ವರದಿ :ಸಂಜೀವ್ ಬ್ಯಾಕುಡೆ
ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪೋಲಿಸ್ ಇಲಾಖೆಯಿಂದ ಪಟ್ಟಣದಲ್ಲಿ ಹೆಲ್ಮೆಟ್ ಧರಿಸುವಂತೆ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು.
ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಮಾಳಪ್ಪ ಪೂಜೇರಿ ನೇತೃತ್ವದಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿಯವರು ಠಾಣೆಯಿಂದ ಚಿಂಚಲಿ ವೃತ್ತ, ರೇಲ್ವೆ ನಿಲ್ದಾಣ, ದೌ ಹೊಟೇಲ್, ಕೆನರಾ ಬ್ಯಾಂಕ್, ಊರಿನ ಅಗಸಿ ಮಾರ್ಗವಾಗಿ ದತ್ತ ಮಂದಿರ, ಮಾಳಿಂಗರಾಯ ಮಂದಿರ ಮೂಲಕ ಪೊಲೀಸ್ ಠಾಣೆಯ ವರೆಗೆ ಪೊಲೀಸ್ ವಾಹನದೊಂದಿಗೆ ಸಿಬ್ಬಂದಿಯವರು ಬೈಕ್ ಮೇಲೆ ಹೆಲ್ಮೆಟ್ ಧರಿಸುವ ಮೂಲಕ ರ್ಯಾಲಿ ನಡೆಸಿದರು.
ಜನದಟ್ಟಣೆ ಇರುವ ಜಾಗದಲ್ಲಿ ಬೈಕ್ ನಿಲ್ಲಿಸಿ ಮಾತನಾಡಿದ ಪಿಎಸ್ಐ ಮಾಳಪ್ಪ ಪೂಜೇರಿ ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಕಬ್ಬಿನ ಹಂಗಾಮು ಪ್ರಾರಂಭವಾಗಿದ್ದರಿಂದ ರಸ್ತೆ ಮೇಲೆ ವಾಹನ ದಟ್ಟಣೆ ಹೆಚ್ಚುತ್ತಿದೆ, ಇದರಿಂದ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ವಾಹನ ಸವಾರರು ವಾಹನ ಚಾಲನೆ ಮಾಡುವಾಗ ತಮ್ಮ ಸುರಕ್ಷತೆ ದೃಷ್ಟಿಯಿಂದ ಇಲಾಖೆ ನೀತಿ ನಿಯಮಗಳನ್ನು ಪಾಲಿಸುವ ಮೂಲಕ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸುರಕ್ಷಿತ ಪ್ರಯಾಣ ಮಾಡಬೇಕು ಹೆಲ್ಮೆಟ್ ನಮ್ಮ ತಲೆಗೆ ಭಾರ ಅಲ್ಲ ಅದು ನಮ್ಮ ಜೀವದ ರಕ್ಷಕನಾಗಿ ಕೆಲಸ ಮಾಡುವುದು ಎಂದು ವಾಹನ ಸವಾರರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ತನಿಖಾ ಉಪನಿರೀಕ್ಷಕರಾದ ಎಸ್.ಬಿ.ಖೋತ, ಸಹಾಯಕ ಉಪನಿರೀಕ್ಷಕರಾದ ಸುರೇಶ್ ಕಲ್ಯಾಣಪೂರಕರ, ಅಣ್ಣಪ್ಪ ಮಂಗಸೂಳಿ, ಕೆ.ಡಿ.ಸಾಳುಂಕೆ, ಬಾನಪ್ಪ ಖೋತ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.