ವಿಶ್ವಸಂತ, ಬಹುಮುಖಿ ಸಾಧಕ, ಶ್ರೀ ಶ್ರೀ ವಿಶ್ವೇಶ ತೀರ್ಥರು”

Share the Post Now

ಶ್ರೀ ಶ್ರೀ ವಿಶ್ವೇಶತೀರ್ಥರು ವೃಂದಾವನಸ್ಥರಾಗಿ ಮೂರು ವರ್ಷಗಳೇ ಸಂದವು. ಧಾರ್ಮಿಕ, ಸಾಮಾಜಿಕ, ರಾಷ್ಟ್ರೀಯ ವಿಶೇಷ ಘಟನೆಗಳು ಏನೇ ನಡೆದರೂ,ಗುರುಗಳು ಇರಬೇಕಿತ್ತು ಎಂಬ ಉದ್ಘಾರ ಇನ್ನೂ ನಿಂತಿಲ್ಲ. ಗುರುಗಳ ಒಡನಾಡಿಗಳು ಭೇಟಿಗೊಂಡರೆ ಸಾಕು, ಅವರ ಗುಣಗಾನ ಪರಾಕಾಷ್ಠೆಗೆ ಏರುವುದು. ನೆನೆಯದೇ ಹೋದರೆ ಮನದಲ್ಲೇನೋ ಶೂನ್ಯ ಭಾವ. ಜನಮಾನಸದ ಹೃದಯ ಕಮಲದಿ, ಮಧುರ ಪ್ರೇಮದ ಮಕರಂದ ಇನ್ನೂ ಬರಿದಾಗಿಲ್ಲ. ಸೃಜಿಸಿದ ಭಾವದಲೆ ಇನ್ನೂ ನಿಂತಿಲ್ಲ. ಭಕ್ತರ ಮನದಲ್ಲಿ ಇನ್ನೂ ಜೀವಂತ, ಅಲ್ಲೋ ಇಲ್ಲೋ ಸಂಚಾರದಲ್ಲಿರಬಹುದೆಂಬ ಸಮಾಧಾನಿಸುವ ಮನಸ್ಸು.

ಗುರುಗಳು ಒಂದು ನಿರ್ದಿಷ್ಟ ಸಮುದಾಯದಿಂದ, ಸಮುದಾಯದ ಪೀಠವೇರಿದರೂ ಅಷ್ಟಕ್ಕೇ ಸೀಮಿತರಾಗಲಿಲ್ಲ. ಸೀಮೆಯಿಂದಾಚೆ ದಾಟಿ ಸಂಘಟಿತ ರಾಷ್ಟ್ರ ಬೆಳೆಸುವತ್ತ ದೃಷ್ಟಿ ಹಾಯಿಸಿದವರು. ಸಮಗ್ರ ಹಿಂದೂ ಸಮಾಜದ ಭೇದ ಭಾವಗಳನ್ನು ಅವರವರ ನಂಬಿಕೆಯಂಗಳದಲ್ಲೇ ಹದಗೊಳಿಸಿ,ಸಂಗೋಪನ ಗೈದ ಭೂಮಿ ತೂಕದ ಸಂತರು. ( ತಾಳ್ಮೆಯ ಸಂತರು)

