ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಿದ್ಧಶ್ರೀ ಸಂಸ್ಥೆ ಆರಂಭ.

Share the Post Now

ಬೆಳಗಾವಿ, ರಾಯಬಾಗ


ಕಷ್ಟದಲ್ಲಿರುವ ಬಡವರಿಗೆ ಸಹಾಯ ನೀಡಲೆಂದೇ ಸಿದ್ಧಶ್ರೀ ಸಂಸ್ಥೆಯ ಸ್ಥಾಪನೆ: ಡಾ. ಮುರುಘರಾಜೇಂದ್ರ ಶ್ರೀ.


ವರದಿ: ಸಂಗಮೇಶ ಹಿರೇಮಠ ಮುಗಳಖೋಡ.

ಮುಗಳಖೋಡ: ಗ್ರಾಮೀಣ ಭಾಗದ ಬಡವರಿಗೆ, ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹಾಗೂ ಕಷ್ಟದಲ್ಲಿರುವ ಜನಸಾಮಾನ್ಯರಿಗೆ ಸಹಾಯವಾಗಲೆಂದು ದಿನದ 24 ಗಂಟೆ ಕಾರ್ಯನಿರ್ವಹಿಸಿ ಜನರಿಗೆ ಸಹಾಯ ನೀಡಲೆಂದೇ ಈ ಸಿದ್ಧಶ್ರೀ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ ಎಂದು ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಶ್ರೀ ಹೇಳಿದರು.

ಅವರು ಮುಗಳಖೋಡ ಪಟ್ಟಣದ ಶ್ರೀಮಠದ ಆವರಣದಲ್ಲಿ ಹಮ್ಮಿಕೊಂಡ ಸಿದ್ಧಶ್ರೀ ಸೌಹಾರ್ದ ಸಹಕಾರಿ ನಿಯಮಿತ ಮುಗಳಖೋಡ ಶಾಖೆಯ ಕಾರ್ಯಾರಂಭ ಸಮಾರಂಭ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಸಂಸ್ಥೆಯ ಬೆಳವಣಿಗೆ ನಮ್ಮ ಉದ್ದೇಶ ಅಲ್ಲ, ಸಂಸ್ಥೆಯ ಸಹಾಯದಿಂದ ಜನಸಾಮಾನ್ಯರ ಬೆಳವಣಿಗೆ ನಮ್ಮ ಮುಖ್ಯ ಉದ್ದೇಶ.
ಬೇರೆ ಬೇರೆ ಬ್ಯಾಂಕುಗಳು ಬೆಳಿಗ್ಗೆ 10 ರಿಂದ ಸಾಯಂಕಾಲ 5ರ ವರೆಗೆ ಕಾರ್ಯ ಪ್ರವೃತ್ತಿಯಲ್ಲಿದ್ದರೆ, ನಮ್ಮ ಸಿದ್ದಶ್ರೀ ಸೌಹಾರ್ದ ಸಂಸ್ಥೆ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಿ, ಮತ್ತು ಅಂಧರು, ಅಂಗವಿಕಲರು, ವಯೋವೃದ್ಧರು, ಸೇರಿದಂತೆ ಬ್ಯಾಂಕಿಗೆ ಬರಲು ಆಗದೇ ಇರುವ ಜನಸಾಮಾನ್ಯರಿಗೆ ಮನೆ ಮನೆಗೆ ತೆರಳಿ ಸೇವೆ ಸಲ್ಲಿಸಲು ಈ ಸಂಸ್ಥೆ ಮುಂದಾಗಿದೆ. ವ್ಯವಸ್ಥೆ ಸರಿ ಇದ್ದರೆ ಮಾತ್ರ ಸಂಸ್ಥೆಯೊಂದಿಗೆ ಸಂಬಂಧ ಕಟ್ಟಿ. ಸೇವೆ ನಿಮ್ಮದು ಸಹಕಾರ ನಮ್ಮದು ಎಲ್ಲರೂ ಸಹಕರಿಸಿ ಈ ಬ್ಯಾಂಕಿನ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರು ಬೆಳವಣಿಗೆ ಹೊಂದಬೇಕೆಂಬ ಆಶೆ ನನ್ನದು ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಚಿನ್ಮಯಗಿರಿ ಶ್ರೀ ವೀರಮಹಾಂತ ಶಿವಾಚಾರ್ಯರು ಮಾತನಾಡಿ ಧಾರ್ಮಿಕ ಕ್ಷೇತ್ರದಲ್ಲಿ ಬಹಳ ನಿಷ್ಠೆಯಿಂದ ಹೊರಹೊಮ್ಮುತ್ತಿರುವ ಈ ಸಿದ್ಧಶ್ರೀ ಸಂಸ್ಥೆ ದೇಶದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಬೆಳೆಯಲಿ ಎಂದು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಕುಡಚಿ ಶಾಸಕ ಪಿ ರಾಜೀವ್ ಮಾತನಾಡಿ ಹಣ ಎಂಬ ದೇಹದ ನರಗಳ ಹೃದಯ ಭಾಗವೇ ಈ ಸೌಹಾರ್ದ ಸಂಸ್ಥೆಗಳು. ಮುರುಘರಾಜೇಂದ್ರ ಅಪ್ಪಾಜಿ ಹುಟ್ಟು ಹಾಕಿದ ಈ ಸಂಸ್ಥೆ ಬಹಳ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ನಂತರ ಶಾಸಕರಾದ ದುರ್ಯೋಧನ ಐಹೊಳೆ, ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸೌದಿ, ಮಹಾದೇವಪ್ಪ ಯಾದವಾಡ ಹಾಗೂ ಕರ್ನಾಟಕ ಸೌಹಾರ್ದ ಸಂಘಗಳ ನಿರ್ದೇಶಕ ಜಗದೀಶ್ ಕವಟಗಿಮಠ ಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದರು.

ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಚಿನ್ಮಯಗಿರಿ ವೀರಮಹಾಂತ ಶಿವಾಚಾರ್ಯರ ನೇತೃತ್ವದಲ್ಲಿ ಸಹಕಾರಿ ಲಾಂಛನ ಬಿಡುಗಡೆ, ಗ್ರಾಹಕರಿಗೆ ಪಾಸ್ ಪುಸ್ತಕ ವಿತರಣೆ, ಮುದ್ದತ ಠೇವು ಕಾರ್ಡ್ ವಿತರಣೆ, ಕಾರ್ಯಾಲಯದ ಕ್ಯಾಲೆಂಡರ್ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮವನ್ನು ಸೋಮು ಹೊರಟ್ಟಿ ನಿರೂಪಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸೌಹಾರ್ದ ಸಂಘಗಳ ನಿರ್ದೇಶಕಿ ಶ್ರೀಮತಿ ಶೈಲಜಾ ತಪಲಿ, ಪ್ರಧಾನ ವ್ಯವಸ್ಥಾಪಕ ಶರಣಗೌಡ ಪಾಟೀಲ್, ಸುಶೀಲ್ ಕುಮಾರ್ ಬೆಳವಿ ಹಾಗೂ ಹಾರೂಗೇರಿ ಎಸ್ ಬಿ ಐ ಶಾಖಾ ವ್ಯವಸ್ಥಾಪಕ, ಐಸಿಐಸಿಐ ಬ್ಯಾಂಕ್ ಶಾಕಾ ವ್ಯವಸ್ಥಾಪಕ, ಹಾರೂಗೇರಿ ಎಸ್.ಎಂ.ಎನ್ ಸಂಸ್ಥೆಯ ಅಧ್ಯಕ್ಷ ವಿವೇಕ ನಾರಗೊಂಡ, ಸಿದ್ಧಶ್ರೀ ಸೌಹಾರ್ದ ಪ್ರಧಾನ ಕಛೇರಿಯ ಅಧ್ಯಕ್ಷ ಸಿ.ಎ. ನಾಡಗೌಡರ, ಮುಗಳಖೋಡ ಶಾಖೆಯ ಮುಖ್ಯ ವ್ಯವಸ್ಥಾಪಕ ಕಲ್ಲುರಾಜ್ ನಿಡೋಣಿ, ಮಾರುತಿ ಗೋಕಾಕ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ, ಸುರೇಶ ಜಂಬಗಿ, ಗೌಡಪ್ಪ ಖೇತಗೌಡರ, ಮಹಾಂತೇಶ ಯರಡತ್ತಿ ಮತ್ತು ಪುರಸಭೆ ಸರ್ವ ಸದಸ್ಯರು ಪಟ್ಟಣದ ಹಿರಿಯರು ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ಸಿಬ್ಬಂದಿಯವರು ಸೇರಿದಂತೆ ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

error: Content is protected !!