ಬೈಲಹೊಂಗಲದಲ್ಲಿ ಚುನಾವಣಾ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಾ, ಅಭಿವೃದ್ಧಿ ಎಂಬ ರಸ್ತೆಯಲ್ಲಿ ದೇಶ ಮುಂದೆ ಸಾಗುತ್ತಿದೆ. ಬಿಜೆಪಿ ಸರ್ಕಾರ ಪ್ರತಿಯೊಬ್ಬರ ಏಳಿಗೆಗೆ ಶ್ರಮಿಸುತ್ತಿದೆ. ಹೀಗಾಗಿ ಜನರು ಬಿಜೆಪಿ ಮೇಲೆ ವಿಶ್ವಾಸ ಇಟ್ಟಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯ ನೀಡಬೇಕು ಎಂಬುದು ಬಿಜೆಪಿಯ ಉದ್ದೇಶವಾಗಿದೆ ಎಂದು ಪ್ರಧಾನಿ ಹೇಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ನದ್ದು ಶಾರ್ಟ್ಕಟ್ ರಾಜಕೀಯ
ಕಾಂಗ್ರೆಸ್ ಹಾಗೂ ಜೆಡಿಎಸ್ನದ್ದು ಶಾರ್ಟ್ಕಟ್ ರಾಜಕೀಯ. ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಿ. ಈ ಎರಡು ಪಕ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ಬರೀ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿವೆ. ಸಮಾಜ ಒಡೆಯುತ್ತಾ, ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ ಹಾಗೂ ಜೆಡಿಎಸ್ ಪಕ್ಷಗಳು ಮಾಡುತ್ತಿವೆ ಎಂದು ಹೇಳಿದರು. ಈ ಮೂಲಕ ಪ್ರಧಾನಿ ಮೋದಿ ಕಿಡಿಕಾರಿದರು.
ಜೆಡಿಎಸ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಕರ್ನಾಟಕದ ಜನರು ಕಾಂಗ್ರೆಸ್-ಜೆಡಿಎಸ್‌ನ ಶಾರ್ಟ್ಕಟ್ ಸರ್ಕಾರದ ಬಗ್ಗೆ ಎಚ್ಚರವಾಗಿರಬೇಕು. ಶಾರ್ಟ್ಕಟ್ ರಾಜಕಾರಣ ಮಾಡುವುದು ಅಂದರೆ ಸಮಾಜವನ್ನು ವಿಭಜಿಸಿದಂತೆ. ಇಂತಹ ರಾಜಕೀಯ ಮಾಡುವವರು ಒಡೆದು ಆಳುವ ನೀತಿ ಅನುಸರಿಸುತ್ತಾರೆ. ಇದು ವಿಕಾಸದ ದಾರಿ ಆಗುವುದಿಲ್ಲ. ಈ ಶಾರ್ಟ್ಕಟ್ ರಾಜಕಾರಣದ ಮುಂದಿನ ಪೀಳಿಗೆಗೆ ಹಸ್ತಾಂತರವಾಗಬಾರದು. ಇಂದಿನ ಯುವ ಪೀಳಿಗೆ ಶಾರ್ಟ್ಕಟ್ನವರ ಕೈಗೆ ಅಧಿಕಾರ ಕೊಡುವುದಿಲ್ಲ ಎಂದು ಟಾಂಗ್ ಕೊಟ್ಟರು.
ಶಾರ್ಟ್ಕಟ್ ರಾಜಕಾರಣ ಮಾಡುವವರಿಗೆ ಪ್ರಾದೇಶಿಕ ಅಸಮಾನತೆ ಅರಿವು ಇರಲಿಲ್ಲ. ಆದರೆ ಈ ಅಸಮಾನತೆ ಹೋಗಲಾಡಿಸಿ, ಬಿಜೆಪಿ ಸಮತೋಲನದ ಆಡಳಿತ ಮಾಡುತ್ತಿದೆ. ಒಗ್ಗಟ್ಟಿನಲ್ಲಿ ಕರ್ನಾಟಕ ಸರ್ಕಾರದ ಭವಿಷ್ಯ ಇದೆ. ಆದರೆ ಕಾಂಗ್ರೆಸ್ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ. ಕರ್ನಾಟಕದ ಜನತೆ ಇದರ ಬಗ್ಗೆ ಎಚ್ಚರವಾಗಿರಬೇಕು. ಜನತಾ ಜನಾರ್ಧನ ಎಂಬುದು ಬಹಳ ಅವಶ್ಯಕತೆ ಇದೆ. ಬಿಜೆಪಿ ಮತ್ತು ನಾನು ನಿಮ್ಮ ಸೇವಕನಂತೆ ಕೆಲಸ ಮಾಡುತ್ತಿದ್ದೇನೆ. ಆದರೆ ಕಾಂಗ್ರೆಸ್ ಸೇವೆ ದೆಹಲಿಯಲ್ಲಿನ ಕುಟುಂಬದ ಮೇಲೆ ಇದೆ.
