ಮನುಕುಲಕ್ಕೆ ಆದರ್ಶ ಶಿವಶರಣೆ ಮಲ್ಲಮ್ಮ

Share the Post Now

ವಿಶೇಷ ಲೇಖನ – ಸಿದ್ದರೂಢ ಬಣ್ಣದ

ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವವಾಗಿ ಆರಾಧಿಸಿ, ಅವರನ್ನು ಸಾಕ್ಷಾತ್ಕರಿಸಿಕೊಂಡ ಹೇಮರಡ್ಡಿ ಮಲ್ಲಮ್ಮ ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೇ ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದರು. ತಾನು ಎಷ್ಟೇ ಕಷ್ಟ ಅನುಭವಿಸಿದರೂ ಅದಕ್ಕೆ ನೊಂದುಕೊಳ್ಳದೇ, ಮಲ್ಲಿಕಾರ್ಜುನನನ್ನು ಪೂಜಿಸಿ, ಧ್ಯಾನಿಸಿ ಮುಕ್ತಿ ಪಡೆದರು.



ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಯ ರಾಮಪುರದ ರಡ್ಡಿ ಅರಸೊತ್ತಿಗೆಯ ನಾಗರಡ್ಡಿ-ಗೌರಮ್ಮ ದಂಪತಿಗಳಿಗೆ ಜನಿಸಿದ ಮಲ್ಲಮ್ಮ ಬಾಲ್ಯದಲ್ಲಿಯೇ ಸದಾಕಾಲ ಶ್ರೀಶೈಲ ಮಲ್ಲಿಕಾರ್ಜುನನ ಪೂಜೆ, ಜಪ, ಧ್ಯಾನಗಳಲ್ಲಿ ಮಗ್ನಳಾಗುತ್ತಿದ್ದರು.

ನಾಗರಡ್ಡಿ ತನ್ನ ಮಗಳಿಗೆ ಪುರಾಣ, ಶಾಸ್ತ್ರ, ಪುಣ್ಯ ಕಥೆಗಳನ್ನೆಲ್ಲ ಹೇಳುತ್ತಿದ್ದರು. ಇದೇ ಸಂಸ್ಕಾರದಲ್ಲಿ ಬೆಳೆದುಬಂದ ಮಲ್ಲಮ್ಮರನ್ನು ರಡ್ಡಿ ರಾಜರಲ್ಲಿ 5ನೇ ಅರಸ ಸಿದ್ದಾಪುರದ ಕುಮಾರ ಗಿರಿವೇಮರಡ್ಡಿಯ ಪುತ್ರ ಭರಮರಡ್ಡಿಗೆ ಮದುವೆ ಮಾಡಿಕೊಡಲಾಯಿತು. ಅತೀ ಮುಗ್ಧ ಸ್ವಭಾವದ ಗಂಡ ಭರಮರಡ್ಡಿಯನ್ನು ದೇವರಂತೆ ಉಪಚರಿಸುತ್ತಿದ್ದ ಮಲ್ಲಮ್ಮ ವಿಷಲಂಟನಾಗಿದ್ದ ಮೈದುನ ವೇಮನನನ್ನು ಮಗನಂತೆ ಕಂಡು ಪ್ರೀತಿಯಿಂದ ತಿದ್ದಿ, ಬುದ್ಧಿ ಹೇಳಿ ಮಹಾಯೋಗಿಯನ್ನಾಗಿ ಪರಿವರ್ತಿಸಿದರು.



ಮುಂದೆ ವೇಮನ ಸುಪ್ರಸಿದ್ಧ ಮಹಾಯೋಗಿಯಾಗಿ ಲೋಕ ಬೆಳಗಿದನು. ಮಲ್ಲಮ್ಮರ ಕಾರ್ಯಗಳೆಲ್ಲ ಜನಪ್ರಿಯತೆಯನ್ನು ಹೆಚ್ಚಿಸಿದವು. ಇದರಿಂದ ಎಲ್ಲೆಡೆಯಲ್ಲೂ ಮಲ್ಲಮ್ಮರ ಕೀರ್ತಿ ಬೆಳಗತೊಡಗಿತು. ಇದು ಅವರ ನೆಗೆಯಣ್ಣಿಯರಿಗೆ ಹೊಟ್ಟೆಕಿಚ್ಚು ಉಂಟಾಗುವಂತೆ ಮಾಡಿತು. ವಿವಿಧ ಭಗೆಯ ಹಿಂಸೆ ನೀಡಿ ಮಲ್ಲಮ್ಮರಿಗೆ ಮನೆಯಿಂದ ಹೊರದಬ್ಬಿದರು.



