ಪ್ರಭಾಕರ ಎಂದರೆ ಜಗತ್ತಿಗೆ ಬೆಳಕು ನೀಡುವ ಸೂರ್ಯ ನಮ್ಮೆಲ್ಲರ ಹೆಮ್ಮೆಯ ಜನಮಾನ್ಯರಾದ ಪ್ರಭಾಕರ ನೆಲದ ಕಳೆಯನ್ನು ತೆಗೆದು ಈ ನಾಡಿನಲ್ಲಿ ಅಭಿವೃದ್ಧಿಯ ಕಿರಣಗಳನ್ನು ಚೆಲ್ಲಿದ ನಿಜ ಭಾಸ್ಕರ.
ಅಂಕಲಿ ಎಂಬ ಚಿಕ್ಕ ಗ್ರಾಮದ ಕೃಷಿಕ ಹಾಗೂ ಸುಸಂಸ್ಕೃತ ದಾನ ಧರ್ಮಕ್ಕೆ ಹೆಸರಾದ ಶರಣ ಸಂಸ್ಕೃತಿಯನ್ನೇ ಹಾಸು ಹೊದ್ದುಕೊಂಡ ಸ್ವಾತಂತ್ರ್ಯ ಸೇನಾನಿ ಶ್ರೀ ಬಸವ ಪ್ರಭು ಕೋರೆ ಹಾಗೂ ಶ್ರೀಮತಿ ಶಾರದಾ ತಾಯಿಯವರ ಪುಣ್ಯ ದಂಪತಿಗಳ ಉದರದಲ್ಲಿ ಆಗಸ್ಟ್ 1 1947 ರಲ್ಲಿ ಜನಿಸಿದ ಡಾ. ಕೋರೆಯವರು ಹಳ್ಳಿಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ, ಸೌಜನ್ಯ ಸಂಸ್ಕೃತಿ ಸಂಸ್ಕಾರಗಳಂತಹ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಸತ್ಸಂಗದಲ್ಲಿಯೇ ಶ್ರೀಮಂತ ಬದುಕು ನಡೆಸುತ್ತ ಗುರು ಹಿರಿಯರಿಂದ ಲೇಸೆನಿಸಿಕೊಂಡು ಸಮಾಜಮುಖಿ ಕಾರ್ಯಾಗಳೇ ತಮ್ಮ ನಿಜ ಕಾಯಕ ಎಂದು ಮನಸಾರೆ ಅರಿತು ಸಾಮಾನ್ಯರಾಗಿ ಒಂದು ಭವ್ಯ ಸಂಸ್ಥೆಯಂತೆ ಬೆಳೆದು ತ್ರಿವಿಕ್ರಮ ಹೆಜ್ಜೆಗಳನ್ನು ಇಡುತ್ತಿರುವ ನಮ್ಮ ಈ ನೆಲದ ಮಯೂರ!.
ಪ್ರಯೋಗ ಶೀಲತೆ, ಕ್ರಿಯಾಶೀಲತೆ, ಮತ್ತು ದೂರದೃಷ್ಟಿ ಚಿಂತನೆ ಈ ಮೂರು ಗುಣಗಳು ಇವರ ವ್ಯಕ್ತಿತ್ವ ಬಿಲ್ವಪತ್ರೆಯ ತ್ರಿದಳಗಳು.
