರ ಕಾಲದಲ್ಲಿ ಕನ್ನಡ ಶಾಲೆಗಳು ಆರಂಭವಾಗುವ ಮೂಲಕ ಕನ್ನಡ ಸೇವೆಯ ಹೆಜ್ಜೆ ಗುರುತುಗಳು ಕಾಣಿಸುತ್ತವೆ. ಈ ಭಾಗದ ಜಾನಪದ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು ಭಾವೈಕ್ಯತೆ ಸಾರುವ ಲಾವಣಿ ಪದ, ಡೊಳ್ಳಿನ ಪದ, ಭಜನಾ ಪದ, ಸೋಬಾನ ಪದ, ಚೌಡಕಿ ಪದ, ಕರ್ಬಲ ಪದಗಳು ಇಲ್ಲಿಯ ರೈತಾಪಿ ಕುಟುಂಬಗಳ ಮನೆ ಮಾತಾಗಿದೆ ರಾಜ್ಯದಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸರ್ಕಾರ ತಾಯಿ ಭಾಷೆಯನ್ನು ಗಟ್ಟಿ ಗೊಳಿಸಬೇಕು. ಆಧುನಿಕತೆಯ ಭರಾಟೆಯಲ್ಲಿ ರಂಗಕಲೆಯು ನಶಿಸಿ ಅಪಾಯದ ಅಂಚಿನಲ್ಲಿದೆ ಗ್ರಾಮೀಣ ಕಲೆಗಳು ಪುನರುಜ್ಜೀವನವಾಗಬೇಕಿದ್ದು ಹಳ್ಳಿಗಳಲ್ಲಿ ಜಾನಪದ ಕಲಾವಿದರು, ನಾಟಕ ಕಲಾವಿದರು ಸಾಕಷ್ಟಿದ್ದು ಇವರನ್ನು ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯು ನಿರಂತರವಾಗಿ ಇಂತಹ ಕಲಾವಿದರನ್ನು ಗುರುತಿಸಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಬಿ.ವಿ ವಸಂತಕುಮಾರ ಅವರು ಕಾವೇರಿಯಿಂದ ಗೋದಾವರಿವರೆಗೆ ಹರಡಿದ್ದ ಕನ್ನಡ ನಾಡು ಸ್ವಾತಂತ್ರ್ಯದ ನಂತರ ಭಾಷಾವಾರು ರಾಜ್ಯಗಳಾಗಿ ವಿಂಗಡಣೆಯಾದಾಗ ಅನೇಕ ಅಪ್ಪಟ ಕನ್ನಡ ಪ್ರದೇಶಗಳು ನಮ್ಮ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳನಾಡು, ಕೇರಳ ಹಾಗೂ ಗೋವಾ ರಾಜ್ಯಗಳಲ್ಲಿ ಹಂಚಿ ಹೋಗಿವೆ. ಹೀಗಾಗಿ ಆಯಾ ರಾಜ್ಯ ಸರ್ಕಾರಗಳು ಆ ಪ್ರದೇಶದಲ್ಲಿರುವ ಹೊರನಾಡ ಕನ್ನಡಿಗರ ಕುರಿತು ವಿಶೇಷ ಕಾಳಜಿ ವಹಿಸಿ ಅವರ ಜೀವನಮಟ್ಟ ಸುಧಾರಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರು ಮಾತನಾಡಿ ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ, ಕನ್ನಡ ನಾಡು ನುಡಿ, ಗಡಿ, ಜಲ, ಭಾಷೆಗಳ ವಿಷಯದಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕರ್ನಾಟಕ ಸರ್ಕಾರದ್ದು ಸರ್ವೋಚ್ಚ ನ್ಯಾಯಾಲಯದಲ್ಲಿರುವ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ತಯಾರಿ ಮಾಡಿಕೊಳ್ಳಬೇಕು. ನೆರೆಯ ಮಹಾರಾಷ್ಟ್ರದ ತಾಲೂಕಿನಲ್ಲಿರುವ ಕನ್ನಡಿಗರಿಗೆ ಅಲ್ಲಿ ಸರ್ಕಾರ ತಾರತಮ್ಯ ನೀತಿಯನ್ನು ಅನುಸರಿಸಿ ಕಿರುಕುಳ ಕೊಡುತ್ತಿದೆ. ಹೀಗಾಗಿ ಅವರ ರಕ್ಷಣೆಗೆ ಕರ್ನಾಟಕ ಸರ್ಕಾರ ವಿಶೇಷ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.
ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ನಾಡದೇವಿಗೆ ಪೂಜೆ ಸಲ್ಲಿಸಿದರು. ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಖಿಲಾರೆ ಮೆರವಣಿಗೆಗೆ ಚಾಲನೆ ನೀಡಿದರು. ನಿಕಟ ಪೂರ್ವ ಅಧ್ಯಕ್ಷ ಸಾಹಿತಿ ಶಿವಾನಂದ ಬೆಳಕುಡ ಪರಿಷತ್ತಿನ ಧ್ವಜ ಹಸ್ತಾಂತರಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ ಈ ಬಾಗೇನಾಡಿನ ಸಮ್ಮೇಳನವು ಐತಿಹಾಸಿಕವಾಗಿದೆ ರಾಷ್ಟ್ರಭಾಷೆ ಹಿಂದಿಗೆ ನೀಡಿರುವ ಎಲ್ಲಾ ಮಾನ್ಯತೆಯನ್ನು ಮಾತೃಭಾಷೆ ಕನ್ನಡಕ್ಕೂ ನೀಡಬೇಕು. ಕೇಂದ್ರ ಸರ್ಕಾರದಿಂದ ನಡೆಸುವ ಎಲ್ಲಾ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕು. ಬೇರೆ ಬೇರೆ ರಾಜ್ಯಗಳಿಂದ ವಲಸೆ ಬಂದ ವ್ಯಾಪಾರಿಗಳಿಗೆ ಕೂಲಿ ಕಾರ್ಮಿಕರಿಗೆ ಕನ್ನಡವನ್ನು ಕಲಿಸಿ ಕನ್ನಡದಲ್ಲಿ ಮಾತನಾಡುವಂತೆ ಪ್ರೇರೆಪಿಸುವ ಕಾರ್ಯವಾಗಬೇಕು ಎಂದು ಆಶಯ ನುಡಿಯನ್ನಾಡಿ ನಾಡ ಧ್ವಜಾರೋಹಣ ನೆರವೇರಿಸಿದರು.
ಮಹಾಲಕ್ಷ್ಮೀದೇವಿ ಪಂಚ ಕಮಿಟಿಯ ಅಧ್ಯಕ್ಷ ಧರೇಪ್ಪ ಗಂಡೋಶಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ತಾಲೂಕ ಕಸಾಪ ಅಧ್ಯಕ್ಷ ರವೀಂದ್ರ ಪಾಟೀಲ ಪರಿಷತ್ತಿನ ಧ್ವಜಾರೋಹನ ಮಾಡಿದರು. ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು.
ಕನ್ನಡ ಜಗತ್ತು ಕುರಿತು ಡಾ.ರತ್ನಾ ಬಾಲಪ್ಪನವರ ಹಾಗೂ ವಿಠ್ಠಲ ಜೋಡಟ್ಟಿ ಉಪನ್ಯಾಸ ನೀಡಿದರು. ಡಾ.ವಿ.ಎಸ. ಮಾಳಿ ಅಧ್ಯಕ್ಷತೆ ವಹಿಸಿದ್ದರು. ಕವಿ ಕಲ್ಲೇಶ ಕುಂಬಾರ ಅವರ ಅಧ್ಯಕ್ಷತೆಯಲ್ಲಿ ಕವಿ ಸಮಯ ಕವಿಗೋಷ್ಠಿ ಜರುಗಿತು.ಐ.ಆರ. ಮಠಪತಿ ಅವರ ಅಧ್ಯಕ್ಷತೆ ಹಾಗೂ ಅವಳೆಕುಮಾರ, ಸಿದ್ದು ಹುಲ್ಲೋಳಿ ಅವರ ಉಪಸ್ಥಿತಿಯಲ್ಲಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸತ್ಕರಿಸಿ ಗೌರವಿಸಲಾಯಿತು.
ಸಮ್ಮೇಳನದಲ್ಲಿ 1.ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ನೀಡುವಂತಾಗಬೇಕು. 2.ಗಡಿನಾಡಿನ ನೆಲ,ಜಲ,ಭಾಷೆ ರಕ್ಷಣೆಗೆ ಸರ್ಕಾರ ಕಾಯ್ದೆಗಳನ್ನು ರೂಪಿಸಬೇಕು. 3.ನಾಮಫಲಕಗಳಲ್ಲಿ ಕನ್ನಡವನ್ನು ಮೊದಲ ಆದ್ಯತೆಯಲ್ಲಿ ಬರೆಸಿ ಕನ್ನಡ ಅಂಕಿ ಬಳಸಲು ಸರ್ಕಾರ ಕಾನೂನು ರೂಪಿಸಬೇಕು ಎಂಬ ಒಟ್ಟು ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪೂಜ್ಯರಾದ ಪರಮಪೂಜ್ಯ ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ರಾಯಬಾಗ ತಾಲೂಕಾ ಕಸಾಪ ಅಧ್ಯಕ್ಷ ರವೀಂದ್ರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಬಾಲಕೃಷ್ಣ ಜಂಬಗಿ, ಸುಖದೇವ ಕಾಂಬಳೆ, ಎಂ.ವೈ.ಮೆಣಸಿನಕಾಯಿ ಶಂಕರ ಕ್ಯಾಸ್ತಿ, ಡಾ.ಲಕ್ಷ್ಮಣ ಚೌರಿ, ಬಸವರಾಜ ಸನದಿ ತಾಲೂಕಾ ದಂಡಾಧಿಕಾರಿ ರಿಯಾಜುದ್ದೀನ ಭಾಗವಾನ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಡಾ.ಸುರೇಶ ಕದ್ದು,ಬಸನಗೌಡ ಆಸಂಗಿ,ರಾಮಣ್ಣ ಗಸ್ತಿ, ಇಸ್ಮಾಯಿಲ್ ಮುಲ್ಲಾ, ಎಸ.ಎಲ.ಬಾಂಡಿ,ಲತಾ ಹುದ್ದಾರ, ಬಾಳು ಚೌಗಲಾ, ಶಂಕರ ಹೊನವಾಡೆ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.