ಚಿಂಚಲಿ ಶ್ರೀ ಗುರುದೇವ ಆಶ್ರಮದಲ್ಲಿ
ಸಂಕ್ರಾಂತಿ ಹಬ್ಬದ ಸಂಭ್ರಮ

Share the Post Now

ಬೆಳಗಾವಿ.


ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಶ್ರೀ ಗುರುದೇವ ಆಶ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಮಣ ಹಬ್ಬದ ನಿಮಿತ್ಯವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪ.ಪೂ. ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ವಿರಕ್ತ ಮಠ ತಿಕೋಟಾ ಇವರು ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು, ಮಾನವ ಜನ್ಮ ಪಡೆದ ನಾವು ಪಾಪದ ಕಾರ್ಯಗಳನ್ನು ಬಿಟ್ಟು ಪುಣ್ಯಮಯ ಕಾರ್ಯದಲ್ಲಿ, ಧರ್ಮ ಮಾರ್ಗದಲ್ಲಿ ನಡೆಯುತ್ತಾ ಸತ್ಕಾರ್ಯಗಳಲ್ಲಿ ಬೆರೆತು ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದು ಹೇಳಿದರು.

ವಿಜಯಪುರದ ಪ.ಪೂ. ಶ್ರೀ ಷಡಕ್ಷರಿ ಮಹಾಸ್ವಾಮಿಗಳು ಪಾವನ ಸಾನಿಧ್ಯವನ್ನು ಅಲಂಕರಿಸಿಕೊಂಡು ಭಾರತದ ಋತುಮಾನ ಪ್ರಕಾರ ಹೊಸ ವರ್ಷವೂ ಮಕರ ಸಂಕ್ರಮಣ ಹಬ್ಬದಿಂದ ಪ್ರಾರಂಭಗೊಳ್ಳುವುದು. ನಾವೆಲ್ಲರೂ ನಮ್ಮಲ್ಲಿರುವಂತ ದ್ವೇಷ ಭಾವನೆಗಳನ್ನು ತೊರೆದು, ಸದ್ಭಾವನೆಗಳನ್ನು ಬೆಳೆಸಿಕೊಂಡು, ಎಳ್ಳು ಬೆಲ್ಲದ ಹಾಗೆ ಸದಾ ತಮ್ಮೆಲ್ಲರ ಜೀವನ ಸುಗಮವಾಗಿ ಸಾಗಲೆಂದು ಅನುಭವದ ನುಡಿಗಳನ್ನು ಹೇಳಿದರು.

ಪರಮಪೂಜ್ಯ ಶ್ರೀ ಸಿದ್ಧಪ್ರಸಾದ ಮಹಾಸ್ವಾಮಿಗಳು, ಶ್ರೀ ಗುರುದೇವ ಆಶ್ರಮ ಚಿಂಚಲಿ ಇವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡು ನಮ್ಮ ಪವಿತ್ರ ಭಾರತ ದೇಶವು ಅನೇಕ ಹಬ್ಬಗಳ ತಾನವಾಗಿದ್ದು ಪ್ರತಿಯೊಂದು ಹಬ್ಬಗಳು ವಿಶಿಷ್ಟವಾದ ಹಿನ್ನೆಲೆಯನ್ನು ಹೊಂದಿರುತ್ತವೆ. ಹಬ್ಬಗಳು ನಮ್ಮೆಲ್ಲರಿಗೂ ಸಂತಸ ಸಂಭ್ರಮವನ್ನು ತಂದು ಕೊಡುತ್ತವೆ. ಒಡೆದು ಹೋದ ಕುಟುಂಬಗಳನ್ನು, ಮನಸ್ಸುಗಳನ್ನು, ಸ್ನೇಹತ್ವವನ್ನು ಒಂದುಗೂಡಿಸುವ ಮಹತ್ವವನ್ನು ಹೊಂದಿವೆ ಎಂದು ಅನುಭವದ ನುಡಿಗಳನ್ನು ಹೇಳಿ ನಮ್ಮೆಲ್ಲರ ಮನಸ್ಸುಗಳನ್ನು ತಿಳಿಗೊಳಿಸುವ ಆಶೀರ್ವಚನ ನುಡಿಗಳನ್ನು ಹೇಳಿದರು.

ಇದೇ ಸಂಭ್ರಮದಲ್ಲಿ ನೊಬೆಲ್ ಶಾಲೆಯ ಹಾಗೂ ವಿವಿಧ ಶಾಲೆಯ ಮಕ್ಕಳು ಭಕ್ತಿ ಗೀತೆ, ವಚನಗಳು, ನೃತ್ಯ ರೂಪಕಗಳನ್ನು ಪ್ರದರ್ಶನ ಮಾಡಿ ಸಕಲ ಭಕ್ತಾದಿಗಳನ್ನು ಖುಷಿಪಡಿಸಿದರು. ಪೂಜ್ಯರು ಮಕ್ಕಳಿಗೆ ಬಹುಮಾನ ನೀಡಿ ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ ರಾಯಬಾಗ ಘಟಕದ ಯುವ ರಕ್ಷಣಾ ವೇದಿಕೆ ಅಧ್ಯಕ್ಷ ಗಜಾನನ ಮಾಳಿ ಇವರು ಸಕಲ ಪೂಜ್ಯರನ್ನು ಗೌರವಿಸಿದರು. ಚಿಂಚಲಿ, ಭಿರಡಿ, ಬೆಕ್ಕೇರಿ, ಕುಡಚಿ, ಸುಟ್ಟಟ್ಟಿ, ಜಲಾಲಪೂರ, ಮೊರಬ,ರಾಯಬಾಗ ಹೀಗೆ ಅನೇಕ ಗ್ರಾಮ, ಪಟ್ಟಣಗಳಿಂದ ಅನೇಕ ಭಕ್ತಾದಿಗಳು ನಾನಾ ತರದ ಭಕ್ತಿಯ ಬುತ್ತಿಯನ್ನು ಕಟ್ಟಿಕೊಂಡು ಬಂದು ಸರ್ವರೂ ಸಾಮೂಹಿಕವಾಗಿ ಪ್ರೀತಿಯ ಭೋಜನವನ್ನು ಸವಿದು ಖುಷಿ ಪಟ್ಟರು.

ಅಶೋಕ ಕುಲಗುಡೆ ಸ್ವಾಗತಿಸಿದರು. ಬಾಳೇಶ್ ಕಾಗವಾಡೆ ವಂದಿಸಿದರು. ಶ್ರೀಶೈಲ. ಕಂಕಣವಾಡಿ. ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!