ವರದಿ :ಶ್ರೀನಾಥ ಶಿರಗೂರ್
ಬೆಳಗಾವಿ
ರಾಯಬಾಗ :ಪರಮಾನಂದವಾಡಿ ಗ್ರಾಮದಲ್ಲಿ ಶನಿವಾರ ನಡೆದ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಗ್ರಾಮೀಣ ಜನರ ಕಣ್ಮನ ಸೆಳೆಯಿತು ಸಮ್ಮೇಳನ ಸರ್ವಾಧ್ಯಕ್ಷ ಧರ್ಮಣ್ಣ ನಾಯಿಕ, ಕಸಾಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ತಾಲೂಕ ಕಸಾಪ ಅಧ್ಯಕ್ಷ ರವೀಂದ್ರ ಪಾಟೀಲ ಹಾಗೂ ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳ ಅವರುಗಳ ಸಾರೋಟದ ಮೆರವಣಿಗೆಯು ಕಳೆಗಟ್ಟಿತು.
ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ,ಕರಡಿ ಮಜಲು, ಹಲಗಿ ಮಜಲು, ಸಂಪ್ರದಾಯ ಜಾನಪದ ವಾದ್ಯ ಮೇಳಗಳೊಂದಿಗೆ, ಮುತ್ತೈದೆಯರಿಂದ ಆರತಿ, ಕುಂಭಮೇಳ, ವಿಶಿಷ್ಟವಾಗಿ ಈ ಸಮ್ಮೇಳನದಲ್ಲಿ ರೊಟ್ಟಿ ಬುತ್ತಿ ಮೆರವಣಿಗೆಗಳು ಮೈ ನವಿರೇಳಿಸಿದವು. ಸ್ಕೌಟ್ಸ್ ಮತ್ತು ಗೈಡ್ಸ್ ,ಶಾಲಾ ಮಕ್ಕಳ ಪ್ರಭಾಪೇರಿಯ ಮೈಲುದ್ದದ ಸಾಲು, ಯುವಕ ಸಂಘಗಳು ‘ಕನ್ನಡಕ್ಕೆ ಜೈ’ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಕನ್ನಡ ಪರ ಮುಗಿಲು ಮುಟ್ಟುವ ಘೋಷಣೆಗಳೊಂದಿಗೆ ಕನ್ನಡ ಬಾವುಟಗಳ ಎಲ್ಲೆಡೆ ಹಾರಾಟವು ಕಣ್ಮನ ಸೆಳೆಯಿತು.
ಇದಕ್ಕೂ ಮುನ್ನ ಧರೆಪ್ಪ ಗಂಡೋಶಿ ರಾಷ್ಟ್ರಧ್ವಜ,ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ನಾಡಧ್ವಜ ಮತ್ತು ತಾಲೂಕಾ ಘಟಕದ ಅಧ್ಯಕ್ಷ ರವೀಂದ್ರ ಪಾಟೀಲ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.