ನವದೆಹಲಿ: ರಾಜಕೀಯ ಜೀವನದಲ್ಲಿ ಸದಾ ಬ್ಯುಸಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೈಯಕ್ತಿಕ ಜೀವನವನ್ನು ಅಷ್ಟೇ ಚೆನ್ನಾಗಿ ಎಂಜಾಯ್ ಮಾಡುತ್ತಾರೆ. ಬೈಕ್ ರೇಡ್, ಸ್ಟ್ರೀಟ್ ವಾಕ್, ಫ್ರೆಂಡ್ಸ್ ಪಾರ್ಟಿ, ಸಂಡೇ ವಿಸಿಟ್ ಅಂತಾ ಎಂಜಾಯ್ ಮಾಡ್ತಿರ್ತಾರೆ. ಇದೀಗ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಸೇರಿ ಸ್ಪೆಷಲ್ ಚಂಪಾರಣ್ ಮಟನ್ ಅಡುಗೆ ಮಾಡಿ ಉಣಬಡಿಸಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 6.44 ನಿಮಿಷಗಳ ಈ ವೀಡಿಯೋದಲ್ಲಿ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ರಾಹುಲ್ ಗಾಂಧಿಯೂ ವಿಶೇಷ ಖಾದ್ಯಗಳನ್ನ ತಯಾರಿಸಿ ಉಣಬಡಿಸಿದ್ದಾರೆ. ಈ ವೀಡಿಯೋ ಸದ್ದು ಮಾಡುತ್ತಿದ್ದಂತೆ ನೆಟ್ಟಿಗರು ಇದು ಭಾನುವಾರದ ಬಾಡೂಟಕ್ಕೆ ರಾಹುಲ್ ಗಾಂಧಿ ಅವರ ಸ್ಪೆಷಲ್ ರೆಸಿಪಿ ಎಂದು ಹಾಸ್ಯ ಮಾಡಿದ್ದಾರೆ.
ಇನ್ನೂ ಈ ವೀಡಿಯೋ ಕುರಿತು ಪ್ರತಿಕ್ರಿಯಿಸಿರುವ ರಾಗಾ, ನಾನು ಯುರೋಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಒಬ್ಬಂಟಿಯಾಗಿರುತ್ತಿದ್ದೆ. ಹಾಗಾಗಿ ಅಡುಗೆ ಕಲಿಯಬೇಕಾದ ಅನಿವಾರ್ಯತೆ ಇತ್ತು. ನನಗೆ ಅಡುಗೆ ಮಾಡುವುದು ಗೊತ್ತಿದೆ. ಆದ್ರೆ ಹೆಚ್ಚು ನಿಪುಣನಲ್ಲ. ಲಾಲು ಯಾದವ್ ಜೀ ಅವರು ಬೆಸ್ಟ್ ಕುಕ್, ಉತ್ತಮವಾಗಿ ಅಡುಗೆ ಮಾಡ್ತಾರೆ ಎಂದು ಹೇಳಿಕೊಂಡಿದ್ದಾರೆ.
ನೀವು ಯಾವಾಗ ಅಡುಗೆ ಕಲಿತಿರಿ ಎಂಬ ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರಿಸಿದ ಲಾಲು ಪ್ರಸಾದ್ ಯಾದವ್, ನಾನು 6 ಅಥವಾ 7ನೇ ತರಗತಿಯಲ್ಲಿದ್ದೆ. ಆಗ ನನ್ನ ಸಹೋದರ ಪಾಟ್ನಾದಲ್ಲಿ ಕೆಲಸ ಮಾಡಿಕೊಂಡಿದ್ದ, ನನ್ನನ್ನೂ ಕರೆದಿದ್ದ. ನಾನು ಅವನನ್ನು ಭೇಟಿ ಮಾಡಲು ಹೋದಾಗ ಅಲ್ಲಿ ನನಗೆ ಅಡುಗೆ ಮಾಡುವುದು, ಮಸಾಲೆ ಪುಡಿ ಮಾಡುವುದು, ಪಾತ್ರೆ ತೊಳೆಯುವುದು ಎಲ್ಲವನ್ನೂ ಕಲಿಸಿಕೊಟ್ಟ ಎಂದು ಹೇಳಿಕೊಂಡಿದ್ದಾರೆ.