ಅಸಂಖ್ಯಾತ ಭಕ್ತರ ಆರಾಧನಾ ಸ್ಥಳ ಮಾಂಗೂರಿನ ಶ್ರೀ ಕ್ಷೇತ್ರ ಕಾಲಭೈರವನಾಥ

Share the Post Now

  ಭಕ್ತರ ಕೋರಿಕೆಯನ್ನು ನೆರವೇರಿಸುವ ಮಂಗೂರಿನ ಶ್ರೀ ಕಾಲಭೈರವನಾಥ ದೇವರ ಕೀರ್ತಿ ಎಲ್ಲೆಡೆ ಹಬ್ಬಿದೆ. ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಿಂದ ಬರುವ ಅಸಂಖ್ಯಾತ ಭಕ್ತರ ಆರಾಧ್ಯದೈವನಾಗಿರುವ ಶ್ರೀ ಕಾಲಭೈರವನಾಥ ದೇವರ ಜಾತ್ರೆಯು ಶನಿವಾರದಿಂದ ಆರಂಭವಾಗಿದೆ. ಏಪ್ರಿಲ್ ೮ರಿಂದ ಬುಧವಾರ 12ನೇ ತಾರೀಖಿನವರೆಗೆ ಈ ಜಾತ್ರೆಯು ನಡೆಯಲಿದೆ‌

 ಮಾಂಗೂರಿನ ಆರಾಧ್ಯದೈವನಾಗಿರುವ ಕಾಲಭೈರವನಾಥ ದೇವಾಲಯವು ಅನೇಕ ಭಕ್ತರ ಆರಾಧನಾ ಸ್ಥಳವಾಗಿದೆ. ಈ ದೇವಾಲಯದಲ್ಲಿ ಭೈರವನಾಥನನ್ನು ನೋಡಲು ಯಾವಾಗಲೂ ಗಮನಾರ್ಹ ಸಂಖ್ಯೆಯಲ್ಲಿ ಅಪಾರ  ಭಕ್ತರು ಸೇರುತ್ತಾರೆ. ಮಾಂಗೂರು ದೂಧಗಂಗಾ ನದಿಯ ತಟದಲ್ಲಿ ಬರುವ ಗ್ರಾಮವಾಗಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವ ನಿಪ್ಪಾಣಿ ತಾಲೂಕಿಗೆ ಸೇರಿದ ಈ ಗ್ರಾಮವು ಶ್ರೀ.ಭೈರವನಾಥನ ಪಾದ ಸ್ಪರ್ಶದಿಂದ ಪುನೀತವಾಗಿದೆ. ಇಲ್ಲಿನ ಗ್ರಾಮಸ್ಥರಿಗೆ ಈ ದೇವರಲ್ಲಿ ಅಪಾರವಾದ ಶ್ರದ್ಧೆ ಮತ್ತು ನಂಬಿಕೆ ಇದೆ. ಈ ದೇವರಲ್ಲಿ ನಂಬಿಕೆಯಿಟ್ಟು ಯಾವುದೇ ಕೆಲಸ ಮಾಡಿದರೆ ನೆರವೇರುತ್ತದೆ ಎಂಬುದು ಭಕ್ತರ ಅನುಭವ. ಎರಡು ಮೂರ್ತಿಗಳಿಂದ ಒಟ್ಟಾಗಿ ಕಾಲಭೈರವನ ವಿಗ್ರಹವು ಚತುರ್ಭುಜವಾಗಿದೆ ಮತ್ತು ಬಲಭೈರವನ ವಿಗ್ರಹವು ತ್ರಿಕೋನಾಕಾರವಾಗಿದೆ, ಕಾಲಭೈರವನ ಬಲಗೈ ಡಮರು ಮತ್ತು ಕೆಳಗಿನ ಕೈಯಲ್ಲಿ ಖಡ್ಗವನ್ನು ಹಿಡಿದಿದ್ದರೆ, ಅವನ ಎಡಗೈಯಲ್ಲಿ ಅವನು ತ್ರಿಶೂಲವನ್ನು ಮತ್ತು ಕೆಳಗಿನ ಕೈಯಲ್ಲಿ ಪಾನಪತ್ರವನ್ನು ಹಿಡಿದಿದ್ದಾನೆ. ಬಲಭೈರವನ ವಿಗ್ರಹವು ತ್ರಿಕೋನಾಕಾರವಾಗಿದೆಯಲ್ಲದೇ ಗುರಾಣಿ ಮತ್ತು ಕತ್ತಿಯನ್ನು ಬಲಭೈರವನು ಹಿಡಿದಿದ್ದಾನೆ.

         ದೂಧಗಂಗಾ – ವೇದಗಂಗಾ ನದಿಯ ಸಂಗಮದಲ್ಲಿರುವ ಈ ಪ್ರದೇಶವು ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾಗಿದೆ ಎಂದು ಹಿರಿಯರು ಈ ಗ್ರಾಮ ದೇವರ ಬಗ್ಗೆ ಜಾನಪದ ಕಥೆಯನ್ನು ಕಟ್ಟಿ ಹೇಳುತ್ತಾರೆ, ಕ್ರೂರ ರಾಕ್ಷಸನ ಉಪಟಳ ಹೆಚ್ಚಾದಾಗ ಭೈರವನಾಥನು ಆತನನ್ನು ಕೊಂದು ಈ ಪ್ರದೇಶದ ಜನರನ್ನು ಮುಕ್ತಗೊಳಿಸಿದನು. ಇಂದಿಗೂ ಮಾಂಗೂರಿನಲ್ಲಿ ಭೈರವನಾಥನು ಜಾಗೃತ ದೈವವಾಗಿ ತಮ್ಮನ್ನು ಕಾಯುತ್ತಿದ್ದಾನೆಂಬುದು ಇಲ್ಲಿಯ ಜನರ ನಂಬಿಕೆ. ಪ್ರತಿವರ್ಷ ಯುಗಾದಿಯ ನಂತರದ ಮೂರನೇ ಭಾನುವಾರ ಮತ್ತು ಜ್ಯೋತಿಬಾ ಜಾತ್ರೆಯ ಬಳಿಕದ ಭಾನುವಾರದಂದು ಈ ಜಾತ್ರೆಯು ನಡೆಯುತ್ತದೆ.

