ಬೆಳಗಾವಿ
ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ: ಪಟ್ಟಣದ ಶ್ರೀಮಠದ ಜಾತ್ರಾ ಮಹೋತ್ಸವದ ನಿಮಿತ್ಯ ಕೋಳಿಗುಡ್ಡದ ಆನಂದ ಮಹಾರಾಜರ ಆಶ್ರಮದಿಂದ ಮುಗಳಖೋಡ ಶ್ರೀಮಠದವರೆಗೂ ಪಾದಯಾತ್ರೆ ಮೂಲಕ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಭಾವಚಿತ್ರ ಹೊತ್ತ ಬೆಳ್ಳಿಪಲ್ಲಕ್ಕಿ ಉತ್ಸವ ಜರುಗಿತು.
ಪಲ್ಲಕ್ಕಿ ಜೊತೆ ರಾಜಕೀಯ ವ್ಯಕ್ತಿಗಳು ಸೇರಿದಂತೆ ಸಾವಿರಾರು ಭಕ್ತರು ಭಾಗಿ..
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ ಶ್ರೀ ಮುರುಘರಾಜೇಂದ್ರ ಶ್ರೀಗಳು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಗುರುವಿನ ನಾಮ ಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಭಾಗಿಯಾದ ಎಲ್ಲ ಭಕ್ತಾದಿಗಳ ಬಾಳು ಬಂಗಾರವಾಗಲಿ, ಬರುವ ದಿನಗಳಲ್ಲಿ ನಿಮ್ಮೆಲ್ಲರ ಇಷ್ಟಾರ್ಥಗಳನ್ನು ಆ ಶ್ರೀ ಸಿದ್ದರಾಮ, ಶ್ರೀ ಯಲ್ಲಾಲಿಂಗ ಮಹಾಪ್ರಭುಗಳು ಈಡೇರಿಸಲಿ ಎಂದು ಆಶೀರ್ವಚನ ನೀಡಿದರು.
ನಂತರ ಪಲ್ಲಕ್ಕಿ ಉತ್ಸವ ಮುಗಳಖೋಡದ ಮಹಾದ್ವಾರ ತಲುಪಿ ಅಲ್ಲಿಂದ ಶ್ರೀಮಠದ ವರೆಗೆ ಬೆಳ್ಳಿ ಲೇಪಿತ ರಥದಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಭವ್ಯ ಮೆರವಣಿಗೆ ನಡೆಯಿತು. ಬ್ಯಾಂಜೊ, ಕುದುರೆ ಸೊಂಗ, ಡೊಳ್ಳು, ಕರಡಿ ಮಜಲು ಸೇರಿದಂತೆ ನಾನಾ ರೀತಿಯ ಕಲಾ ಮೇಳಗಳೊಂದಿಗೆ ಕುಂಭ, ಆರತಿ ಹೊತ್ತ ಮಹಿಳೆಯರು ಹಾಗೂ ಭಕ್ತಾದಿಗಳು ಸೇರಿ ವಿವಿಧ ಬೀದಿಗಳಲ್ಲಿ ಸಂಚರಿಸಿ ಶ್ರೀಮಠ ತಲುಪಿದರು.
ಬರುವ ದಾರಿಯ ಮದ್ಯ ಅಲ್ಲಲ್ಲಿ ಭಕ್ತಾದಿಗಳು ಪಾದಯಾತ್ರಿಗರಿಗೆ ಅಂಬಲಿ, ಮಜ್ಜಿಗೆ, ತೆಂಗಿನನೀರು ಹಾಲು ವಿವಿಧ ರೀತಿಯ ತಂಪು ಪಾನೀಯಗಳನ್ನು ನೀಡಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಪಾದಯಾತ್ರೆಯಲ್ಲಿ ರಾಜಕೀಯ ವ್ಯಕ್ತಿಗಳು, ಪಟ್ಟಣದ ಮುಖಂಡರು ಸೇರಿದಂತೆ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಆಂದ್ರ ರಾಜ್ಯಗಳಿಂದ ಹಾಗೂ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ಪುರುಷರು, ಮಹಿಳೆಯರು, ಶಾಲಾ ಮಕ್ಕಳು ಸೇರಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಭಕ್ತಾದಿಗಳು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.