ಕಬಡ್ಡಿ ಪಂದ್ಯಾವಳಿ, ಜಿಲ್ಲಾ ಮಟ್ಟದಲ್ಲಿ ಗೆಲುವು, ವಿಭಾಗ ಮಟ್ಟಕ್ಕೆ ಆಯ್ಕೆ, ವಿದ್ಯಾರ್ಥಿಗಳಿಗೆ ಹಣ, ಟೀ ಶರ್ಟ್ ವಿತರಿಸಿದ ಹನುಮಸಾಬ ನಾಯಿಕ….
ವರದಿ: ಸಂಗಮೇಶ ಹಿರೇಮಠ…
ಬೆಳಗಾವಿ.ಮುಗಳಖೋಡ: ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ಮೂಡಲಗಿಯಲ್ಲಿ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಗೆಲುವು ಸಾಧಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದಿ: 22 ರಂದು ಶುಕ್ರವಾರ ಮೂಡಲಗಿಯಲ್ಲಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಯಬಾಗ ಸೇರಿದಂತೆ ಹುಕ್ಕೇರಿ, ನಿಪ್ಪಾಣಿ, ಮೂಡಲಗಿ, ಗೋಕಾಕ, ಕಾಗವಾಡ, ಅಥಣಿ, ಚಿಕ್ಕೋಡಿ ಒಟ್ಟು ಎಂಟು ತಾಲೂಕಿನ ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಅದರಲ್ಲಿ ರಾಯಬಾಗ ತಾಲೂಕಿನಿಂದ ಮುಗಳಖೋಡ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮುಗಳಖೋಡ ಪಟ್ಟಣ ಹಾಗೂ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಗೆಲುವು ಸಾಧಿಸಿ ಪಟ್ಟಣಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಶ್ರೀಮಠಕ್ಕೆ ತೆರಳಿ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಕರ್ತೃ ಗದ್ದುಗೆಯ ದರ್ಶನ ಮಾಡಿ, ಆಶೀರ್ವಾದ ಪಡೆದು ನಂತರ ಗುಲಾಲ್ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಶಾಲೆಯ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಣೆ ಆಚರಿಸಿದರು.
ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಉಪಾಧ್ಯಕ್ಷರಾದ ಶ್ರೀ ಹನುಮಸಾಬ ನಾಯಿಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದಾಗ ಟಿ-ಶರ್ಟ್ ವಿತರಿಸಿದ್ದರು. ಈಗ ವಿಭಾಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ರೂ. 6 ಸಾವಿರ ಧನ ಸಹಾಯ ನೀಡಿ ಪ್ರೋತ್ಸಾಹಿಸಿದರು.
ಹಿರಿಯರು, ಕ್ರೀಡಾಭಿಮಾನಿಗಳು ಯುವಜನರು ಈ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಹಗಲು ರಾತ್ರಿ ಎನ್ನದೆ ತರಬೇತಿ ನೀಡಿ, ಧೈರ್ಯ ತುಂಬಿ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಲು ಕಾರಣಿಕರ್ತರಾದ ಶಾಲೆಯ ದೈಹಿಕ ಶಿಕ್ಷಕ ಶ್ರೀ ಬಸವರಾಜ ಬಂಡಿಗಣಿ ಅವರಿಗೆ ಸಿಹಿ ಹಂಚಿ ಪ್ರೋತ್ಸಾಹಿಸಿ ಮುಂದೆ ವಿಭಾಗ ಮಟ್ಟದಲ್ಲಿಯೂ ಗೆಲುವು ಸಾಧಿಸಿ ನಮ್ಮ ಮುಗಳಖೋಡ ಪಟ್ಟಣದ ಹೆಸರನ್ನು ರಾಜ್ಯ ಹಾಗೂ ದೇಶದುದ್ದಕ್ಕೂ ಪಸರಿಸುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಶೋಕ ಕೊಪ್ಪದ, ಮುಖ್ಯೋಪಾಧ್ಯಾಯ ವಿರುಪಾಕ್ಷಯ್ಯಾ ಕರಡಿ, ಶಿವಾನಂದ ಹಂಚಿನಾಳ, ದೈಹಿಕ ಶಿಕ್ಷಕ ಬಸವರಾಜ ಬಂಡಿಗಣಿ, ಮಾನಿಂಗ ಕೊಪ್ಪದ, ಎಸ್.ಎಸ್.ಕುಲಿಗೋಡ, ಬಿ.ವ್ಹಿ.ಹಟ್ಟಿಮನಿ, ಕ್ರೀಡಾಭಿಮಾನಿಗಳಾದ ಹನುಮಸಾಬ ನಾಯಿಕ, ಸಂಗಮೇಶ ಹಿರೇಮಠ, ಚಿದಾನಂದ ಮಠಪತಿ, ಬೀರಪ್ಪ ದುಂಡಗಿ, ಅಂಬರೀಶ್ ದೇಸಾಯಿ, ಮುತ್ತಯ್ಯಾ ಹಿರೇಮಠ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.