ಅಪಘಾತದಲ್ಲಿ ತೀರಿದ ವಿದ್ಯಾರ್ಥಿಗೆ ಶ್ರದ್ದಾಂಜಲಿ ಅರ್ಪಿಸಿದ ಹಾರೂಗೇರಿ ಪೋಲಿಸ್ ತಂಡ
ವರದಿ : ಸಂತೋಷ ಮುಗಳಿ
ಬೆಳಗಾವಿ. ರಾಯಬಾಗ : ಸಮೀಪದ ಹಿಡಕಲ್ ಗ್ರಾಮದ ನಿವಾಸಿ ಸದಾಶಿವ ಪಾರ್ಥನಳ್ಳಿ ಎಂಬುವರ ಮಗ ರಾಕೇಶ ಪಾರ್ಥನಳ್ಳಿ (19) ಹಾರೂಗೇರಿಯ ಸಿದ್ದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಪದವಿ ಅಧ್ಯಯನ ಮಾಡುತ್ತಿದ್ದ. ಜು.13 ಗುರುವಾರ ತಡ ರಾತ್ರಿ ಬೈಕ್ ಅಪಘಾತದಲ್ಲಿ ರಾಕೇಶ ಸಾವನಪ್ಪಿದ್ದಾನೆ.
ಹಾರೂಗೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶುಕ್ರವಾರದಂದು ಹಾರೂಗೇರಿಯ ಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅಪಘಾತದಿಂದ ಮೃತ ವಿದ್ಯಾರ್ಥಿಯ ಆತ್ಮಕ್ಕೆ ಶಾಂತಿ ಕೋರಿ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿ ಮಾತನಾಡಿದ ಹಾರೂಗೇರಿ ಸಿ ಪಿ ಐ ರವಿಚಂದ್ರ ಅವರು, ರಾಕೇಶ್ ಗುರುವಾರ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದ್ದರೆ, ಅವನಿಗೆ ಏನೂ ಆಗುತ್ತಿರಲಿಲ್ಲ. ಆದರೆ ಹೆಲ್ಮೆಟ್ ಇಲ್ಲದಿರುವುದರಿಂದ ಆತ ತನ್ನ ಪ್ರಾಣವನ್ನು ಕಳೆದುಕೊಳ್ಳಬೆಕಾಯಿತು. ಅದ್ದರಿಂದ ಸಂಚಾರಿ ನಿಯಮಗಳ ಪಾಲಿಸಿ ಎಂದು ಹೇಳಿ, ನೈತಿಕತೆಯ ಹಾಗೂ ಶಿಸ್ತಿನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಅಷ್ಟೇ ಅಲ್ಲದೆ ಎಲ್ಲಾ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ಎಂದು ವಿನಂತಿಸಿದರು.
ನಂತರ ಪಿ ಎಸ್ ಐ ಗಿರಿಮಲ್ಲಪ್ಪ ಉಪ್ಪಾರ ಮಾತನಾಡಿ, ನಮ್ಮ ಎಚ್ಚರಿಕೆಯಲ್ಲಿ ನಾವು ಬಾಳಬೇಕು. ನಂಬಿದ ತಂದೆ ತಾಯಿಯ ಆಶೆಗಳಿಗೆ ನಿರಾಶೆ ಮಾಡಬೇಡಿ. ನಿಮ್ಮಿಂದ ಲೋಕಕ್ಕೆ ಉಪಕಾರವಾಗಲಿ ನೀವು ದೇಶದ ಉತ್ತಮ ಪ್ರಜೆಯಾಗಿ ಜೀವಿಸಬೇಕು, ಅವಸರವೇ ಅಪಾಯಕ್ಕೆ ಕಾರಣ ಹಾಗೂ ಮುಂಜಾಗೃತೆಯಿಲ್ಲದ ಸವಾರಿ ತಪ್ಪಿಸುತ್ತದೆ ನಿಮ್ಮ ದಾರಿ ಎಂದು ಮಾರ್ಮಿಕವಾಗಿ ತಿಳಿಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಕಾರ್ಯದರ್ಶಿ ಬಸವರಾಜ ಚೌಗಲಾ, ಆಡಳಿತಧಿಕಾರಿ ಶ್ರೀಮತಿ ಎಂ ಎನ್ ಚೌಗಲಾ, ಉಪನ್ಯಾಸಕರು,ಸಿಬ್ಬಂದಿ,ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.





