ಎಲ್ಲಿಗೆ ಬಂತು ಏತಕ್ಕೆ ಬಂತು 47ರ ಸ್ವಾತಂತ್ರ!ಇನ್ನು ಜೀವಂತವಿದೆ ಗದಗ ಜಿಲ್ಲೆಯಲ್ಲಿ ಅಸ್ಪೃಶ್ಯತೆ

Share the Post Now

ಗದಗ: ಶ್ಯಾಗೋಟಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದ್ದು, ಇಲ್ಲಿಯ ಸವರ್ಣೀಯರು ದಲಿತ ಕುಟುಂಬಗಳನ್ನು ಬಹಿಷ್ಕಾರ ಹಾಕಿರುವಂತಹ ಘಟನೆ ನಡೆದಿದೆ. ದಿನ ದಲಿತರು ದೇವಸ್ಥಾನ, ಕಿರಾಣಿ ಅಂಗಡಿ, ಹೊಟೇಲಿಗೆ ಹೋಗುವಂತಿಲ್ಲ. ದಿನಸಿ ಅಂಗಡಿಯಲ್ಲಿ ವ್ಯಾಪಾರ ಮಾಡಿದರೆ, ಅಂಗಡಿ ಮಾಲೀಕನಿಗೆ ದಂಡ ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ.

ಜನವರಿ 21ರಂದು ದಲಿತರ ಮೇಲಿನ ಬಹಿಷ್ಕಾರ ಪ್ರಕರಣ ಹಲವು ದಿನಗಳಿಂದ ಜಾರಿಯಲ್ಲಿದೆ ಎಂದು ವರದಿಯಾಗಿದೆ. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಎಂಬ ಕಾರ್ಯಕ್ರಮ ನಿಮಿತ್ತ ದಲಿತ ಯುವಕರು ಬಹಿಷ್ಕಾರದ ಬಗ್ಗೆ ತಹಶೀಲ್ದಾರ ಗಮನಕ್ಕೆ ತಂದಿದ್ದಾರೆ. ದುಡಿಮೆಯೂ ಇಲ್ಲ, ರೇಷನ್‌ ಕೂಡ ನೀಡುತ್ತಿಲ್ಲ ಅಂತ ದೂರಿದ್ದಾರೆ

ಮಾದಿಗ ಸಮುದಾಯದ ಮನೆಯಲ್ಲಿ ಮದುವೆ ಸಮಾರಂಭದ ವೇಳೆ ದ್ಯಾಮಮ್ಮ ಗುಡಿಗೆ ಹಾಲುಗಂಬ, ಹಸಿರುಗಂಬ ಪೂಜೆಗೆ ಅವಕಾಶ ನೀಡಲಿಲ್ಲ ಮತ್ತು ಊರಿನ ಇತರೆ ಸಮುದಾಯಗಳ ಮುಖಂಡರು ಗುಡಿಗೆ ಬೀಗ ಹಾಕಿದ್ದಾರೆ.

ಮದುಮಗನಾಗಿದ್ದ ರೈತ ಶರಣು ಮಾದರ ಮತ್ತು ಆತನ ಕುಟುಂಬಸ್ಥರು ವಿವಾಹ ಪೂರ್ವ ಆಚರಣೆಗಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ದಾರಿಯುದ್ದಕ್ಕೂ ಎಲ್ಲಾ ಅಂಗಡಿಗಳು ಮತ್ತು ಅವರು ಆಚರಣೆ ಮಾಡಲು ಹೊರಟಿದ್ದ ದ್ಯಾಮವ್ವ ದೇವಸ್ಥಾನವನ್ನು ಮುಚ್ಚಲಾಗಿದೆ. ಮೇಲ್ಜಾತಿಗೆ ಸೇರಿದ ಕೆಲವರ ಆದೇಶದ ಮೇರೆಗೆ ಅಂಗಡಿಗಳು ಮತ್ತು ದೇವಸ್ಥಾನವನ್ನು ಮುಚ್ಚಲಾಗಿದೆ.

ಕಿರಾಣಿ ಅಂಗಡಿಯಲ್ಲಿ ದಲಿತ ಕುಟುಂಬಗಳಿಗೆ ಏನಾದರೂ ಪದಾರ್ಥಗಳನ್ನು ನೀಡಿದರೆ, 2500 ರೂ. ದಂಡ ಹಾಕುತ್ತಾರೆ ಎಂದು ಅಂಗಡಿಕಾರರು ಆರೋಪಿಸಿದ್ದಾರೆ. ಇದರ ಒಂದು ವಿಡಿಯೋ ವೈರಲ್‌ ಆಗಿದೆ.

ಊರಿನಲ್ಲಿ ಮಾದಿಗ ಸಮುದಾಯದ 14 ಮನೆಗಳು ಮಾತ್ರ ಇದ್ದು . ಊರಿನಲ್ಲಿರುವ ಎಲ್ಲರಂತೆ ನಮ್ಮ 70 ಮಂದಿಗೂ ಸಮಾನವಾಗಿ ಬದುಕುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಗ್ರಾಮದ ಯುವಕ ಹೇಳಿದ್ದಾರೆ .

ಶ್ಯಾಗೋಟಿ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ನಿರ್ಮಾಣವಾಗಿದ್ದು, ಸಮಾನತೆ ನೀಡುವಂತೆ ದಲಿತ ಕುಟುಂಬಗಳು ಒತ್ತಾಯಿಸುತ್ತಿದ್ದಾರೆ. ತಹಶೀಲ್ದಾರ ನೇತೃತ್ವದಲ್ಲಿ ಶಾಂತಿ ಸಭೆ ನಡೆಸುವುದಾಗಿ ನಿರ್ಧಾರವಾಗಿದೆ. ಸದ್ಯ ಗ್ರಾಮದಲ್ಲಿ ಪೊಲೀಸರು ಬಿಡುಬಿಟ್ಟಿದ್ದಾರೆ. ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಠಿಣ ನಿಯಮಗಳನ್ನು ತರಲು ನಾವು ಯೋಚಿಸುತ್ತಿದ್ದೇವೆ ಎಂದು ಗದಗ ತಹಶೀಲ್ದಾರ್ ಹೇಳಿದ್ದಾರೆ

ತಹಶೀಲ್ದಾರ್ ಹಾಗೂ ಅಧಿಕಾರಿಗಳು ಈ ಹಿಂದೆ ದೇವಸ್ಥಾನದಲ್ಲಿ ಶಾಂತಿ ಸಭೆ ನಡೆಸಿದ್ದಾರೆ. ಮೇಲ್ಜಾತಿಯ ಜನರು ಸಭೆಯಲ್ಲಿ ನಿಯಮಗಳನ್ನು ಪಾಲಿಸಲು ಒಪ್ಪುತ್ತಾರೆ ಆದರೆ, ನಂತರ ಪಾಲಿಸುವುದಿಲ್ಲ. ಈ ಪದ್ಧತಿ ಹೊಸದಲ್ಲ, ದಶಕಗಳಿಂದ ಗುಟ್ಟಾಗಿ ನಡೆದುಕೊಂಡು ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

Leave a Comment

Your email address will not be published. Required fields are marked *

error: Content is protected !!