*ಶಿಕ್ಷಣದ ಮಹಾಬೆಳಕು:* ನಮ್ಮ ಸರ್ವಾಂಗೀಣ ವಿಕಾಸಕ್ಕೆ ಮೂಲ ಸುಭದ್ರ ತಳಹದಿ ಶಿಕ್ಷಣ ಎಂದರಿತ, ಸಪ್ತರ್ಷಿಗಳ ತ್ಯಾಗ, ಮತ್ತು ಸಮರ್ಪಣೆಯ ಭಾವ ಎಂಬ ದಿವ್ಯ ಉದ್ದೇಶವನ್ನು ಇರಿಸಿ ನಮ್ಮ ಅಂತರಂಗದಲ್ಲಿ ಹುದುಗಿದ್ದ ಅಜ್ಞಾನ ಅಂಧಕಾರಗಳ ಕಾರ್ಮೋಡ ಕವಿದಿದ್ದ 1916 ರ ಆ ಕಾಲಾವಧಿಯಲ್ಲಿ “ಕರುಣಾಳು ಬೆಳಕಾಗಿ ಬೆಳದಿಂಗಳದ ಹೊಳೆಯಾಗಿ ತಮದ ತಿಮಿರ ಕುಹರವನ್ನು ಬೆಳಗಲೆಂದೇ ಆವಿರ್ಭವಿಸಿ ಕೆ.ಎಲ್.ಇ. ಸಂಸ್ಥೆಯನ್ನು ಕಟ್ಟಿದ ಆ ಸಪ್ತರ್ಷಿಗಳ ಆಶಯಗಳನ್ನು ಶಿಸ್ತಿನ ಸಿಪಾಯಿಯಂತೆ ನಿಷ್ಠೆಯಿಂದ ಅಚ್ಚುಕಟ್ಟಾಗಿ ಈಡೇರಿಸಿ ಜಾಗತೀಕ ಮಟ್ಟದಲ್ಲಿ ಬಾನೆತ್ತರಕ್ಕೆ ಬೆಳೆಸಿದ ರಾಜರ್ಷಿ ಡಾ.ಕೋರೆ ಎಂದರೆ ಉತ್ಪ್ರೇಕ್ಷೆ ಆಗಲಾರದು.
ಕೆ.ಎಲ್.ಇ. ಕಾರ್ಯಧ್ಯಕ್ಷರಾಗಿದ್ದು 1984. ಆಗ ಇವರಿಗೆ 34ನೇ ವಯಸ್ಸು. ಅಂದು ಅಧಿಕಾರದ ಚುಕ್ಕಾಣಿ ಹಿಡಿದ ಡಾ. ಕೋರೆ ಅವರು ಆಗ ಆ ಸಂಸ್ಥೆಯ ಆಧೀನದಲ್ಲಿದ್ದ ಅಂಗ ಸಂಸ್ಥೆಗಳು ಕೇವಲ 34 ಎಂಬುದು ಗಮನಾರ್ಹ. ಇತ್ತೀಚಿಗೆ ಈ ಸಂಖ್ಯೆ 293ಕ್ಕೆ ಏರಿದ್ದು ಒಂದು ಇತಿಹಾಸ. ಇದರ ಅಭೂತಪೂರ್ವ ಹಾಗೂ ಅಮೋಘ ಯಶಸ್ಸಿನ ಹಿಂದೆ ಡಾ. ಕೋರೆ ಅವರ ಅವಿಶ್ರಾಂತ ದುಡಿಮೆ ಇದೆ ಎಂಬುದು ಸಾರ್ವತ್ರಿಕ ಸತ್ಯ.ಕೆ.ಎಲ್.ಇ. ಆ ಕಾಲಘಟ್ಟದಲ್ಲಿ ಚಿಕ್ಕ ಗಿಡವಾಗಿದ್ದ ಅದಕ್ಕೆ ಡಾ.ಕೋರೆ ಅವರು ನಿಸ್ವಾರ್ಥ ಸೇವೆ, ತ್ಯಾಗ, ತನು ಮನ ಸಮರ್ಪಣಾ ಭಾವಗಳೆಂಬ ಗೊಬ್ಬರ ಹಾಕಿ ಹೆಮ್ಮರವಾಗಿಸಿದ ನಿಜ ಭಗೀರಥರು. ಗ್ರಾಮೀಣ ಭಾಗದ ಕಟ್ಟ ಕಡೆಯ ವ್ಯಕ್ತಿ ಶಿಕ್ಷಣದಿಂದ ವಂಚಿತಗೊಳ್ಳಬಾರದು ಎಂಬ ಮಹೋನ್ನತ ಉದ್ದೇಶ ಹೊಂದಿದ ಡಾ. ಕೋರೆ ಅವರು ಹಲವು ಕಡೆ ಶಿಕ್ಷಣ ಸಂಸ್ಥೆಗಳನ್ನು ತೆರೆದ ಇವರು ಅಸಂಖ್ಯ ಜನರ ಬಾಳು ಬೆಳಗಿದ, ಬೆಳಗುತ್ತಿರುವ ಇವರು ನಿಜಕ್ಕೂ ಶಿಕ್ಷಣದ ಮಹಾ ಬೆಳಕು.
