ಇವತ್ತಿನ ಸ್ಪರ್ಧಾತ್ಮಕ ವಿಷಯಗಳಲ್ಲಿ ಸಮಾಜಶಾಸ್ತ್ರವು ಬಹುಮುಖ್ಯವಾದ ಪಾತ್ರವಹಿಸಿದೆ.
ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ: ಸಮಾಜಶಾಸ್ತ್ರದ ಬೆಳವಣಿಗೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಸಮಾಜಶಾಸ್ತ್ರದ ಆಯ್ಕೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿತವಾಗಲಿದೆ. ಮೌಲ್ಯಮಾಪನದಲ್ಲಿ ಪಠ್ಯಕ್ರಮ ಹಾಗೂ ಪ್ರಶ್ನೆಗೆ ಅನುಗುಣವಾಗಿ ಉತ್ತರ ಪತ್ರಿಕೆಯನ್ನು ಪರಿಶೀಲಿಸಿ ಅಲ್ಲಿ ಕಂಡುಬರುವ ದೋಷಗಳನ್ನು ತಮ್ಮ ತಮ್ಮ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಅವರಲ್ಲಿ ಹೆಚ್ಚಿನ ವಿಷಯ ಬಿತ್ತನೆ ಮಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಾಧ್ಯಾಪಕರು ಮುಂದಾಗಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುಮಂತ ಎಸ್. ಹಿರೇಮಠ ಹೇಳಿದರು.
ಅವರು ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಪದವಿ ಕಾಲೇಜಿನ ಅಧ್ಯಾಪಕರ ಸಂಘದಿಂದ ಹಮ್ಮಿಕೊಂಡ ಸಮಾಜಶಾಸ್ತ್ರದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಸರ್ವರಿಗೂ ಸಮಬಾಳ್ವೆ ಎಂಬಂತೆ ಸಮಾಜಶಾಸ್ತ್ರವು ಬಡವ-ಶ್ರೀಮಂತ, ಮೇಲು-ಕೀಳು, ಹೆಚ್ಚು-ಕಡಿಮೆ ಎಂಬ ಭಾವನೆಯನ್ನು ತೊರೆದು ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಕುರಿತು ಸಮಾನವಾಗಿ ಅಧ್ಯಯನ ಮಾಡುವ ಶಾಸ್ತ್ರ ಇದಾಗಿದೆ.
ವಿಷಯದ ಕುರಿತು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳು ಇದ್ದರೆ, ವಿಶ್ವವಿದ್ಯಾಲಯಕ್ಕೆ ಲಿಖಿತವಾಗಿ ಪತ್ರವನ್ನು ಕೊಟ್ಟರೆ ಆ ಸಮಸ್ಯೆಯನ್ನು ಪರಿಹರಿಸುವಲ್ಲಿ ನಾವು ಒಗ್ಗೂಡುತ್ತೇವೆ ಎಂದರು.
ನಂತರ ಮಾತನಾಡಿದ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಷಯದ ಅಧ್ಯಾಪಕ ಸಂಘದ ಅಧ್ಯಕ್ಷ ಡಾ. ಯಲ್ಲಪ್ಪ ನಾಯಕ್ ಮಾತನಾಡಿ 2017ರಲ್ಲಿ ಅಧಿಕೃತವಾಗಿ ಸ್ಥಾಪನೆಗೊಂಡ ಈ ಸಂಘದ ಉದ್ದೇಶ ಸಮಾಜಶಾಸ್ತ್ರ ಅಧ್ಯಾಪಕರನ್ನು ಒಂದುಗೂಡಿಸಿ ವಿದ್ಯಾರ್ಥಿಗಳಿಗೆ ಹೊಸ ಹೊಸ ವಿಷಯಗಳನ್ನು ಕುರಿತು ಗಮನಸೆಳೆದು ಹೆಚ್ಚಿನ ವಿಷಯ ಸಂಗ್ರಹಿಸುವಂತೆ ಮಾಡುವುದಾಗಿದೆ ಎಂದು ಸಂಘದಿಂದ ಸಿಗುವ ಉಪಯೋಗಗಳನ್ನು ತಿಳಿಸಿಕೊಟ್ಟರು.
ಸಮಾಜಶಾಸ್ತ್ರ ವಿಭಾಗದ ಮೌಲ್ಯಮಾಪನ ಕಾರ್ಯದ ಅಧ್ಯಕ್ಷರಾದ ಬಸವರಾಜ್ ದೇಸಾಯಿ ಮಾತನಾಡಿ ಪದವಿ ಪಠ್ಯಕ್ರಮದಲ್ಲಿ ಇರುವ ಗೊಂದಲಗಳನ್ನು ಸರಿಪಡಿಸಿಕೊಂಡು ಸಮಾಜಶಾಸ್ತ್ರವೆಂಬ ಕುಟುಂಬವನ್ನು ಬೆಳೆಸುವಲ್ಲಿ ಈ ಸಂಘ ಯಶಸ್ವಿಯಾಗಲಿ ಎಂದು ಶುಭ ಹಾರಿಸಿದರು.
ಮೌಲ್ಯಮಾಪನ ಕೇಂದ್ರದ ಮುಖ್ಯ ಸಂಯೋಜಕರಾದ ಡಾ. ಅರ್ಜುನ್ ಜಂಬಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಗಾರ ಉದ್ದೇಶಿಸಿ ಮಾತನಾಡಿದರು.
ಡಾ. ಎಂ. ಸಿ. ನಿಂಗಶೆಟ್ಟಿ ಸೇರಿದಂತೆ ಕಾರ್ಯಗಾರದಲ್ಲಿ ಭಾಗಿಯಾದ ಎಲ್ಲ ಪ್ರಾಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾದ ಡಾ. ಸುಮಂತ ಎಸ್. ಹಿರೇಮಠ ಅವರೊಂದಿಗೆ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಪದವಿ ಸಮಾಜಶಾಸ್ತ್ರ ವಿಷಯದ ಪಠ್ಯಕ್ರಮ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜಶಾಸ್ತ್ರ ವಿಷಯಗಳಲ್ಲಿ ಕೆ ಸೆಟ್, ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಪಿಎಚಡಿ ಪದವಿ ಗಿಟ್ಟಿಸಿಕೊಂಡ ಪ್ರಾಧ್ಯಾಪಕರನ್ನು ಗುರುತಿಸಿ ಸತ್ಕರಿಸಿ, ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಎಚ್.ಆರ್. ಭಾಗ್ಯವತಿ ನಿರೂಪಿಸಿ, ಶ್ರೀ ಜಗದೀಶ್ ಸಾತಿಹಾಳ್ ಸ್ವಾಗತಿಸಿ, ಎಸ್.ಎಸ್. ಬುಗುಚಿ ವಂದಿಸಿದರು.
ಈ ಸಂದರ್ಭದಲ್ಲಿ ಸಮಾಜಶಾಸ್ತ್ರ ವಿಷಯದ ಪದವಿ ಕಾಲೇಜಿನ ಆಧ್ಯಾಪಕರ ಸಂಘದ ಎಲ್ಲ ಪದಾಧಿಕಾರಿಗಳು ಸದಸ್ಯರು ಕಾರ್ಯಗಾರದ ಕಾರ್ಯಕರ್ತರು ಹಾಗೂ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಯ ಎಲ್ಲ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಷಯದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.