ಕಾಡಿಗೆ ಹೋಗಿ ಗೋವುಗಳನ್ನು ಕಾಯುತ್ತ ಮಲ್ಲಿಕಾರ್ಜುನನ ಉಪಾಸನೆಯಲ್ಲಿ ಮಗ್ನಳಾಗುತ್ತಿದ್ದರು. ಇದನ್ನೂ ಸಹಿಸದ ನಗೆಯಣ್ಣಿಯರು ಮಲ್ಲಮ್ಮ ಪರಪುರುಷನ ಸಂಗದಲ್ಲಿದ್ದಾರೆ ಎಂದು ಆರೋಪ ಹೊರಿಸಿ, ಅವರನ್ನು ಕೊಲ್ಲಲು ಗಂಡ ಭರಮರಡ್ಡಿಗೆ ತಿಳಿಸುತ್ತಾರೆ. ಆದರೆ ಅವರನ್ನು ಕೊಲ್ಲಲು ಹೋದ ಭರಮರಡ್ಡಿ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆದು ತನ್ನ ಅಕ್ಕ-ತಂಗಿಯರು ಎಷ್ಟು ನೀಚರು ಎಂಬುವುದನ್ನು ತಿಳಿಯುತ್ತಾನೆ.

ಮಲ್ಲಮ್ಮ ಜೀವನವಿಡಿ ಕಷ್ಟಗಳನ್ನುಂಡರೂ ತನಗೆ ನೋವುಂಟು ಮಾಡಿದವರ ಹಿತವನ್ನು ಬಯಸಿದರು. ಮನೆಯ ಒಡತಿಯಾಗಿದ್ದರೂ ದಾಸಿಯಂತೆ ಸೇವೆ ಸಲ್ಲಿಸಿ ಎಂತಹ ಕಷ್ಟದಲ್ಲಿಯೂ ಶಿವನನ್ನು ಸ್ಮರಿಸುತ್ತಿದ್ದರು. ಆಯುಷ್ಯ ಮುಗಿಯುವ ಸಂದರ್ಭದಲ್ಲಿ ಮಲ್ಲಮ್ಮ ಮಲ್ಲಿಕಾರ್ಜುನನನ್ನು ಧ್ಯಾನಿಸುತ್ತಿರಬೇಕಾದರೆ, ಸ್ವಾಮಿಯು ದರ್ಶನವಿತ್ತು ಏನಾದರೂ ವರವನ್ನು ಕೇಳು ಎಂದಾಗ ಅವರು ತನ್ನ ಬಳಗಕ್ಕೆ ಎಂದಿಗೂ ಬಡತನ ಬರಬಾರದು ಎಂದು ಪ್ರಾರ್ಥಿಸಿದರು.

ಮಲ್ಲಿಕಾರ್ಜುನನಿಂದ ವರಪಡೆದ ಮಲ್ಲಮ್ಮ, ತನ್ನ ಬಳಗವನ್ನು ಕರೆದು ಸಂಪತ್ತಿಗೆ ಸೊಕ್ಕಬೇಡಿ, ದಾನಗುಣ ಬೆಳಸಿಕೊಳ್ಳಬೇಕು ಎಂದು ಹೇಳಿದರು ಎಂಬುದಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎನ್ನುತ್ತಾರೆ ದಾರ್ಶನಿಕರು.

ಮಹಾಶಿವಶರಣೆಯಾಗಿ ಬೆಳಗಿದ ಹೇಮರಡ್ಡಿ ಮಲ್ಲಮ್ಮ 12ನೇ ಶತಮಾನದ ಶಿವಶರಣೆಯರಂತೆ ವಚನಗಳನ್ನು ರಚಿಸಲಿಲ್ಲವಾದರೂ ಅವರ ಬದುಕೇ ಒಂದು ಬೃಹತ್ ವಚನ ಸಂಪುಟದಂತಿದೆ. ಅವರ ಜೀವನಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ.

Leave a Comment

Your email address will not be published. Required fields are marked *

error: Content is protected !!