*ಅಪರೂಪದ ಕನ್ನಡ ಕಿಂಕರ:* ಸ್ವಗ್ರಾಮ ಅಂಕಲಿಯು ಬಹುಸಂಖ್ಯಾತ ಮರಾಠಿಯ ದಟ್ಟ ಪ್ರಭಾವ ಇದ್ದ ಆಗಿನ ಕಾಲದಲ್ಲಿ ಡಾ. ಕೋರೆ ಅವರು ತಮ್ಮ ಸ್ವಂತ ಒಡೆತನದ ಚಿತ್ರಮಂದಿರಕ್ಕೆ ವರ ನಟ ಡಾ.ರಾಜಕುಮಾರ ಅಭಿನಯಿಸಿದ ಬಹುತೇಕ ಕನ್ನಡ ಚಿತ್ರಗಳನ್ನು ತಂದು ” ಕನ್ನಡ ನನ್ನ ಜೀವಿತದ ಅನ್ನ.” ಎಂಬ ದಿನಕರ ದೇಸಾಯಿಯವರ ಕವಿನುಡಿಯಂತೆ ಈ ಭಾಗದ ಜನರಲ್ಲಿ ಕನ್ನಡ ಅಭಿಮಾನ ಉಕ್ಕಿ ಬರುವಂತೆ ಮಾಡಿ, ಕನ್ನಡ ಚಿತ್ರಗಳ ಮೂಲಕ ಕನ್ನಡ ಭಾಷೆಯನ್ನು ಎಲ್ಲರೂ ಮೆಚ್ಚುವಂತೆ ಮಾಡಿದ್ದಾರೆ. ತಮ್ಮ ಒಡೆತನದ ಚಿತ್ರಮಂದಿರಕ್ಕೆ “ಮಯೂರ” ಎಂಬ ಹೆಸರು ಇರಿಸಿದ ಇವರ ನಾಡು ನುಡಿಯ ಮೇಲಿನ ಅಭಿಮಾನ ಚೆನ್ನಾಗಿಯೇ ದೃಢೀಕರಿಸುತ್ತದೆ.
ಬೆಳಗಾವಿ ಎಂಬ ಸಂಕೀರ್ಣ ಪ್ರದೇಶದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವಕನ್ನಡ ಸಮ್ಮೇಳನ, ಹಾಗೂ ಜಿಲ್ಲೆಯ ಗಡಿ ಭಾಗ ನಿಪ್ಪಾಣಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ಯಶಸ್ಸಿನ ಗೆರೆ ಮುಟ್ಟಿ, ಕನ್ನಡ ಸುಗಂಧ ಸೂಸುವಂತೆ ಮಾಡಿದ್ದಾರೆ. ನಾಡು ನುಡಿಯ ವಿಷಯದಲ್ಲಿ ಮುಕ್ತ ಮನದಿಂದ ಸ್ಪಂದಿಸುವ ಇವರು ಓರ್ವ ಅಪರೂಪದ ಕನ್ನಡ ಕಿಂಕರ ಎಂಬುದು ನಮಗೆ ಅಭಿಮಾನದ ಸಂಗತಿ.
