ಬೆಳಗಾವಿ.ರಾಯಬಾಗ:* ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸನ್ 2005-06 ರಲ್ಲಿ ಒಟ್ಟು 187 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಪ್ರಾರಂಭಿಸಿರುವುದು ಗಮನಾರ್ಹವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 430 ಸರಕಾರಿ ಪದವಿ ಕಾಲೇಜುಗಳಿದ್ದು ದೇಶದಲ್ಲಿಯೇ ಅತಿ ಹೆಚ್ಚು ಸರಕಾರಿ ಪದವಿ ಕಾಲೇಜುಗಳನ್ನು ಹೊಂದಿದ ಕೀರ್ತಿ ಕರ್ನಾಟಕದ್ದಾಗಿದೆ.ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಮತ್ತು ಪೂರ್ಣಕಾಲಿಕ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಒದಗಿಸುವುದು ಸರ್ಕಾರ ಮತ್ತು ಇಲಾಖೆಯ ಜವಾಬ್ದಾರಿಯಾಗಿದೆ.
ಉನ್ನತ ಶಿಕ್ಷಣದಲ್ಲಿ ಕರ್ನಾಟಕವೇ ಮಾದರಿಯನ್ನುವಂತೆ ದೇಶದ ಬೇರೆ ಬೇರೆ ರಾಜ್ಯಗಳಿಂದ ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಖ್ಯಾತಿಯನ್ನು ಗಳಿಸಿವೆ. ಒಂದು ಕಾಲೇಜಿನ ಗುಣಮಟ್ಟದ ಶಿಕ್ಷಣವು ಅಲ್ಲಿನ ಪರಿಣಾಮಕಾರಿ ಬೋಧನೆಯ ಜೊತೆಗೆ ದಕ್ಷ ಆಡಳಿತ ವಿಧಾನದ ಮೇಲೆ ನಿರ್ಧರಿಸಲ್ಪಡುತ್ತದೆ. ಕಾಲೇಜಿನ ಪ್ರಾಂಶುಪಾಲ ಹುದ್ದೆಯು ಯುಜಿಸಿ ನೀಡಿರುವ ಪ್ರದತ್ತವಾದ ಹುದ್ದೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಯ ಸಮಾನಾಂತರ ಗೆಜೆಟೆಡ್ ಎ ದರ್ಜೆ ಹುದ್ದೆಯಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ಪೂರ್ಣಕಾಲಿಕ ಗ್ರೇಡ್-1 ಪ್ರಾಚಾರ್ಯರ ಹುದ್ದೆಗಳನ್ನು ನೇಮಕ ಮಾಡದಿರುವುದು ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆಯ ಬಹುದೊಡ್ಡ ವೈಫಲ್ಯವಾಗಿದೆ.ಇದರಿಂದಾಗಿ ಕಾಲೇಜುಗಳ ದೈನಂದಿನ ಆಡಳಿತ ಶೈಕ್ಷಣಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತಿದ್ದು ಎಲ್ಲದಕ್ಕೂ ಪ್ರಭಾರಿ ಪ್ರಾಚಾರ್ಯರನ್ನೇ ಅವಲಂಬಿಸಿದೆ. ಕೆಲವು ಅಧ್ಯಾಪಕರು ಪ್ರಭಾರಿ ಪ್ರಾಚಾರ್ಯರ ಚಾರ್ಜನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದು, ಇತ್ತೀಚಿಗೆ ನೇಮಕಗೊಂಡ ಕಿರಿಯ ಅಧ್ಯಾಪಕರು ಚಾರ್ಜು ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳ ಪ್ರವೇಶಾತಿ, ತರಗತಿಗಳ ಮೇಲ್ವಿಚಾರಣೆ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು, ಗ್ರಂಥಾಲಯದ ಸದ್ಬಳಕೆ, ಎನ್ಎಸ್ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್,ಐ ಕ್ಯೂ ಎ ಸಿ ಕಾರ್ಯ ಚಟುವಟಿಕೆಗಳು, ಕಾಲೇಜಿನ ಪರಿಸರ ಸಂರಕ್ಷಣೆ, ಸ್ವಚ್ಛತೆ, ಸಾಮಾಜಿಕ ಉಪಯೋಗಿ ಕಾರ್ಯಕ್ರಮಗಳು, ವಿವಿಧ ವಿಷಯಗಳ ಕಾರ್ಯಾಗಾರಗಳು, ಪ್ಲೇಸ್ಮೆಂಟ್ ಚಟುವಟಿಕೆಗಳು, ಮಹಿಳಾ ಸಬಲೀಕರಣ ಘಟಕ, ಎಸ್ ಸಿ/ಎಸ್ ಟಿ ಘಟಕ ಮತ್ತು ವಿದ್ಯಾರ್ಥಿ ವೇತನದ ಪ್ರಯೋಜನಗಳು ಹೀಗೆ ಹತ್ತು ಹಲವು ಕಾರ್ಯಗಳ ಜೊತೆಗೆ ಸಿ ಡಿ ಸಿ ಸಭೆಗಳನ್ನು ಕರೆದು ಕಾಲೇಜಿನ ಸರ್ವತೋಮುಖ ಶೈಕ್ಷಣಿಕ ಹಾಗೂ ಭೌತಿಕ ಅಭಿವೃದ್ಧಿ ಸಾಧಿಸುವಲ್ಲಿ ಪ್ರಾಚಾರ್ಯರು ಬೋಧಕ ,ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿ ಸಮೂಹ ಹಾಗೂ ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿ ಒಳ್ಳೆಯ ನಾಯಕತ್ವ ಹೊಂದಿರುವ ಪ್ರಾಚಾರ್ಯರ ಜವಾಬ್ದಾರಿ ಅತಿ ಮಹತ್ವದ್ದಾಗಿದೆ.
ಕರ್ನಾಟಕ ಸರ್ಕಾರದ ಸಚಿವಾಲಯವು ದಿನಾಂಕ:09/09/2020 ರಂದು ಅಧಿಸೂಚನೆಯನ್ನು ಹೊರಡಿಸಿ ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ ಸ್ನಾತಕ ಶಿಕ್ಷಣ ವಿಶೇಷ ನಿಯಮಗಳನ್ನು ರೂಪಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಿ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸುವಂತೆ ಕೋರಿ ಕರ್ನಾಟಕ ವಿಶೇಷ ರಾಜ್ಯ ಪತ್ರಿಕೆ ಹೊರಡಿಸಿ ನಿಗದಿಪಡಿಸಿದ ಅವಧಿಯೊಳಗೆ ಸ್ವೀಕರಿಸಿದ ಅಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿ ವಿಶೇಷ ನಿಯಮಗಳನ್ನು ಯು ಜಿ ಸಿ ಮಾರ್ಗಸೂಚಿಯಂತೆ ರಚಿಸಿದೆ.
• ಕಾನೂನು ರೀತ್ಯಾ ಸ್ಥಾಪಿಸಿರುವ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
• ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಸಂಯೋಜನೆಗೊಂಡಿರುವ ಯಾವುದೇ ಸರಕಾರಿ ಅಥವಾ ಖಾಸಗಿ ಕಾಲೇಜಿನಲ್ಲಿ ಬೋಧನೆ ಅಥವಾ ಸಂಶೋಧನೆಗೆ ಅಥವಾ ಆಡಳಿತದಲ್ಲಿ ಪೂರ್ಣ ಕಾಲಿಕ ಬೋಧಕ ಸಿಬ್ಬಂದಿಯಾಗಿ ಒಟ್ಟು 15 ವರ್ಷಗಳ ಸೇವಾನುಭವ ಹೊಂದಿರುವ ಪ್ರಾಧ್ಯಾಪಕ ಅಥವಾ ಸಹ ಪ್ರಾಧ್ಯಾಪಕರಾಗಿರಬೇಕು.
• ಯು ಜಿ ಸಿ ಪಟ್ಟಿ ಮಾಡಿರುವ ಪ್ರೌಢ ಸಂಶೋಧನಾ ಪತ್ರಿಕೆಗಳಲ್ಲಿ ಕನಿಷ್ಠ 10 ಸಂಶೋಧನಾ ಪ್ರೌಢ ಲೇಖನಗಳನ್ನು ಹೊಂದಿರಬೇಕು.
• ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ನಿರ್ವಹಣೆಗೆ ಸಂಬಂಧಿಸಿದ ಕ್ರಮಗಳ ಕುರಿತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನಿಮಯಗಳು-2018 ರ ಅನುಬಂಧ ಅನುಸಾರವಾಗಿ ಕನಿಷ್ಠ 110 ಸಂಶೋಧನಾ ಅಂಕಗಳನ್ನು ಹೊಂದಿರಬೇಕು.
ಉನ್ನತ ಶಿಕ್ಷಣ ಇಲಾಖೆ ಆಯ್ಕೆ ಪ್ರಾಧಿಕಾರವನ್ನು ರಚನೆ ಮಾಡಿದೆ. ನೇಮಕಾತಿ ಪ್ರಾಧಿಕಾರ ಸರ್ಕಾರ ಇದ್ದು, ಪರೀಕ್ಷಾ ಪ್ರಾಧಿಕಾರ ಕೆ ಇ ಎ ಇರುತ್ತದೆ. ಈಗಾಗಲೇ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಪ್ರಾಚಾರ್ಯರ ಹುದ್ದೆಗಳಿಗೆ ಪರೀಕ್ಷೆ ನಡೆಸಿ ಕೀ ಉತ್ತರಗಳನ್ನು ಕೆ ಇ ಎ ಈಗಾಗಲೇ ಪ್ರಕಟಿಸಿದೆ. ಕರ್ನಾಟಕದ ಆಡಳಿತ ನ್ಯಾಯ ಮಂಡಳಿ ಸೂಕ್ತ ಅರ್ಹತೆ ಹೊಂದಿದವರಿಗೆ ಪ್ರಾಚಾರ್ಯರ ಗ್ರೇಡ್ -1 ಹುದ್ದೆ ನೀಡುವಂತೆ ಫೆಬ್ರವರಿ-2023 ರಲ್ಲಿ ತೀರ್ಪು ನೀಡಿದೆ. ಈ ಮಧ್ಯೆ ಕಾಲೇಜು ಶಿಕ್ಷಣ ಇಲಾಖೆಯ ಪ್ರಾಂಶುಪಾಲರ ಹುದ್ದೆ ಭರ್ತಿ ಸಂಬಂಧ ಬೇರೆ ಬೇರೆ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ.ಆದರೆ ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆ ಯು ಜಿ ಸಿ ಮಾರ್ಗಸೂಚಿಗಳನ್ವಯ ನಿಯಮಗಳನ್ನ ರೂಪಿಸಿ ಪ್ರಾಂಶುಪಾಲರು ಗ್ರೇಡ್-1 ಹುದ್ದೆ ಭರ್ತಿ ಸಂಬಂಧ ಒಂದು ತಾರ್ಕಿಕ ಅಂತ್ಯವನ್ನು ತಲುಪಿದೆ ಎಂಬುದು ಆಶಾದಾಯಕವಾಗಿದೆ. ಆದರೆ ಅರ್ಹತೆ ಹೊಂದಿರದ ಕೆಲವರು ಈ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿರುವುದು ತೀವ್ರ ವಿಷಾದನೀಯ ಸಂಗತಿಯಾಗಿದೆ.
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಗ್ರೇಡ್-1 ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಆಸಕ್ತಿ ವಹಿಸುತ್ತಿಲ್ಲ ಎಂದು ತೋರುತ್ತಿದೆ. ಈ ಸಮಸ್ಯೆಯನ್ನು ಆದಷ್ಟು ಬೇಗನೆ ಪರಿಹರಿಸಿ ಸಂಬಂಧಿಸಿದ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮೌನ ಮುರಿದು ಪ್ರಥಮ ಆದ್ಯತೆ ಎಂದು ಅರಿತುಕೊಂಡು ಇತ್ತ ಗಮನ ನೀಡಬೇಕೆಂದು ಸಾರ್ವಜನಿಕರು,ಪೋಷಕರು,ಸ್ಟೆಕ್ ಹೋಲ್ಡರ್ಗಳು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
*ವರದಿ: ಡಾ.ಜಯವೀರ ಎ.ಕೆ*.
*ಖೇಮಲಾಪುರ*