ಜಗತ್ತಿನ ಎಲ್ಲಾ ಮತ ಪಂಥಗಳು ಭಿನ್ನ ಭೇದಗಳಿಗೆ ಹೊರತಾಗಿಲ್ಲ. ಅದು ಸರ್ವವ್ಯಾಪಿ,ಸಾರ್ವಕಾಲಿಕ. ಅದುವೇ ಇಷ್ಟೆಲ್ಲ ಪಂಗಡಗಳ ಉದಯಕ್ಕೆ ನಾಂದಿ. ಎಲ್ಲರಿಗೂ ಪ್ರತ್ಯೇಕ ಪೀಠ ಪೀಠಾಧಿಪತಿ. ಸಂಘಟನೆಯ ಆತುರದಲ್ಲಿ ನಾವೇ ಮೇಲು ಎಂಬ ಭಾವನೆ. ಹಾಗಾದಾಗ ಇತರರು ನಮ್ಮಷ್ಟಿಲ್ಲ ಎಂಬ ಚರ್ಚೆ ಹುಟ್ಟು ಹಾಕುವುದು ಸಹಜ. ಇವು ತಾರಕಕ್ಕೇರಿ ಆಂತರಿಕ ಕಲಹ ಸೃಷ್ಠಿ . ಇವೆಲ್ಲ ಇಂದು ನಿನ್ನೆಯದಲ್ಲ. ಇಂತಹ ಸಂಕುಚಿತ ಮನಗಳನ್ನೆಲ್ಲ ಭಾವೈಕ್ಯತೆಗಳಿಂದ ಬಂಧಿಸಬಲ್ಲ ವ್ಯಕ್ತಿತ್ವ ಉದಿಸಿ ಬಂದರೆ ಅಲ್ಲಿ ಐಕಮತ್ಯ ನೆಲೆಸಬಹುದು. ಪೇಜಾವರರು ಮಾನವೀಯತೆಯ ಪರಮೋಚ್ಛ ಶಿಖರವೇರಿದ ಸಂತರು. ಎಲ್ಲಿಯೂ ಪರಿಹಾರ ಕಾಣದಿದ್ದಾಗ ಇವರಲ್ಲೊಂದು ಪರಿಹಾರ ಇದ್ದೆ ಇರುತ್ತಿತ್ತು. ಆ ಪುಟ್ಟ ದೇಹದಲ್ಲಿ ಮನೆ ಮಾಡಿದ ಮಾನವತೆ ಎಲ್ಲಾ ಮನಗಳನ್ನು ಬೆಸೆದು ಬಿಡುತ್ತಿತ್ತು.


ರಾಷ್ಟ್ರೀಯ ಸಮಸ್ಯೆಗಳು ಬಂದಾಗ ಮುಂಚೂಣಿಯಲ್ಲಿ ನಿಂತು ಧ್ವನಿ ಎತ್ತುವ ಛಾತಿ ಅವರದು. ಅಯೋಧ್ಯಾ,ರಾಮ ಸೇತು, ತಿರುಪತಿಯ ಕ್ರೈಸ್ತ ಮತ ಪ್ರಚಾರ, ಭೂಕಂಪ, ಸುನಾಮಿ, ಬರ ನೆರೆ,ಮೀನಾಕ್ಷಿ ಪುರಂ ಮತಾಂತರ,ಪಂಜಾಬ್ ಸಮಸ್ಯೆ ಏನೇ ಬರಲಿ ಅಲ್ಲಿ ಶ್ರೀಗಳಿರುತ್ತಿದ್ದರು. ಮಾಧ್ಯಮಗಳಲ್ಲೂ ಶ್ರೀಗಳ ಧ್ವನಿಯೇ ಅಡಿಗಲ್ಲು,ಅದುವೇ ಮಂಟಪಕ್ಕೆ ಮುನ್ನುಡಿಯ ಮುಕುಟ.