*ಆರೋಗ್ಯದ ಭಾಗ್ಯವಿದಾತ:* “ಪ್ರತಿಯೊಬ್ಬ ವ್ಯಕ್ತಿಗೆ ಆರೋಗ್ಯ ನಿಜವಾದ ಸಂಪತ್ತು ಇದ್ದಂತೆ”.ಕೆ.ಎಲ್.ಇ. ಸಂಸ್ಥೆಯ ಮೂಲಕ ಬೃಹತ್ ಆಸ್ಪತ್ರೆಗಳನ್ನು ಕಟ್ಟಿಸಿ, ಬಡ ರೋಗಿಗಳಿಗೆ ಆರೋಗ್ಯ ಸೇವೆ ಸಿಗುವಂತೆ ಬೆಳಗಾವಿ ಹಾಗೂ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಅತ್ಯಾಧುನಿಕ ಬೃಹತ್ ಆಸ್ಪತ್ರೆಗಳನ್ನು ಕಟ್ಟಿಸಿ ಡಾ.ಕೋರೆ ಅವರು ಬಡ ನಿರ್ಗತಿಕರ ಪಾಲಿನ ಭಾಗ್ಯವಿದಾತ ಎನಿಸಿದ್ದಾರೆ.
*ಸಹಕಾರದ ಸಾಹುಕಾರ:* ಚಿಕ್ಕೋಡಿ ಹಾಗೂ ಮಹಾರಾಷ್ಟ್ರದ ಗಡಿಭಾಗದ ಅನೇಕ ರೈತರಿಗೆ ಅನುಕೂಲತೆ ಕಲ್ಪಿಸುವ ದೃಷ್ಟಿಯಿಂದ ದೂಧಗಂಗಾ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದರ ಮೂಲಕ ಸ್ವತಃ ಕೃಷಿಕರಾದ ಡಾ. ಕೋರೆ ಅವರು ರೈತರ ಹಿತ ಕಾಪಾಡಲು ಸದಾವಕಾಲ ಕಂಕಣ ಬದ್ಧರಾಗಿದ್ದಾರೆ.
ಜಿಲ್ಲೆಯ ಅನೇಕ ಕಡೆಗೆ ಸೌಹಾರ್ದ ಸಹಕಾರಿ ಬ್ಯಾಂಕ್ ಹಾಗೂ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕುಗಳ ಮೂಲಕ ಬಡವರ, ರೈತರ, ಶ್ರಮಿಕರ ಆರ್ಥಿಕ ಜೀವನ ಮಟ್ಟ ಎತ್ತರಿಸಲು ಅಹರ್ನಿಶಿ ಶ್ರಮಿಸುತ್ತಿರುವ ಇವರೊಬ್ಬ “ಸಹಕಾರದ ಸಾಹುಕಾರ” ಎನಿಸಿದ್ದಾರೆ.
*ಮುತ್ಸದ್ದಿ ರಾಜಕಾರಣಿ:* ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯಸಭೆಯ ಸಂಸತ್ ಸದಸ್ಯರಾಗಿ ಕೇಂದ್ರ ಹಾಗೂ ರಾಜ್ಯದ ಬೇರೆ ಬೇರೆ ಮುಖ್ಯ ಸಮಿತಿಗಳಲ್ಲಿ ಪದಾಧಿಕಾರಿಗಳಾಗಿ ಸಾರ್ಥಕ ಸೇವೆ ಸಲ್ಲಿಸಿದ್ದು ಗಮನೀಯ.ಕೆ.ಎಲ್.ಇ. ಸಂಸ್ಥೆಯ ವಿಭಿನ್ನ ಕಾರ್ಯಕ್ರಮಗಳಿಗೆ ದೇಶದ ಹೆಮ್ಮೆಯ ಪ್ರಧಾನಿಯನ್ನು ಮೊದಲು ಮಾಡಿಕೊಂಡು, ವಿದೇಶಿ ಗಣ್ಯರನ್ನು ಆಮಂತ್ರಿಸುವ ಮೂಲಕ ಕೆ.ಎಲ್.ಇ. ಕಾರ್ಯ ಸಾಧನೆಗಳನ್ನು ಇಡೀ ದೇಶ ವಿದೇಶಗಳಿಗೆ ದಿಗ್ದರ್ಶನ ಮಾಡಿಸಿದ್ದು ಇವರ ಹೆಚ್ಚುಗಾರಿಕೆ. ಚತುರ ಸಂಘಟಕ, ಮುತ್ಸದ್ದಿ ರಾಜಕಾರಣಿಗಳಾದ ಇವರು ಎಲ್ಲ ರಾಜಕೀಯ ಪಕ್ಷದವರಿಗೂ ಅಪ್ಯಾಯಮಾನವಾಗಿದ್ದಾರೆ.!
