ವರದಿ: ರಾಜಶೇಖರ ಶೇಗುಣಸಿ.
ಅದ್ದೂರಿಯಾಗಿ ನಡೆದ ಭವ್ಯ ರಥೋತ್ಸವ ರೈತರ ಸಂಕಷ್ಟ ದೂರಾಗಲಿವೆ: *ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು*
ಮುಗಳಖೋಡ : ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಮಹಾಪ್ರಭುಗಳು ನಡೆಸಿಕೊಂಡು ಬಂದಿರುವ ಸಂಪ್ರದಾಯದಂತೆ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಗುರು ಶ್ರೀ ಸಿದ್ದಲಿಂಗೇಶ್ವರರ ಜಾತ್ರೆಯು ಶ್ರದ್ಧಾ ಹಾಗೂ ಭಕ್ತಿ ಭಾವದಿಂದ ಅದ್ದೂರಿಯಾಗಿ ನಡೆಯಿತು. ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು
ಭಕ್ತರ ಕಲ್ಯಾಣಕ್ಕಾಗಿ ಅಗ್ನಿಹಾಯ್ದರು. ಅಗ್ನಿ ಹಾಯ್ದ ನಂತರ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಇದಕ್ಕೂ ಮೊದಲು ಶ್ರೀ ಯಲ್ಲಾಲಿಂಗೇಶ್ವರ ಮಹಾ ಪ್ರಭುಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಭಕ್ತರಿಗೆ ದರ್ಶನ ಆಶೀರ್ವಾದ ಮಾಡಿದರು. ನಂತರ ಸಂಜೆ 6 ಗಂಟೆಗೆ ಭವ್ಯ ರಥೋತ್ಸವ ಜರುಗಿತು. ಭಕ್ತರು ಉತ್ತತ್ತಿ ಬೆಂಡು ಬೇತೋಸು ಕಾಯಿ ಹಾರಿಸಿ ತಮ್ಮ ಭಕ್ತಿಯ ಹರಕೆಯನ್ನು ತೀರಿಸಿದರು. ನಂತರ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಭಕ್ತರು ಭಕ್ತಿಯ ಭಾವದಿಂದ ಗುರುವಿನ ಮೇಲೆ ಇಟ್ಟಿರುವ ಭಕ್ತಿ ಮರಳಿ ಅವರಿಗೆ ಮಹಾಪ್ರಸಾದದ ವರವಾಗಿ ನೀಡುತ್ತದೆ.
ಈ ಬಾರಿ ರೈತರ ಸಂಕಷ್ಟಗಳು ದೂರಾಗಿ ಮುಂಬರುವ ದಿನಗಳು ಸುಖಮಯವಾಗಿರುತ್ತದೆ ಎಂದು ಆಶೀರ್ವಚನ ನೀಡಿದರು ಈ ಸಂದರ್ಭದಲ್ಲಿ ನಾಲ್ಕೈದು ರಾಜ್ಯಗಳ ಭಕ್ತರು ಆಗಮಿಸಿದ್ದರು. ಹಾರೂಗೇರಿ ಪೊಲೀಸ್ ಠಾಣೆಯ ಪೋಲಿಸ್ ಸಿಬ್ಬಂದಿ ಸೂಕ್ತ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಇಂದು ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು: ಜಾತ್ರಾ ಮಹೋತ್ಸವದ ಅಂಗವಾಗಿ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳು ಗುರುವಾರ ಸಂಜೆ 6 ಗಂಟೆಗೆ ನಡೆಯಲಿದೆ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ಪಾವನ ಸಾನಿಧ್ಯ ವಹಿಸುವರು. ಕುಸ್ತಿ ಪಂದ್ಯಾವಳಿಯಲ್ಲಿ ದೆಹಲಿ, ಪುನಾ, ಸಾಂಗ್ಲಿ, ಸಾತಾರಾ, ಮುಧೋಳ ದಾವಣಗೆರೆ, ಬಳ್ಳಿ ಸೇರಿದಂತೆ ಎ ಗ್ರೇಡ್ ಕುಸ್ತಿ ಪಂದ್ಯಾವಳಿಗಳಿಗೆ ಪೈಲ್ವಾನರು ಆಗಮಿಸಿ ಸೆಣಸಾಡಲಿದ್ದಾರೆ ಎಂದು ಪುರಸಭೆ ಸದಸ್ಯ ಹಾಲಪ್ಪ ಶೇಗುಣಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.