ಧರ್ಮ,ಧಾರ್ಮಿಕತೆ ಒಡಕು ಮೂಡಿಸಿ ಮತ ಬೇಟೆಯಾಡುವ ರಾಜಕಾರಣಕ್ಕೂ ಸೆಡ್ಡು ಹೊಡೆದವರು. ಬೊಬ್ಬಿರಿದವರಿಗೆ ಪಂಥಾವ್ಹಾನ ನೀಡಿ ಸಂವಾದಕ್ಕೆ ಬನ್ನಿರೆನ್ನುವ ಕೆಚ್ಚೆದೆಗೆ ತಣ್ಣಗಾದವರೆಷ್ಟೋ ಮಂದಿ. ಶ್ರೀ ಕೃಷ್ಣ ಮಠವಿರಲಿ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವಿರಲಿ, ಜಾತ್ಯತೀತತೆಯ ಸೋಗುಹಾಕಿ ಬ್ರಾಹ್ಮಣ, ಬ್ರಾಹ್ಮಣೇತರರ ನಡುವೆ ವಿಷ ಬೀಜ ಬಿತ್ತಿ ಫಸಲು ತೆಗೆಯಲು ಹವಣಿಸಿದವರಿಗೂ ಸಿಂಹ ಸ್ವಪ್ನರಾದವರು. ಅನ್ಯ ಮತದ ನಂಬಿಕೆಗಳ ಸೊಲ್ಲೆತ್ತದೆ ಹಿಂದೂ ನಂಬಿಕೆಗಳನ್ನು ಮೂಢ, ಗೂಡ ಎಂದು ಸಾರುವ ರಾಜಕೀಯದಾಟ ನಡೆಸಿ, ರಾಡಿಯೆಬ್ಬಿಸುವ ದುಷ್ಟ ಕೂಟಗಳನ್ನು ಸದೆಬಡಿದವರು. ಮಾಧ್ಯಮದ ಬುದ್ಧಿಜೀವಿಗಳಿಗೂ ಬೆವರಿಳಿಸಿದ,ಬೆವರಿಳಿಸುವ ಗಟ್ಟಿ ಗುಂಡಿಗೆ ಶ್ರೀಗಳದು. ನಾಲ್ಕಡಿ ಹನ್ನೊಂದಗುಲ ಎತ್ತರ, ಮೂವತ್ತಾರು ಕಿಲೋ ಭಾರದ ತೆಳ್ಳಗೆ, ಬೆಳ್ಳಗೆಯ ಕಾವಿಧಾರಿ ಗುರುವಿನ ಮುಂದೆ, ಹತ್ತು ಬಾರಿ ಹಿಂದೆ ಮುಂದೆ ನೋಡಿ ವಾಗ್ವಾದಕ್ಕೆ ಇಳಿಯುತ್ತಿದ್ದರು. ಇದು ಧೃಗ್ಗೋಚರ ದೇಹಬಲ ಕಂಡು ಭಯವಲ್ಲ, ಹೃದ್ಗೋಚರ ಶಕ್ತಿಯ ಭಯ. ಪರಿಶುದ್ಧತೆಯ ಎದುರಿಸಲಾರದ ಭಯ.



ಬ್ರಾಹ್ಮಣ ಸಮಾಜದ ಮೇಲೆ ಒಂದಿಷ್ಟು ಸಂಖ್ಯೆಯ ಯೋಜಿತ, ಅನ್ಯಮತ ಪ್ರೇರಿತ ಸಿಟ್ಟು ಸೆಡವುಗಳಿದ್ದರೂ, ಸಮಾಜ ಹಿತ ಕಾಪಾಡುವ ಮಹತ್ಕಾರ್ಯಕ್ಕೆ ಬೆನ್ನು ಹಾಕಿದವರಲ್ಲ. ಸಮುದಾಯದ ಹಿತ,ಭಾರತೀಯ ಸಂಸ್ಕೃತಿಯ ಭಾಗವೆಂದು ಅರಿತ ಗುರುಗಳು, ಸಂಸ್ಕಾರ ಸಂಸ್ಕೃತಿಯ ತಾಯಿ ಭಾಷೆ ಸಂಸ್ಕೃತ ಶಿಕ್ಷಣ ನೀಡಲು ಪೂರ್ಣಪ್ರಜ್ಞ ವಿದ್ಯಾಪೀಠ ಸ್ಥಾಪಿಸಿ, ಸಹಸ್ರಾರು ವಿದ್ವಾಂಸರ ದಂಡು ಸಿದ್ಧಗೊಳಿಸಿ,ವಿಶ್ವದೆಲ್ಲೆಡೆ ಹಬ್ಬುವಂತೆ ಮಾಡಿದ, ಪುಣ್ಯ ಫಲದಿಂದ ಸನಾತನ ಧರ್ಮ ಬಲಿಷ್ಠ ಗೊಂಡಿತೆಂಬುದನ್ನು, ದೇಶ ಭಾಷೆ ಅರಿತವರು ಸ್ಮರಿಸುವರು.