ಜನರೇ ನನ್ನ ಪರಿವಾರ
ಕಾಂಗ್ರೆಸ್ನ ರಿಮೋಟ್ ಇರುವುದು ದೆಹಲಿಯ ಒಂದು ಕುಟುಂಬದ ಮನೆಯಲ್ಲಿ. ಜೆಡಿಎಸ್ ಒಂದು ಪರಿವಾರದ ಪ್ರೈವೆಟ್ ಲಿಮಿಟೆಡ್ ಕಂಪನಿ. ಆದರೆ ಮೋದಿಗೆ ಈ ಕುಟುಂಬ ರಾಜಕಾರಣ ಗೊತ್ತಿಲ್ಲ. ಜನರೇ ನನ್ನ ಪರಿವಾರ. ಜನರ ಸುಖ-ದುಃಖಗಳೇ ನನಗೆ ನನ್ನ ಕುಟುಂಬದ ಸುಖ-ದುಃಖಗಳಿದ್ದಂತೆ ಎಂದು ಪ್ರಧಾನಿ ಮೋದಿ ಹೇಳಿದರು.
ಬಿಜೆಪಿ ಕರ್ನಾಟಕವನ್ನು ಅಭಿವೃದ್ಧಿ ಮಾಡಲು ಪಣ ತೊಟ್ಟಿದೆ. ಇಡೀ ಭಾರತದಲ್ಲಿ ಕರ್ನಾಟಕ ನಂ.1 ರಾಜ್ಯವಾಗಬೇಕು. ಬಿಜೆಪಿ ಮತ ಹಾಕಿದಾಗ ಕರ್ನಾಟಕವನ್ನು ದೇಶದಲ್ಲೇ ನಂಬರ್ 01 ರಾಜ್ಯವನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇದರ ಭಾಗವಾಗಿ ಸದ್ಯ ರಾಜ್ಯದಲ್ಲಿ ವಿಮಾನ ನಿಲ್ದಾಣ, ಆಧುನಿಕ ರೈಲ್ವೇ ನಿಲ್ದಾಣಗಳು ನಿರ್ಮಾಣವಾಗುತ್ತಿವೆ
ಕಾಂಗ್ರೆಸ್ ನಾಯಕರಿಗೆ ಅವಮಾನ ಮಾಡುವುದು ಜಾಯಮಾನವಾಗಿದೆ. ನಾಯಕರಾದ ವೀರ ಸಾವರ್ಕರ್, ಅಂಬೇಡ್ಕರ್ ಅವರಿಗೆ ಅಪಮಾನ ಎಸಗಿದ ಕಾಂಗ್ರೆಸ್, ಕನ್ನಡಿಗರಾದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರನ್ನೂ ಸಹ ಕೆಟ್ಟದಾಗಿ ನಡೆಸಿಕೊಳ್ಳುವ ಮೂಲಕ ದ್ರೋಹ ಬಗೆದಿದೆ. ಕಿತ್ತೂರು ರಾಣಿ ಚೆನ್ನಮ್ಮರಂತಹ ವೀರನಾಡಲ್ಲಿ, ಎಲ್ಲಿಯ ತನಕ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿತ್ತೋ, ಅಲ್ಲಿಯವರೆಗೂ ಮಹಿಳೆಯರಿಗೆ ಸೈನ್ಯ ಹಾಗೂ ನೌಕಾದಳಗಳಲ್ಲಿ ಅವಕಾಶವಿರಲಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಅವಕಾಶಗಳ ಬಾಗಿಲು ತೆರೆದಿದ್ದೇವೆ ಎಂದು ಮೋದಿ ಹೇಳಿದರು.