ನಿಗಮ ಸ್ಥಾಪನೆ ಆಗದಿದ್ದರೆ ಬೆಂಗಳೂರು ಫ್ರೀಡಂ ಪಾರ್ಕ ನಲ್ಲಿ ಸತ್ಯಾಗ್ರಹಕ್ಕೆ ಸಿದ್ಧ : ಡಾ. ಸಿ.ಬಿ.ಕುಲಿಗೋಡ.
ಮುಗಳಖೋಡ: ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರ ಕಾಲು ಎಳೆಯುವರು ಇದ್ದೇ ಇರುವರು. ಅದಕ್ಕೆ ಕಿವಿ ಕೊಡದೆ ಸಮಾಜದ ಅಭಿವೃದ್ಧಿನೇ ನಮ್ಮ ಆದ್ಯ ಕರ್ತವ್ಯ ಎಂದು ನಿಗಮ ಸ್ಥಾಪನೆ ಆಗುವವರೆಗೂ ನಾವು ನಮ್ಮ ಜನರ ಕೈಬಿಡುವುದಿಲ್ಲ. ಸಮಾಜ, ಸಮುದಾಯ ಎಂದು ಬಂದರೆ ರಾಜಕೀಯ ಮರೆತು ಪಕ್ಷಾತೀತವಾಗಿ ಕೈ ಜೋಡಿಸಿ, ನಿಗಮ ಸ್ಥಾಪನೆ ಆಗದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಕುಳಿತು ಜೀವ ಇರುವವರೆಗೂ ಹೋರಾಡೋಣ. ಜೀವ ಬಿಟ್ಟರು ನಮ್ಮ ಸಮಾಜದ ನಿಗಮ ಬಿಡಲಾರೆವು ಎಂದು ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಡಾ. ಸಿ.ಬಿ.ಕುಲಿಗೋಡ ಹೇಳಿದರು.
ಅವರು ಮುಗಳಖೋಡ ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಮಾಧವಾನಂದ ಸಭಾಂಗಣದಲ್ಲಿ ಏರ್ಪಡಿಸಿದ ರಾಜ್ಯದ ಮಾಳಿ-ಮಾಲಗಾರ ಸಮಾಜದಲ್ಲಿ ಚುನಾಯಿತ ಅಭ್ಯರ್ಥಿಗಳಿಗೆ ಸತ್ಕಾರ ಕಾರ್ಯಕ್ರಮದ ಗೌರವ ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಸಾಹಿತಿಗಳಾದ ಡಾ. ವಿ.ಎಸ್.ಮಾಳಿ ಮಾತನಾಡಿ ಮಾಳಿ ಸಮಾಜದಲ್ಲಿಯ ಜನ ಇವತ್ತು ಪಂಚಾಯತ ಮತ್ತು ಹಲವಾರು ಸೊಸೈಟಿಯ ಅಧ್ಯಕ್ಷ ಉಪಾಧ್ಯಕ್ಷರಾಗಿರುವುದು ನಮ್ಮ ಹೆಮ್ಮೆ ಎಂದು ಹೇಳಿದರು.
ಮಾಳಿ-ಮಾಲಗಾರ ಸಮಾಜದ ರಾಜ್ಯಾಧ್ಯಕ್ಷ ಕಾಡು ಮಾಳಿ ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿ ಸಮಾಜ ಹಾಗೂ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆ ಮೇಲೆ ಮಾಳಿ-ಮಾಲಗಾರ ಸಮಾಜದಿಂದ ವಿವಿಧ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪ್ರಕಾಶ ಕಂಬಾರ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಅಪ್ಪಸಾಬ ಕುಲಿಗುಡೆ, ಮುಗಳಖೋಡ ಹಾಗೂ ಬೇರೆ ಬೇರೆ ಜಿಲ್ಲೆ ತಾಲೂಕುಗಳಿಂದ ಆಗಮಿಸಿದ ಮಾಳಿ-ಮಾಲಗಾರ ಸಮಾಜದ ಮುಖಂಡರು, ಹಿರಿಯರು, ಉತ್ಸಾಹಿಗಳು, ಯುವಕರು ಉಪಸ್ಥಿತರಿದ್ದರು.
ವರದಿ: ಸಂತೋಷ ಮುಗಳಿ