ಬೋಧಿಸುವುದು ಸಂತರ ನಿತ್ಯಕರ್ಮ ಸರಿ. ಅನುಷ್ಠಾನವಿಲ್ಲದ ಬೋಧನೆ ಕೇಳುವವರಾರು. ಗುರುಗಳು ಅನುಷ್ಠಾನಿಸಿ ಬೋಧಿಸಿದವರು. ಅದಕ್ಕಾಗಿಯೇ ಅವರ ಬೋಧನೆ ಶಕ್ತಿಶಾಲಿ.ಮಾತು ಪ್ರಭಾವಶಾಲಿ. ಶಾಸ್ತ್ರಾಧ್ಯಯನ, ಪೂಜಾದಿಗಳು,ಜಪ ತಪ ನಿತ್ಯಕರ್ಮವಾದರೆ, ಮಿಂಚಿನ ಸಂಚಾರಗೈದು ಬೋಧನೆ ಮತ್ತೆ ದೇವಾಲಯ,ವಿದ್ಯಾಲಯ, ಔಷಧಾಲಯಗಳ ಮೂಲಕ ನಾನಾ ಜನರ ಸೇವೆ. ಛತ್ರ, ಅನ್ನದಾನ, ವಿದ್ಯಾರ್ಥಿ ನಿಲಯಗಳು, ಸಾಧಕರ ಆಶ್ರಯ ತಾಣಗಳು. ಭಕ್ತರಿಂದ ಹರಿದು ಬರುವ ದಾನ ಧರ್ಮಾದಿಗಳೇ ಇವುಗಳ ಶಕ್ತಿಮೂಲ. ಅನುಷ್ಠಾನಿಸಿ ತೋರಿದಾಗ ಮಾತ್ರ ಸಂಪತ್ತಿನ ಒಳಹರಿವು ಸಾಧ್ಯ. ದಿನದ 21 ಗಂಟೆಗಳಷ್ಟೂ ಸೇವಾ ಕಾರ್ಯಗಳಿಗೆ ಬಳಕೆಯಾಗುತ್ತಿತ್ತು. ದೇಶದೆಲ್ಲೆಡೆ ಪಯಣ, ಸಂಚರಿಸುವ ವಾಹನವೇ ಪಾಠಶಾಲೆ. ನಿದ್ರೆಯೂ,ಧ್ಯಾನವೂ ಅಲ್ಲೇ. ಪೂಜೆಗೊಂದು ನೆಲೆ ಹುಡುಕಿಕೊಳ್ಳುತ್ತಿದ್ದರು.



ವಿಶ್ವೇಶತೀರ್ಥರೆಂದರೆ ಸರಳ ಸಜ್ಜನಿಕೆಯ ಪ್ರತೀಕ. ದೃಷ್ಟಾಂತ ಕಥೆಗಳ ಹೇಳುವ ಅವರ ನುಡಿಗಳು,ಪಂಡಿತ ಪಾಮರರಿಗೂ ಹೃದಯಂಗಮ. ಮುಗ್ದ ನಗು ಮತ್ತು ಅಭಯ ಹಸ್ತದ ಸಂವಹನ,ಭಾವ ತೀವ್ರತೆಗೊಳಿಸುತ್ತಿತ್ತು. ನೂರಾರು ಭಕ್ತರಿರಲಿ ಕಣ್ಣಲ್ಲಿ ಕಣ್ಣಿಟ್ಟು ಒಂದು ನಗು ಬೀರಿದರೆ ಸಾಕು,ಗುರುದರ್ಶನ ಪರಿಪೂರ್ಣವೆಂದು ಭಾವಿಸುತ್ತಿದ್ದರು. ಆಳುಗಳಿಂದ ಅರಸರವರೆಗೆ ಎಲ್ಲರೂ ಪೂಜ್ಯರ ಬಳಿಬಂದು ಪುನೀತರಾಗುತ್ತಿದ್ದರು.

