ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ವಿದ್ಯಾರ್ಥಿಗಳು ಇಂದು ಮೋಜು ಮಸ್ತಿಯಲ್ಲಿ ಹೆಚ್ಚು ಕಾಲ ಹರಣ ಮಾಡದೇ ಅದ್ವಿತೀಯ ಸಾಧನೆ ಮಾಡಿ ಗುರು ಹಿರಿಯರ ಹಾಗೂ ತಂದೆ ತಾಯಿಯರ ನಿರೀಕ್ಷೆಗೆ. ಪೂರಕವಾಗಿ ಕ್ರಿಯಾಶೀಲರಾಗಿ ಸ್ಪಂದಿಸುವ ಮೂಲಕ ಈ ನಾಡಿಗೆ ಹಾಗೂ ರಾಷ್ಟ್ರಕ್ಕೆ ಒಳ್ಳೆಯ ನಾಗರೀಕರಾಗಿ ರೂಪುಗೊಳ್ಳಬೇಕು. ಸಾಧಕರಾಗಲು ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ದಾರಿಯಲ್ಲಿ ಸಾಗಬೇಕು ಎಂದು ಶಿರಗುಪ್ಪಿಯ ಪ್ರತಿಷ್ಠಿತ ಕೆ.ಎಲ್. ಇ. ವಾಣಿಜ್ಯ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರು, ಸಾಹಿತಿ ಖೇಮಲಾಪುರದ ಡಾ.ಜಯವೀರ ಎ.ಕೆ.ಅಭಿಮತ ವ್ಯಕ್ತಪಡಿಸಿದರು.
ಅವರು ಭಾನುವಾರ ದಿನಾಂಕ 28 ರಂದು ತಾಲ್ಲೂಕಿನ ಹಾರೂಗೇರಿ ಪಟ್ಟಣ ಸಮೀಪದ ಹಾರೂಗೇರಿ ಕ್ರಾಸ್ ದಲ್ಲಿ ಶ್ರೀ ಅರಣ್ಯ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಜ್ಞಾನಸಾಗರ ನವೋದಯ ಹಾಗೂ ಸೈನಿಕ ತರಬೇತಿ ಶಾಲೆಯ ಪ್ರಸಕ್ತ ಸಾಲಿನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ವಿದ್ಯಾರ್ಥಿಗಳ ಕೈಯಲ್ಲಿ ಇಂದು ಮೊಬೈಲ್ ಇರದೇ ಪುಸ್ತಕಗಳು ಮಾತ್ರ ರಾರಾಜಿಸುತ್ತಿರಬೇಕು.ಸಾಧಕನಾಗಲು ನಾವು ಅದ್ದೂರಿ ಜೀವನ ತ್ಯಾಗ ಮಾಡಿ ಕಠಿಣ ತಪಸ್ಸಿನಿಂದ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ವಿಶ್ಲೇಷಿಸಿದರು.
ಹಲವು ಸ್ಫರ್ಧೆಗಳಲ್ಲಿ ಹಮ್ಮಿಕೊಂಡಿದ್ದ ವಿಜೇತ ವಿದ್ಯಾರ್ಥಿಗಳು ಆಗಮಿಸಿದ್ದ ಗಣ್ಯರಿಂದ ಬಹುಮಾನ ಸ್ವೀಕರಿಸಿದರು. ಕೆಲವು ಶಿಬಿರಾರ್ಥಿ ವಿದ್ಯಾರ್ಥಿಗಳು ಮನದ ಮಾತುಗಳ ಮೂಲಕ ಅನಿಸಿಕೆಗಳನ್ನು ಹಂಚಿಕೊಂಡರು.ವಿದ್ಯಾರ್ಥಿಗಳಿಂದ ಲಘು ನೃತ್ಯ ಕಾರ್ಯಕ್ರಮ ಮನಸೂರೆಗೊಂಡಿತು. ಡಾ.ಜಯವೀರ ಎ.ಕೆ ಅವರ ಧರ್ಮಪತ್ನಿ ಶ್ರೀಮತಿ ಭಾರತಿ,ಶಿಕ್ಷಕಿಯರಾದ ಶ್ರೀಮತಿ ಮಂಜುಳಾ ದೊಡಮನಿ,ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಸಂಸ್ಥೆಯ ಕಾರ್ಯದರ್ಶಿ ಹಾಗೂ ಶಿಕ್ಷಕ ಶ್ರೀ ಶಾಂತಿನಾಥ ಪಾಟೀಲ ಅವರು ನಿರೂಪಿಸಿ ವಂದಿಸಿದರು.





