ಸಂಭ್ರಮದಿಂದ ಜರುಗಿದ ಶ್ರೀ ಸಾಯಿಬಾಬಾರ 11ನೇ ವಾರ್ಷಿಕೋತ್ಸವ;

Share the Post Now

ಪೂಜೆ ಸಲ್ಲಿಸಿದ ಬಸವರಾಜೇಂದ್ರ ಶ್ರೀ, ಶಾಸಕರ ದಂಪತಿ ಸತ್ಕಾರ, ಆರತಿ, ಕುಂಭ ಹೊತ್ತ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿ.

ವರದಿ: ಸಂಗಮೇಶ ಹಿರೇಮಠ.

ರಾಯಬಾಗ.ಮುಗಳಖೋಡ: ಮನುಷ್ಯ ಜನ್ಮವು ಶ್ರೇಷ್ಠವಾದದ್ದು ಮಾನವರಾಗಿ ಹುಟ್ಟಿದ ನಾವುಗಳು ಪುಣ್ಯದ ಕಾರ್ಯಗಳನ್ನು ಮಾಡಬೇಕು. ದಾನ, ಧರ್ಮ ಪರೋಪಕಾರವನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದು. ಮಹಾ ತಪಸ್ವಿ ಶಿರಡಿ ಸಾಯಿಬಾಬಾ, ಮುಗಳಖೋಡ ಸದ್ಗುರು ಯಲ್ಲಾಲಿಂಗ ಪ್ರಭುಗಳು, ಸದ್ಗುರು ಸಿದ್ಧರಾಮ ಶಿವಯೋಗಿಗಳನ್ನ ನೆನೆದು ಪೂಜಿಸುವುದರಿಂದ ನಮಗೆ ಬರುವ ಕಷ್ಟಗಳು ದೂರವಾಗುತ್ತವೆ. ಸದಾಕಾಲ ದೇವರ ನಾಮಸ್ಮರಣೆ ಮಾಡುವವರಿಗೆ ಕಷ್ಟಗಳು ದೂರವಾಗುತ್ತವೆಂದು ಅಚಲೇರಿ – ಜಿಡಗಾ ಮಠದ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.



ಪಟ್ಟಣದ ಚವಿವ ಸಂಘದ ಆವರಣದಲ್ಲಿ ಸ್ಥಾಪಿಸಿದ ಸಾಯಿಬಾಬಾರ ಮೂರ್ತಿ ಪ್ರತಿಷ್ಠಾಪನಾ 11ನೇ ವಾರ್ಷಿಕೋತ್ಸವ ಸಮಾರಂಭದ ಹಾಗೂ ಶಾಲಾ ಕಾಲೇಜುಗಳ ಸಾಂಸ್ಕೃತಿಕ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.



ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಡಾ. ಸಿ.ಬಿ.ಕುಲಿಗೋಡ ಮಾತನಾಡಿ ಕಳೆದ 11 ವರ್ಷಗಳ ಹಿಂದೆ ನಮ್ಮ ಸಂಸ್ಥೆಯ ಆವರಣದಲ್ಲಿ ಪೂಜ್ಯರ ಅಮೃತ ಹಸ್ತದಿಂದ ಶ್ರೀ ಸಾಯಿಬಾಬಾರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಪ್ರತಿ ವರ್ಷ ಬಾಬಾರ ಉತ್ಸವವನ್ನು ಮಾಡುವಾಗ ಧಾರಾಕಾರ ಸುರಿಯುವ ಮಳೆಯ ಮಧ್ಯದಲ್ಲಿಯೂ ಉತ್ಸವದ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಇದು ಪವಾಡವೇ ಸರಿ. ಬಾಬಾರನ್ನ ನಂಬಿದವರಿಗೆ ಧನ, ಸಂಪತ್ತು, ಪ್ರಾಪ್ತಿಯಾಗುವುದು, ಮನಸ್ಸಿಗೆ ನೆಮ್ಮದಿ ಸಿಗುವುದು ಎಂದು ಹೇಳಿದರು.



ಸೋಮವಾರ ಮುಂಜಾನೆ 10 ಗಂಟೆಗೆ ಶ್ರೀ ಸಾಯಿಬಾಬಾರ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ ಪಟ್ಟಣದ ಪರಪ್ಪ ಖೇತಗೌಡರ ಮನೆಯಿಂದ ಹೊರಟ ಬಾಬಾರ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ ಜಾಂಜಪತಾಕ, ಕರಡಿಮೇಳ, ಡೊಳ್ಳು ಕುಣಿತ, ಚೌಡಕಿ ಮೇಳ, ಕುದುರೆ ಕುಣಿತ, ವಿದ್ಯಾರ್ಥಿಗಳಿಂದ ರೂಪಕಗಳು ಸೇರಿದಂತೆ ವಿವಿಧ ಕಲಾ ಬಳಗದವರೊಂದಿಗೆ ಆರತಿ, ಕುಂಭವನ್ನು ಹೊತ್ತ ಮಹಿಳೆಯರು, ಹಾಗೂ ಪಟ್ಟಣದ ಗ್ರಾಮಸ್ಥರು, ಶಾಲಾ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕ ಮಹೇಂದ್ರ ತಮ್ಮಣ್ಣವರ, ಶ್ರೀಮತಿ ಸಚಿನಾ ಮಹೇಂದ್ರ ತಮ್ಮಣ್ಣವರ ದಂಪತಿಯು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಸತ್ಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಂಜಯ ಕುಲಿಗೋಡ, ಉಪಾಧ್ಯಕ್ಷ ಪ್ರಕಾಶ ಆದಪ್ಪಗೋಳ, ಗಿರಿಗೌಡ ಪಾಟೀಲ, ಪುರಸಭೆ ಸದಸ್ಯರಾದ ಮಹಾವೀರ ಕುರಾಡೆ, ಪರಗೌಡ ಖೇತಗೌಡರ, ಅಪ್ಪಾಸಾಬ ಗೌಲೆತ್ತಿನವರ, ಪಿಕೆಪಿಎಸ್ ನ ನೂತನ ನಿರ್ದೇಶಕರಾದ ರಾಮಚಂದ್ರ ಕುರಾಡೆ, ಹನುಮಸಾಬ್ ನಾಯಿಕ, ಶಿವಪುತ್ರ ಯಡವಣ್ಣವರ, ಯಮನಪ್ಪ ಬಾಬಣ್ಣವರ, ಪುರಸಭೆಯ ಮಾಜಿ ಸದಸ್ಯ ಗೌಡಪ್ಪ ಖೇತಗೌಡರ, ಸಂಸ್ಥೆಯ ಕಾರ್ಯದರ್ಶಿ ಪರಪ್ಪ ಖೇತಗೌಡರ, ಶ್ರೀಶೈಲ ಅಂಗಡಿ, ಡಾ.ಎಂ.ಕೆ. ಬೀಳಗಿ, ಪ್ರಕಾಶ ಕಂಬಾರ, ಎಸ್.ಎಸ್. ಮಧಾಳೆ, ಪಟ್ಟಣದ ಗುರು- ಹಿರಿಯರು, ಸಂಸ್ಥೆಯ ಅಂಗ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಡಾ. ಮಧುಸೂದನ್ ಬೀಳಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪನ್ಯಾಸಕ ಜೆ.ಆರ್, ಮೊಗವೀರ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ಎಸ್.ಎಸ್. ಮಧಾಳೆ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!