ಮಾತೆಯ ಕ್ಷಮಾ ಗುಣ, ಶಿಷ್ಯ ವಾತ್ಸಲ್ಯ,ದ್ವೇಷಿಸುವವನಲ್ಲೂ ಗುಣ ಗುರುತಿಸುವ ಔದಾರ್ಯ, ಪಾಂಡಿತ್ಯ ಪ್ರತಿಭೆಗಳೊಡನೆ, ಓತ ಪ್ರೋತವಾಗಿರುವ ವಿನಯ, ಪಾಂಡಿತ್ಯದ ಹೊರೆಹೇರದ ಹಿತಮಿತವಾದ ಸಮಯೋಚಿತ ಮಾತು, ಬದುಕಿನ ಪರಿವರ್ತನಾಶೀಲತೆ ಅರ್ಥೈಸುವ ವಿಶಾಲ ದೃಷ್ಟಿ, ಎಲ್ಲರೂ ನಮ್ಮವರೆಂಬ ವಿಶ್ವ ಕುಟುಂಬ ಭಾವ,ತನ್ನ ಧರ್ಮದ ಕಾಳಜಿ, ಪರಧರ್ಮ ಸಹಿಷ್ಣುತೆ ಇವೆಲ್ಲ ಗುಣಗಳು ಕೀರ್ತಿ ಶಿಖರದ ನೆತ್ತಿಗೇರುವಂತೆ ಮಾಡಿದವು.

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಮೀಪದ, ರಾಮಕುಂಜದ ಎರಟಾಡಿಯ ಕುಲೀನ ಮನೆತನದಲ್ಲಿ ಜನಿಸಿದ ವೆಂಕಟ್ರಾಮ,ಉಡುಪಿ ಪೇಜಾವರ ಪೀಠವನ್ನು ತನ್ನ ಏಳನೇ ವಯಸ್ಸಿಗೇರಿ ಹಿರಿಯ ಸಂತರ ಮಾರ್ಗದರ್ಶನ ಪಡೆದು, ರಾಮಕುಂಜದಿಂದ ರಾಷ್ಟ್ರಾದ್ಯಂತ ಭಕ್ತರ ಮನೆಗೆದ್ದ ವಿಶ್ವೇಶ ತೀರ್ಥರು ವಿಶ್ವಸಂತರೆನಿಸಿಕೊಂಡರು. ಉತ್ತರ ಭಾರತದವರಿಗೆ ಉಡುಪಿ ಸ್ವಾಮಿಗಳೆಂದೇ ಪರಿಚಿತರು.

ಗುರುಗಳ ಮೇರು ವ್ಯಕ್ತಿತ್ವದ ವರ್ಣನೆ ಪದಗಳಿಂದ, ಭಾವನೆಗಳಿಂದ ಅಸಾಧ್ಯ. ಹಿಮಗಿರಿ ಮೇರು ಶಿಖರವನ್ನು ಅನತಿ ದೂರದಲ್ಲಿ ನಿಂತು, ನೋಡಿರುವೆನೆಂದರೆ ಹೇಗೋ ಹಾಗೇ ಗುರುಗಳ ವ್ಯಕ್ತಿತ್ವ ಕಟ್ಟಿಕೊಡುವ ಕಾರ್ಯ. ಅಂತರಂಗ ಕಡಲಾಳದಷ್ಟು ಆಳ. ಎನಿತೆನಿತು ಬಗೆಯ ಪಾತ್ರಗಳು. ಜನಪ್ರಿಯತೆ ಅಂಬರದಷ್ಟು ವೈಶಾಲ್ಯ, ಸಾಗರದಷ್ಟು ವಿಸ್ತಾರ. ಎರಡು ಗೌರವ ಡಾಕ್ಟರೇಟ್ ಪದವಿಗಳು, ಪದ್ಮವಿಭೂಷಣ ಪುರಸ್ಕಾರ, “ಸಂತರ ಸಂತ”‘ ಇನ್ನೂ ಅನೇಕ ರೀತಿಯ ಪುರಸ್ಕಾರ ದೊರೆತರೂ, ಅವುಗಳನ್ನೆಲ್ಲ ಮೀರಿ ನಿಂತ ಭಾರತರತ್ನ ಸಂತರೇ ಸರಿ.



