ಅಥಣಿ: ಕರ್ನಾಟಕದಲ್ಲಿ ಕೆಲ ಕಡೆ ಪ್ರಚಾರ ನಡೆಸಿದ್ದೇನೆ. ಆಮ್ ಆದ್ಮಿ ಪರವಾಗಿ ಉತ್ತಮವಾದ ವಾತಾವರಣ ಇದೆ. ಜನರು ಬದಲಾವಣೆ ಬಯಸಿದ್ದಾರೆ. ಆಮ್ ಆದ್ಮಿ ಮರ್ಯಾದೆಯ ಪಕ್ಷ. ನಮ್ಮ ನಾಯಕ ಅರವಿಂದ ಕ್ರೇಜಿವಾಲ್ ದೆಹಲಿಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಇದರ ಪರಿಣಾಮ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತದಿಂದ ಸರಕಾರ ರಚನೆ ಮಾಡಲು ಸಾಧ್ಯವಾಯಿತು ಎಂದು ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಭಗವಂತ ಮಾನ್ ಅವರು ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಂಪತ್ ಕುಮಾರ ಶೆಟ್ಟಿ ಅವರ ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡುತ್ತಾ, ಆಮ್ ಆದ್ಮಿ ಪಕ್ಷ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಜನ ಎಲೆಸ್ಟೆಡ್ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಹೊರತು ಸೆಲೆಸ್ಟೆಡ್ ಅಭ್ಯರ್ಥಿಯನ್ನಲ್ಲ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಇಲ್ಲಿಯವರೆಗೆ ಆಡಳಿತ ನಡೆಸಿದ ಯಾವ ಪಕ್ಷವೂ ಕೂಡ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಬರುವ ಮುನ್ನ ಒಂದು ವರ್ಷದ ಹಿಂದೆ ಕಬ್ಬಿನ ದರದ ಸಮಸ್ಯೆಯಿತ್ತು. ಒಂದೊಂದು, ಎರಡೆರಡು ವರ್ಷ ಬಿಲ್ ರೈತರಿಗೆ ಸಿಗುತ್ತಿತ್ತು. ನಮ್ಮ ಸರಕಾರ ರಚನೆಯಾದ ಮೇಲೆ 3 ಸಾವಿರ ಕೋಟಿ ರೂ. ಬಿಲ್ ಪಾಸ್ ಮಾಡಿ ಈಗ ರೈತರಿಗೆ ನಿಗದಿತ ಸಮಯದಲ್ಲಿ ಕಬ್ಬಿನ ಬಿಲ್ ಸಿಗುತ್ತಿದೆ ಎಂದರು.
ಇದಕ್ಕೂ ಮುಂಚೆ ಶಿವಾಜಿ ವೃತ್ತದಲ್ಲಿ ಶಿವಾಜಿ ಪ್ರತಿಮೆಗೆ ಪುಷ್ಪವನ್ನು ಅರ್ಪಿಸಿ, ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆಯಲ್ಲಿ ಭಾಗಿಯಾದರು. ಈ ವೇಳೆ ಅಭ್ಯರ್ಥಿ ಸಂಪತ್ ಕುಮಾರ್ ಶೆಟ್ಟಿ ಅವರು ಇದ್ದರು.





