ಬೆಂಗಳೂರು: ದಸರಾ ಹಬ್ಬಕ್ಕೆ ಇನ್ನೊಂದೇ ತಿಂಗಳು ಬಾಕಿ. ಮೈಸೂರು ದಸರಾ ಎಂದರೆ ಇಡೀ ನಾಡಿಗೆ ವೈಭವ. ಆದರೆ ಈ ವರ್ಷ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ.
ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಭೀಕರ ಬರಗಾಲ ಆವರಿಸಿದ್ದು, ವಿಜೃಂಭಣೆಯಿಂದ ಆಚರಿಸಬೇಕಿದ್ದ ಮೈಸೂರು ದಸರಾಗೆ ಸರ್ಕಾರ ಅನಗತ್ಯ ವೆಚ್ಚಕ್ಕೆ ಈ ಬಾರಿ ಕಡಿವಾಣ ಹಾಕಿದೆ. ಅಧಿಕೃತ ಘೋಷಣೆಯ ಪ್ರಕಾರ, ಕರ್ನಾಟಕದ 237 ತಾಲ್ಲೂಕುಗಳಲ್ಲಿ 195 ಬರಪೀಡಿತವಾಗಿವೆ, ಇದರಲ್ಲಿ 161 ತೀವ್ರ ಬರಪೀಡಿತ ತಾಲ್ಲೂಕುಗಳು ಸೇರಿವೆ.
ಕಳೆದ ವರ್ಷ, ರಾಜ್ಯ ಸರ್ಕಾರವು ದಸರಾ ಕಾರ್ಯಕ್ರಮಗಳು, ದೀಪಗಳು ಮತ್ತು ಇತರ ಖರ್ಚುಗಳನ್ನು ಒಳಗೊಂಡಂತೆ 26 ಕೋಟಿ ರೂಪಾಯಿ ವೆಚ್ಚ ಮಾಡಿ ಭವ್ಯ ದಸರಾವನ್ನು ಆಯೋಜಿಸಿತ್ತು. ಕೋವಿಡ್ ನಂತರ ನಡೆದ ಅದ್ದೂರಿ ದಸರಾವಾಗಿತ್ತು. ಆದರೆ ಈ ವರ್ಷ ಮತ್ತೆ ಅದ್ದೂರಿ ಆಚರಣೆಗೆ ಬ್ರೇಕ್ ಬಿದ್ದು ಸರ್ಕಾರ ಸಾಂಪ್ರದಾಯಿಕವಾಗಿ ಸರಳವಾಗಿ ಆಚರಿಸಲಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ಈ ವರ್ಷ ಜುಲೈನಲ್ಲಿ ದಸರಾವನ್ನು ಅದ್ಧೂರಿಯಾಗಿ ಆಯೋಜಿಸಲು ಉನ್ನತ ಮಟ್ಟದ ಸಮಿತಿ ನಿರ್ಧರಿಸಿದಾಗ ರಾಜ್ಯವು ಬರಗಾಲವನ್ನು ಎದುರಿಸಲಿಲ್ಲ. ಈಗ ಪರಿಸ್ಥಿತಿ ಬದಲಾಗಿದ್ದು, ಅನಗತ್ಯ ಖರ್ಚು ಕಡಿಮೆ ಮಾಡುವತ್ತ ಗಮನ ಹರಿಸಲಾಗಿದೆ. ನಾವು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ವೆಚ್ಚವನ್ನು ಕಡಿತಗೊಳಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದರು.
ಸರ್ಕಾರ ಸರಳ ದಸರಾವನ್ನು ಆಯೋಜಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ಸವವು ಅದ್ದೂರಿ ಅಥವಾ ಸರಳವಾಗಿರುವುದಿಲ್ಲ. ನಿಯಮಿತ ಆಚರಣೆಗಳು ಮತ್ತು ಸಂಪ್ರದಾಯಗಳನ್ನುಆಚರಿಸಲಾಗುವುದು. ಇದು ಮಧ್ಯಮ ದಸರಾ ಎಂದು ಹೇಳಿದರು.
ಮೈಸೂರಿನಲ್ಲಿ ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ವಿಶೇಷವಾಗಿ ಹೌದಾ ಹೊತ್ತ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ. ಅಕ್ಟೋಬರ್ 15 ರಂದು ದಸರಾ ಮಹೋತ್ಸವವನ್ನು ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ ಎಂದರು.
ಮಂಡ್ಯದಲ್ಲಿ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತು ವಾರ್ಷಿಕ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಜಯನಗರದಲ್ಲಿ ನಡೆಯಬೇಕಿದ್ದ ಹಂಪಿ ಉತ್ಸವವನ್ನು ಬರಗಾಲದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ಅದ್ಧೂರಿ ದಸರಾ ಆಯೋಜಿಸಿದೆ ಎಂದು ವಿವಿಧ ವರ್ಗಗಳ ಜನರು ಟೀಕಿಸುತ್ತಿದ್ದಾರೆ.