ಬದುಕಿನ ಕೊನೆಯ ದಿನ ಜವರಾಯ ಜ್ವರದ ರೂಪದಲ್ಲಿ ಇನ್ನಿಲ್ಲದಂತೆ ಕಾಡಿದ, ಬಸವಳಿದರು. ಮುಖ ಕಳೆಗುಂದಿದರೂ ಉತ್ಸಾಹ ಕುಂದಿರಲಿಲ್ಲ. ಸ್ಮೃತಿ ಸಮೃದ್ಧವಾಗಿತ್ತು. ಬೆಟ್ಟದಷ್ಟು ಯೋಜನೆಗಳು ಸ್ಫುರಿಸುತ್ತಲೇ ಇದ್ದವು. ನುಡಿಗಳು ಮೊಣಚು ಕಳೆದುಕೊಂಡಿರಲಿಲ್ಲ. ತಾನು ಜನಿಸಿ ಬಂದ ರಾಮಕುಂಜ, ತನ್ನ ಗುರು ಜನಿಸಿದ ಪಾಜಕ, ಆರಾಧಿಸುವ ಉಡುಪಿ, ಎಲ್ಲಾ ಕ್ಷೇತ್ರದೊಡೆಯರಲ್ಲಿ ಇನ್ನು ನನ್ನ ಕೈಲಾಗದು, ದೇಹ ಜರ್ಜರಿತಗೊಂಡಿದೆ, ಜೀವ ಇದರಲ್ಲಿ ನಿಲ್ಲಲೊಪ್ಪದು, ದೇವ ಹೋಗಲಪ್ಪಣೆ ಕೊಡೆಂದು ಬೇಡಿ ಹೊರಡಲು ಸಿದ್ಧರಾದರು. ತನ್ನ ಮಹೋನ್ನತ ನುಡಿಗಳನ್ನು ರಾಜಾಂಗಣದಲ್ಲಿ ಆರಾಧ್ಯದೇವ ಶ್ರೀ ಕೃಷ್ಣನ ಪದ ತಲಕ್ಕೆ ಸಮರ್ಪಿಸಿದರು. ಆಸ್ಪತ್ರೆ ಸೇರಲೇಬೇಕೆಂದು ವೈದ್ಯರ ಬಲವಂತವನ್ನು ಲೆಕ್ಕಿಸದೆ, ನಾಳೆ ಪೂಜೆ ಪಾಠ ಮುಗಿಸಿ ಬೇಗನೆ ಬರುವೆನೆಂದರು. ಜವರಾಯ ಇನ್ನಾಗದೆಂದು,ಯಾರ ಮೊರೆಯನ್ನೂ ಆಲಿಸದೆ ಹತ್ತು ದಿನಗಳ ಕಾಲ ದೇಹ ನಿಸ್ತೇಜಗೊಳಿಸಿ, ಭಕ್ತರ,ಶಿಷ್ಯರ ದುಃಖದ ಭಾರ ಇಳಿಯುವಂತೆ ಮಾಡಿ, ದಿನಾಂಕ 29.12. 2019 ರಂದು ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಶ್ರೀಗಳು ಬದುಕು ಕೊನೆಗೊಳಿಸಿದರು.

ಲೇಖನ:~ ಡಾ.ಜಯವೀರ ಎ.ಕೆ
ಕನ್ನಡ ಪ್ರಾಧ್ಯಾಪಕರು
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!