ವರದಿ:ಡಾ. ಜಯವೀರ ಎ. ಕೆ.*
*ಖೇಮಲಾಪುರ*
ಬೆಳಗಾವಿ.
ರಾಯಬಾಗ: ಕಳೆದ ಬಾರಿ ಎಸ್ ಎಸ್ ಪಿ ಯಲ್ಲಿ ಈಗಾಗಲೇ ಖಾತೆ ಸೃಜಿಸಿರುವ ಮೆಟ್ರಿಕ್ ಪೂರ್ವದ 9 ನೇ ತರಗತಿಯ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳು ಈ ಬಾರಿ ಎಸ್ ಎಸ್ ಪಿ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಲು ಸೇವಾ ಕೇಂದ್ರಗಳಿಗೆ ಹೋದರೆ ಯೂಸರ್ ಹೆಸರು ಹಾಗೂ ಪಾಸವರ್ಡ್ ಹಾಕಿದರೆ ಲಾಗಿನ್ ಆಗುತ್ತಿದ್ದರೂ ಹೋಮ್ ಪೇಜ್ ದಲ್ಲಿ ಕ್ಲಿಕ್ ಮಾಡಿದರೆ ನೀವು ನವೀಕರಣ ವಿದ್ಯಾರ್ಥಿ ಆಗಿದ್ದೀರಿ. ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಲು ಅವಶ್ಯಕತೆ ಇಲ್ಲ. ಪರಿಶೀಲನೆ ಹಾಗೂ ಮಂಜೂರಾತಿಗಾಗಿ ನಿಮ್ಮ ಅರ್ಜಿಯನ್ನು ಇಲಾಖೆಗೆ ಕಳಿಸಲಾಗಿದೆ ಎಂದು ಇಂಗ್ಲಿಷ್ ದಲ್ಲಿ ಹೇಳಲಾಗಿದೆ.
ಈ ತಾಂತ್ರಿಕ ಸಮಸ್ಯೆಯ ಕುರಿತು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಗೆ ಸಂಪರ್ಕಿಸಿದರೆ ಇನ್ನೊಂದೆರಡು ದಿನ ಹಾಗೂ ಇನ್ನೊಂದು 4 ದಿನ ನೋಡೋಣ ತಡೆಯಿರಿ ಎಂದು ಸಮಾಧಾನಕ್ಕಾಗಿ ಅವರ ಪ್ರತಿಕ್ರಿಯೆ ಮಾತುಗಳನ್ನು ಕೇಳಿಯೇ ತಿಂಗಳು ಗತಿಸಿ ಹೋಗುತ್ತಿದೆ. ಅವರಿಗೂ ಈ ತಾಂತ್ರಿಕ ಸಮಸ್ಯೆಯ ಬಗ್ಗೆ ವ್ಯಾಪಕ ಮಾಹಿತಿಯ ಕೊರತೆ ಇದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಲ್ಲದೆ ಮತ್ತೊಂದೆಡೆ ಸಮಾಜ ಕಲ್ಯಾಣ ಇಲಾಖೆಯ ನಿಗಧಿಪಡಿಸಿದ ಸಹಾಯವಾಣಿಗೆ ಹಲವು ಬಾರಿ ಕರೆ ಮಾಡಿ ವಿಚಾರಣೆಗಾಗಿ ಪ್ರಯತ್ನಿಸಿದರೂ ನಿಮ್ಮ ಮನವಿಯನ್ನು ಆಲಿಸುವ ನಮ್ಮ ಪ್ರತಿನಿಧಿಗಳು ಸದ್ಯ ಬೇರೆ ಕರೆಯಲ್ಲಿ ನಿರತರಾಗಿದ್ದಾರೆ ನಿರೀಕ್ಷಿಸಿರಿ ಎಂಬ ಸಿದ್ದ ಉತ್ತರ ಬರುತ್ತದೆ. ಅದೇನೇ ಇದ್ದರೂ ಗ್ರಾಮ ಒನ್ ದಲ್ಲಿ ವಿದ್ಯಾರ್ಥಿಗಳಿಗೆ ಎಸ್ ಎಸ್ ಪಿ ಅರ್ಜಿ ಹಾಕಿದ ಸ್ವೀಕೃತಿಯು ವಿದ್ಯಾರ್ಥಿಯ ಹೆಬ್ಬಟ್ಟು ಗುರುತು ಸ್ವೀಕರಿಸಿದರೆ ಮಾತ್ರ ಎಸ್ ಎಸ್ ಪಿ ಅರ್ಜಿ ಪ್ರಕ್ರಿಯೆಯು ಯಶಸ್ವಿಯಾಗುತ್ತದೆ.
ಪ್ರಸ್ತುತ ಎದುರಾದ ಈ ತಾಂತ್ರಿಕ ಸಮಸ್ಯೆಯಿಂದ 9 ನೇ ತರಗತಿಯ ರಾಜ್ಯದ ಎಲ್ಲ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳ ಮನದಲ್ಲಿ ಈಗ ಗೊಂದಲದ ಮನೆ ಮಾಡಿದ್ದಂತೂ ವಾಸ್ತವ ಸತ್ಯ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ತಾಂತ್ರಿಕ ಸಮಸ್ಯೆಯ ಸೂಕ್ಷ್ಮತೆಯನ್ನು ಗಂಭೀರವಾಗಿ ಪರಿಗಣಿಸಿ ಇನ್ನಾದರೂ ವಿದ್ಯಾರ್ಥಿಗಳ ಹಾಗೂ ಪಾಲಕರ ಮನದಲ್ಲಿ ಮೂಡಿದ ಈ ಆತಂಕ ನಿವಾರಣೆಗೆ ಆದ್ಯ ಗಮನ ವಹಿಸಬೇಕಾದ ಅಗತ್ಯವಿದೆ.