*ಪ್ರಶಸ್ತಿ ಪುರಸ್ಕಾರಗಳು:* ಬಹುಮುಖ ಆಯಾಮಗಳಲ್ಲಿ ಶ್ರದ್ಧೆ ನಿಷ್ಠೆಗಳಿಂದ ಕಾರ್ಯ ಮಾಡಿ ಅದ್ವಿತೀಯ ಮತ್ತು ಅನುಪಮ ಸಾರ್ಥಕ ಸೇವೆ ಸಲ್ಲಿಸಿ ಇವರ ವಿಶಿಷ್ಟ ಸೇವೆ ಹಾಗೂ ಮಹೋನ್ನತವಾದ ಸಾಧನೆಗಳನ್ನು ಪರಿಗಣಿಸಿ ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರಮುಖ ವಿಶ್ವವಿದ್ಯಾಲಯಗಳು, ಅಲ್ಲದೆ ವಿದೇಶದ ಹಲವು ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಿವೆ. ನಾಡಿನ ಅನೇಕ ಸಂಘ ಸಂಸ್ಥೆಗಳಿಂದ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡ ಡಾ.ಕೋರೆ ಅವರು ಯಾವತ್ತೂ ಪ್ರಶಸ್ತಿಗಳ ಹಿಂದೆ ಬಿದ್ದವರಲ್ಲ. ಕಳೆದ ವರ್ಷ ಬೆಳಗಾವಿಯಲ್ಲಿ ಡಾ.ಪ್ರಭಾಕರ ಕೋರೆ ಅವರಿಗೆ 75 ವಸಂತಗಳು ತುಂಬಿದ ಪ್ರಯುಕ್ತ ಅದ್ದೂರಿಯಾಗಿ ಅಮೃತ ಮಹೋತ್ಸವ ಆಚರಿಸಿಕೊಂಡು ನಾಡಿನ ಹಿರಿಯ ಗಣ್ಯ ಮಹೋದಯರಿಂದ, ಅಭಿಮಾನಿಗಳಿಂದ, ಹಿತೈಷಿಗಳಿಂದ,ಶುಭಾಶೀರ್ವಾದ ಪಡೆದದ್ದು ಐತಿಹಾಸಿಕ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿತ್ತು.ಇಂದು ಡಾ.ಪ್ರಭಾಕರ ಕೋರೆ ಅವರಿಗೆ 76 ನೇ ವರುಷದ ಜನುಮ ದಿನ. ಅವರು ಈ ನಾಡಿನಲ್ಲಿ ಶತಾಯುಷಿಗಳಾಗಿ ಅನವರತವೂ ಕಾಯಕ ಜ್ಯೋತಿಯಾಗಿ ಪ್ರಜ್ವಲಿಸಲಿ ಎಂದು ನಾವೆಲ್ಲರೂ ಆಶಿಸೋಣ
ಲೇಖನ:ಡಾ.ಜಯವೀರ ಎ.ಕೆ*.
*ಕನ್ನಡ ಪ್ರಾಧ್ಯಾಪಕರು*
*ಖೇಮಲಾಪುರ*