     ರವಿವಾರ ಜಾತ್ರೆಯ ಮುಖ್ಯ ದಿನವಾಗಿದ್ದು, ಈ ದಿನ ಪ್ರಾಣ ಪ್ರತಿಷ್ಠಾಪನೆ, ಅಭಿಷೇಕ ಹಾಗೂ ಶ್ರೀಗಳ ಪಲ್ಲಕ್ಕಿಯ ಮೆರವಣಿಗೆಯು ಶಾಸನ ಕೋಲಿನ ಜೊತೆಗೆ ಹೊರಡುತ್ತದೆ. ಭಕ್ತರು ಗುಲಾಲ್ ನ್ನು ಹಾರಿಸುತ್ತಾ, ಭೈರೋಬಾ ಚ್ಯಾ ನಾವಾನ್ ಚಾಂಗಭಲಾ ಎಂದು ಘೋಷಣೆ ಕೂಗುತ್ತಾರೆ. ಇದು ಇಡೀ ಪ್ರದೇಶದಾದ್ಯಂತ ಮೊಳಗುತ್ತದೆ.

       ಯುಗಾದಿಯ ದಿನ ಕುರಾಡೆ ಮತ್ತು ಇಂಗ್ರೊಳೆಯವರ ಶಾಸನಕೋಲುಗಳನ್ನು ಪೂಜೆ ಮಾಡಿ ಭೈರವನಾಥ ದೇವಸ್ಥಾನದ ಮುಂದುಗಡೆ ಈ ಶಾಸನಕೋಲುಗಳನ್ನು ಕಟ್ಟಿ ಯುಗಾದಿಯಿಂದ ಜಾತ್ರೆಯವರೆಗೆ ಪ್ರತಿ ರವಿವಾರ ರಾತ್ರಿ ಶಾಸನಕೋಲುಗಳ ಭೈರವನಾಥ ದೇವಾಲಯದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಜಾತ್ರೆಯ ದಿನ ಕರವೀರ ತಾಲೂಕಿನ ನಂದಗಾವದ ಪಾಂಡುರಂಗ ಮಗದುಮ ಅವರ ಶಾಸನಕೋಲು ಇಲ್ಲಿಗೆ ಆಗಮಿಸುತ್ತದೆ. ಈ ಮೂರು ಶಾಸನಕೋಲುಗಳು ಪೂಜ್ಯನಿಯವಾಗಿವೆ. ವಿಶೇಷವೆಂದರೆ ಬೆಳಗಾವಿ ಜಿಲ್ಲೆಯ ಏಕೈಕ ಶ್ರೀಗಳ ಪಲ್ಲಕ್ಕಿ ಹಾಗೂ ಶಾಸನಕೋಲುಗಳ ಮೆರವಣಿಗೆ ಇರುತ್ತದೆ. ಅದನ್ನು ನೋಡಲು ಜನಜಂಗುಳಿಯೇ ನೆರೆದಿರುತ್ತದೆ. ಇವಷ್ಟೇ ಅಲ್ಲದೇ ಆರ್ಕೆಸ್ಟ್ರಾ, ತಮಾಶಾ ಹಾಗೂ ಕುಸ್ತಿಯಂತಹ ಕಾರ್ಯಗಳನ್ನು ಆಯೋಜಿಸಲಾಗಿರುತ್ತದೆ. ಭವ್ಯವಾದ ಶಾಮಿಯಾನ ಹಾಗೂ ವಿದ್ಯುತ್ ಅಲಂಕಾರದಿಂದ ಮಂದಿರವು ಮಿಂಚುತ್ತಿರುತ್ತದೆ. ಇಡೀ ಪ್ರದೇಶವು ಭಕ್ತಿಮಯ ಭಾವದಿಂದ ತುಂಬಿರುತ್ತದೆ.

   ಮಾಂಗೂರಿನಲ್ಲಿ ಎಲ್ಲ ಸಮುದಾಯದ ಜನರು ಭಾವೈಕ್ಯಯಿಂದ ಇದ್ದು, ಹಬ್ಬ, ಹರಿದಿನ, ಜಾತ್ರೆ-ಉತ್ಸವಗಳನ್ನು ಒಗ್ಗೂಡಿ ನೆರವೇರಿಸುತ್ತಾರೆ. ಇದು ಗ್ರಾಮಸ್ಥರಲ್ಲಿ ಕಾಳಭೈರವನ ಕುರಿತು ಇರುವ ಶ್ರದ್ಧೆಯು ಎದ್ದು ಕಾಣುತ್ತದೆ. ಇಂತಹ ಜಾತ್ರೆಗೆ ಆಗುಸುತ್ತಿರುವ ಸಕಲ ಭಕ್ತಾದಿಗಳಿಗೆ ಆದರದ ಸ್ವಾಗತ.

Leave a Comment

Your email address will not be published. Required fields are marked *

error: Content is protected !!